Advertisement

ಸಾಮಾನ್ಯರಿಗೂ ನೃತ್ಯ ಕಲಿಸಿ: ಉಮಾಶ್ರೀ

12:35 PM Jan 11, 2017 | Team Udayavani |

ಬೆಂಗಳೂರು: ನೃತ್ಯ ಕಲೆಯನ್ನು ಬಡವ ಮತ್ತು ಸಾಮಾನ್ಯ ಜನರಿಗೂ ತಲುಪಿಸಬೇಕಿದೆ. ಹಿರಿಯ ಕಲಾವಿದರು ಆಸಕ್ತರಿಗೆ ಈ ಕಲೆಯನ್ನು ಕಲಿಸಲು ಮುಂದಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸಲಹೆ ನೀಡಿದ್ದಾರೆ. 

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಆಯೋಜಿಸಿದ್ದ 2016-17ನೇ ಸಾಲಿನ “ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಸಾಧನೆಗೈದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ಸಂಗೀತ, ನೃತ್ಯ ಕಲಿಯುವವರ ಕುರಿತು ಜನರಲ್ಲಿ ಅಪರಾಧಿಕ ಭಾವನೆಯಿತು. ಕ್ರಮೇಣ ಮಾಧ್ಯಮಗಳ ಪ್ರಭಾವದಿಂದ ಕಲೆಗೆ ಮಹತ್ವ ಬಂದಿದ್ದು, ಹೊಸ ಪ್ರತಿಭೆಗಳು ಉದಯವಾಗುತ್ತಿವೆ. ಸಂಗೀತ, ನೃತ್ಯ ಕಲೆ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಇದ್ದರೂ, ಸೂಕ್ತ ತರಬೇತುದಾರರು, ತಜ್ಞರ ಕೊರತೆ ಇದೆ.

ಕ್ರಮಬದ್ಧವಾಗಿ ಇತರರಿಗೂ ಕಲಿಸುವ ಮೂಲಕ ಕಲೆಯನ್ನು ವೃತ್ತಿಯನ್ನಾಗಿಸಬೇಕಿದೆ ಎಂದು ಹೇಳಿದರು.  ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಕಾಡೆಮಿ ನೃತ್ಯ ಕಲಿಯುವ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತಿದೆ. ನೃತ್ಯ, ಸಂಗೀತ ಶ್ರೀಮಂತರಿಗೆ ಮಾತ್ರ ಮೀಸಲು ಎಂಬ ಭಾವನೆ ಈಗಿಲ್ಲ. ಬಡವರು, ಸಾಮಾನ್ಯ ಪ್ರತಿಭಾನ್ವಿತರು ಕೂಡ ಈ ಕಲೆಯನ್ನು ಕಲಿಯಲು ಅವಕಾಶವಿದೆ.

ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಂತೆಯೇ ಹಿರಿಯ ಕಲಾವಿದರು ಇತರರಿಗೆ ತಮ್ಮ ಸಾಧನೆಯನ್ನು ಧಾರೆಯೆರೆದು ಕಲೆ ಎಂದಿಗೂ ಅಳಿಸಿ ಹೋಗದಂತೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌ ಮತ್ತಿತರರು ಇದ್ದರು. 

Advertisement

ಪ್ರಶಸ್ತಿ ಪ್ರದಾನ: 2016-17ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಕಲಾವಿದರಾದ ಪಂಡಿತ ರವೀಂದ್ರ ಯಾವಗಲ್‌ (ಹಿಂದೂಸ್ತಾನಿ ಸಂಗೀತ), ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ (ಗಮಕ) ಅವರಿಗೆ ನೀಡಲಾಯಿತು.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಕಲಾವಿದರಾದ ಪರಮೇಶ್ವರ್‌ ಹೆಗಡೆ, ಬಿ.ಎನ್‌. ಸುಕುಮಾರ್‌ ಬಾಬು, ಜಿ.ಎ. ಕುಲಕರ್ಣಿ, ವೀರೇಶ್‌ ಕಿತ್ತೂರು, ಆಮಯ್ಯ ಎಲ್‌. ಮಂಠ, ಭಾರತಿ ಎಂ.ಭಟ್‌, ಶೈಲಜಾ ಚಂದ್ರಶೇಖರ್‌, ರಾಮುಲು ಗಾದಗಿ, ಎಸ್‌.ಕೆ. ಹನುಮಂತದಾಸ್‌, ಸಿ.ಎಸ್‌. ನಾಗತತ್ನಮ್ಮ, ಸತ್ಯ ನಾರಾಯಣರಾಜು, ಎಸ್‌. ಸೂರ್ಯನಾರಾಯಣಾಚಾರ್‌, ಎಂ ಗುರುರಾಜ್‌, ಡಾ.ಕೆ. ವರದರಂಗನ್‌, ಡಾ. ಶೀಲಾ ಶ್ರೀಧರ್‌, ಪೂರ್ಣಿಮಾ ಅಶೋಕ್‌ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಕಾಡೆಮಿ ನೃತ್ಯ ಕಲಿಯುವ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ನೃತ್ಯ, ಸಂಗೀತ ಶ್ರೀಮಂತರಿಗೆ ಮಾತ್ರ ಮೀಸಲು ಎಂಬ ಭಾವನೆ ಈಗಿಲ್ಲ. ಬಡವರು, ಸಾಮಾನ್ಯ ಪ್ರತಿಭಾನ್ವಿತರು ಕೂಡ ಈ ಕಲೆಯನ್ನು ಕಲಿಯಲು ಅವಕಾಶವಿದೆ.
-ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next