Advertisement

ಮೊಬೈಲ್‌ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಪಾಠ; ವಿದ್ಯಾಗಮ ಯೋಜನೆಯಡಿ ಸರ್ವೇ

01:52 AM Aug 13, 2020 | mahesh |

ಉಡುಪಿ/ಮಂಗಳೂರು: ವಿದ್ಯಾಗಮ ಯೋಜನೆಯಡಿಯಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌/ಆಫ್‌ಲೈನ್‌ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸರ್ವೇ ಕಾರ್ಯ ಆರಂಭವಾಗಿದೆ. ಸ್ಮಾರ್ಟ್‌ಫೋನ್‌ ಹೊಂದಿರುವ, ನೆಟ್‌ವರ್ಕ್‌ ಸಮಸ್ಯೆ ಇರುವ ಮತ್ತು ಮೊಬೈಲ್‌ ಸೌಲಭ್ಯವೇ ಇಲ್ಲದಿರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸರ್ವೇ ಕೆಲಸ ಮುಕ್ತಾಯಗೊಂಡು ಮನೆ ಪಾಠ ಆರಂಭಗೊಂಡಿದೆ.

Advertisement

ಕೊರೊನಾದಿಂದ ಇನ್ನೂ ಶಾಲೆಗಳು ಆರಂಭವಾಗದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಬಾರದೆಂಬ ಉದ್ದೇಶದಿಂದ ಸರಕಾರ ವಿದ್ಯಾಗಮ ಯೋಜನೆಯನ್ನು ಘೋಷಿಸಿದೆ. ಇದರಡಿ ಶಾಲಾರಂಭದವರೆಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಕಲಿಕೆಗೆ ಒತ್ತು ನೀಡುವುದು ಸರಕಾರದ ಉದ್ದೇಶವಾಗಿದೆ.

ಮೂರು ವಿಭಾಗ
ಸರ್ವೇಯಡಿ ಪಡೆದ ಸಂಖ್ಯೆಯನುಸಾರ ವಿದ್ಯಾರ್ಥಿಗಳನ್ನು ಇಂಟೆಲಿಜೆಂಟ್‌, ಬ್ರಿಲಿಯೆಂಟ್‌ ಮತ್ತು ಜೀನಿಯಸ್‌ ಎಂಬ ಮೂರು ವಿಭಾಗಗಳಾಗಿ ಪ್ರತ್ಯೇಕಿಸಲಾಗುತ್ತದೆ. ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಸೌಲಭ್ಯ ಹೊಂದಿರುವ ವಿದ್ಯಾರ್ಥಿಗಳು -ಇಂಟೆಲಿಜೆಂಟ್‌, ಕೀಪ್ಯಾಡ್‌ ಮೊಬೈಲ್‌ ಹೊಂದಿರುವವರು -ಬ್ರಿಲಿಯೆಂಟ್‌ ಮತ್ತು ಫೋನ್‌, ಇಂಟರ್ನೆಟ್‌ ಇಲ್ಲದವರು – ಜೀನಿಯಸ್‌ ವಿಭಾಗ ದಡಿ ಬರುತ್ತಾರೆ. ಬ್ರಿಲಿಯೆಂಟ್‌ ಮತ್ತು ಜೀನಿಯಸ್‌ ವಿಭಾಗದಡಿ ಬರುವ ಮಕ್ಕಳಿಗೆ ಶಿಕ್ಷಕರೇ ನೇರವಾಗಿ ಪಾಠ ಮಾಡಬೇಕಾಗುತ್ತದೆ.

ಶಿಕ್ಷಕರಿಗೆ ವಿದ್ಯಾರ್ಥಿಗಳ ಹಂಚಿಕೆ
ದ.ಕ. ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಒಟ್ಟು 3,22,426 ವಿದ್ಯಾರ್ಥಿಗಳು 1-10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಗ್ರಾಮೀಣ ಭಾಗದವರೇ ಆಗಿರುವುದರಿಂದ ಸ್ಮಾರ್ಟ್‌ಫೋನ್‌ನಂತಹ ಸೌಲಭ್ಯಗಳನ್ನು ಬಹುತೇಕ ವಿದ್ಯಾರ್ಥಿಗಳ ಹೆತ್ತವರು ಹೊಂದಿಲ್ಲ. ಮೊಬೈಲ್‌ ಇದ್ದರೂ ನೆಟ್‌ವರ್ಕ್‌ ಸಮಸ್ಯೆ ಇರುತ್ತದೆ. ಇಂತಹ ವಿದ್ಯಾರ್ಥಿಗಳನ್ನು ವಿಭಾಗಿಸಿ ಓರ್ವ ಶಿಕ್ಷಕನಿಗೆ 10-25 ವಿದ್ಯಾರ್ಥಿಗಳಂತೆ ಹಂಚಿಕೆ ಮಾಡಲಾಗುತ್ತದೆ.

