■ ಉದಯವಾಣಿ ಸಮಾಚಾರ
ಹಾವೇರಿ: ಜೀವನದಲ್ಲಿ ಹಣ, ಸಂಪತ್ತು ಗಳಿಸಿದರೆ ಅದು ನಮ್ಮ ಜೊತೆಗೆ ಬರುವುದಿಲ್ಲ. ನಮ್ಮ ಜೊತೆಗೆ ಬರುವುದು ವಿದ್ಯೆ, ದಾನ, ಧರ್ಮ, ನಮ್ಮ ಸಂಸ್ಕೃತಿ ಮಾತ್ರ. ಆದ್ದರಿಂದ ಸಂಪತ್ತಿಗೆ ಮರುಳಾಗದೇ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಿ ಎಂದು ಅಂಬಿಗರ ಚೌಡಯ್ಯನವರ ಪೀಠದ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ನೀಲನಗೌಡ್ರ ಬಡಾವಣೆಯಲ್ಲಿ ರವಿವಾರ ತಾಲೂಕಿನ ಗಂಗಾಮತ ಸಮಾಜ ನೌಕರರ ಸಂಘದ ವತಿಯಿಂದ ನಿರ್ಮಿಸಿದ
ಗಂಗಾಪರಮೇಶ್ವರಿ, ಗಣಪತಿ ಹಾಗೂ ಬನ್ನಿ ಮಹಾಂಕಾಳಿ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದರು.
ದೇವರುಗಳಲ್ಲಿ ಭಕ್ತಿ ಭಾವದಿಂದ ಗುರುಹಿರಿಯರಲ್ಲಿ ಗೌರವದಿಂದ ಸಮಾಜದಲ್ಲಿ ಉತ್ತಮ ಸೇವಕನಂತೆ ನಾವು ಜೀವನದಲ್ಲಿ ಉತ್ತಮ ನಡುವಳಿಕೆ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಣ ಪ್ರತಿಷ್ಠಾಪನೆಗೂ ಹಿಂದಿನ ದಿನ ಮಹಿಳೆಯರ ಪೂರ್ಣಕುಂಭ ಮೇಳ, ಡೊಳ್ಳು ಕುಣಿತ, ಭಜನೆ ಮೂಲಕ ಮೂರ್ತಿಗಳ ಮೆರವಣಿಗೆ ನಡೆಯಿತು. ರವಿವಾರ ಬೆಳಗ್ಗೆ ಪ್ರತಿಷ್ಠಾಪನೆ ವೇಳೆ ಹೋಮ, ಹವನ ಪೂಜೆ ನೆರವೇರಿಸಲಾಯಿತು.
ನಂತರ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹಾಗೂ ನರಸೀಪುರ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಇದೇ ಸಂದರ್ಭದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸಂಜಯ ಸುಣಗಾರ,ಶಂಕರ್ ಸುತಾರ, ನಾಗಪ್ಪ ಶೇಷಗಿರಿ, ಆರ್.ಎನ್. ಕರ್ಜಗಿ, ಎಚ್.ಎಫ್. ದಂಡಿನ, ಮನೋಹರ ಬಾರ್ಕಿ, ಎಂ.ಬಿ. ಅಂಬಿಗೇರ, ಬಾಬು ಸುಣಗಾರ, ನಾಗರಾಜ, ಮಂಜುನಾಥ ಬೋವಿ, ನಾಗರಾಜ ನಡುವಿನಮಠ ಇತರರಿದ್ದರು.