ಬಸವನಬಾಗೇವಾಡಿ: ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡಿದರೆ ಸಾಲದು, ಅದರ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಸಂಸ್ಕಾರ, ಸಂಸ್ಕೃತಿ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ ಹೇಳಿದರು.
ಪಟ್ಟಣದ ಬಸವಜನ್ಮ ಸ್ಮಾರಕದಲ್ಲಿ ಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯ 2021-22ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸತ್ಯದ ಅರಿವು ಮೂಡಿಸುವ ಕೆಲಸವಾಗಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಸಂಸ್ಕಾರ ಸಂಸ್ಕೃತಿ ನೀಡುವ ಕೆಲಸವಾಗಬೇಕು. ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಕಟ್ಟಡಕ್ಕೆ ತಳಪಾಯ ಎಷ್ಟು ಮುಖ್ಯ ಹಾಗೇ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮುಖ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಜಯಪುರದ ಜಗಜ್ಯೋತಿ ಬಸವೇಶ್ವರ ಬಿಇಎಡ್ ಕಾಲೇಜಿನ ಪ್ರಾಂಶುಪಾಲ ಡಾ| ಶಿವಾನಂದ ರಜಪೂತ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬೇಕಾಗಿರುವುದು ಉತ್ತಮ ಗುಣಮಟ್ಟದ ಶಿಕ್ಷಣ, ಶಿಕ್ಷಣದ ಭದ್ರ ಬುನಾದಿಯೆಂದರೆ ಅದು ತಳಹಂತದ ಶಿಕ್ಷಣವಾಗಿದೆ. ಆದ್ದರಿಂದ ತಳ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿವ ಕೆಲಸವಾಗಬೇಕು ಎಂದು ಹೇಳಿದರು.
ಬಿಜೆಪಿ ಮಹಿಳಾ ಮಂಡಳ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಪ್ರಭಾಕರ ಖೇಡದ, ಕರುನಾಡು ಸಾಹಿತ್ಯ ಪರಿಷತ್ ಅಧ್ಯಕ್ಷ ಶಾಂತಾ ಚೌರಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸು ಮಿಣಜಗಿ, ಪತ್ರಕರ್ತರಾದ ಪ್ರಕಾಶ ಬೆಣ್ಣೂರ, ನಾಗೇಶ ನಾಗೂರ ಸೇರಿದಂತೆ ಅನೇಕರು ಇದ್ದರು. ಶಿಕ್ಷಕ ಎನ್.ಎನ್. ಅಂಗಡಿ ಸ್ವಾಗತಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.