ಉಡುಪಿ ಸರ್ವೇ ಮುಕ್ತಾಯ
ಉಡುಪಿ ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಒಟ್ಟು 1.60 ವಿದ್ಯಾರ್ಥಿಗಳು 1-10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಮೊಬೈಲ್‌ ವ್ಯವಸ್ಥೆ ಇರುವವರು 1,49,088, ಸ್ಮಾರ್ಟ್‌ಫೋನ್‌ 1,24,876, ಇಂಟರ್‌ನೆಟ್‌ 1,14,976, ಟಿವಿ /ರೇಡಿಯೋ ವ್ಯವಸ್ಥೆ ಇರುವವರು 1,44,822, ಇ-ಮೇಲ್‌ 10,512 ವಿದ್ಯಾರ್ಥಿಗಳಲ್ಲಿ ವ್ಯವಸ್ಥೆ ಇದೆ.

Advertisement

ಉಡುಪಿ 1,224 ಶಾಲೆಗಳು
ಜಿಲ್ಲೆಯಲ್ಲಿ 1,224 ಶಾಲೆಗಳಿದ್ದು 1ರಿಂದ 10ನೇ ತರಗತಿ ವರೆಗೆ 1.60 ಲಕ್ಷ ವಿದ್ಯಾರ್ಥಿ ಗಳಿದ್ದಾರೆ. ಆದರೆ ಎಲ್ಲರ ಮನೆಯಲ್ಲಿ ಮೊಬೈಲ್‌, ಟಿವಿ ಮತ್ತಿತರ ವ್ಯವಸ್ಥೆಗಳಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು 20 ವಿದ್ಯಾರ್ಥಿಗಳನ್ನು ಸೇರಿಸಿ ಮನೆ, ದೇವಾಲಯ, ಸಮುದಾಯ ಭವನ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಮಾಡುತ್ತಿದ್ದಾರೆ.

ಸರ್ವೇ ಬಳಿಕ ನಿಖರ ಸಂಖ್ಯೆ
ಸದ್ಯ ವಿದ್ಯಾರ್ಥಿಗಳ ಸರ್ವೇಕಾರ್ಯ ನಡೆಯುತ್ತಿದೆ. ಇಂಟರ್ನೆಟ್‌ ಸಂಪರ್ಕ ಇಲ್ಲದ ವಿದ್ಯಾರ್ಥಿಗಳ ನಿಖರ ಸಂಖ್ಯೆ ಲಭ್ಯವಾಗಲು ಕೆಲವು ದಿನಗಳು ಬೇಕಾಗುತ್ತದೆ. ಸರ್ವೇ ಪೂರ್ಣವಾದ ಬಳಿಕ ನಿಖರ ಸಂಖ್ಯೆ ದೊರಕಲಿದ್ದು, ಆ ಬಳಿಕವಷ್ಟೇ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರಿಗೆ ಹಂಚಿಕೆ ಮಾಡಲಾಗುತ್ತದೆ.
ಮಲ್ಲೇಸ್ವಾಮಿ, ದ.ಕ. ಡಿಡಿಪಿಐ

ಮನೆ ಪಾಠ ಪ್ರಾರಂಭ
ಜಿಲ್ಲೆಯಲ್ಲಿ ಟಿವಿ, ಮೊಬೈಲ್‌, ಇಂಟರ್‌ನೆಟ್‌ ವ್ಯವಸ್ಥೆ ಇರುವ ಮಕ್ಕಳ ಬಗ್ಗೆ ಮಾಹಿತಿ ಪಟ್ಟಿ ಮಾಡಲಾಗಿದೆ. ಈ ವ್ಯವಸ್ಥೆಗಳು ಇಲ್ಲದ ಮಕ್ಕಳಿಗೂ ಶಿಕ್ಷಣ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಕೋವಿಡ್‌ ನಿಯಮಾವಳಿ ಅನ್ವಯ ತರಗತಿ ತೆಗೆದುಕೊಳ್ಳುತ್ತಿದ್ದಾರೆ.
– ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next