ಜೇವರ್ಗಿ: ನೆಲೆ ಇಲ್ಲದ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳುವ ಬಿಜೆಪಿ-ಕಾಂಗ್ರೆಸ್ ರಾಜ್ಯದಲ್ಲಿ ಸಾವಿರಾರು ಜನ ರೈತರು ಆತ್ಮಹತ್ಯೆ ಮಾಡಿಕೊಂಡರು ಕ್ಯಾರೆ ಎನ್ನುತ್ತಿಲ್ಲ. ಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಈ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.
ಪಟ್ಟಣದ ಮಹಿಬೂಬ್ ಪಂಕ್ಷನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜೆಡಿಎಸ್ ತಾಲೂಕು ಅಧ್ಯಕ್ಷರ ಪದಗ್ರಹಣ, ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಸುಳ್ಳು ಭರವಸೆ ನೀಡಿ ಮತದಾರರನ್ನು ವಂಚಿಸುತ್ತಿದ್ದಾರೆ.
ಕಳೆದ 2-3 ವರ್ಷಗಳಲ್ಲಿ ಭೀಕರ ಬರದಿಂದ ರಾಜ್ಯದಲ್ಲಿ 1500ಕ್ಕೂ ಹೆಚ್ಚು ಜನ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರು ಈ ಸರ್ಕಾರಗಳು ರೈತರ ನೆರವಿಗೆ ಧಾವಿಸಲಿಲ್ಲ. ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುತ್ತೇವೆ ಎಂದು ಹೇಳುತ್ತಿರುವ ಸರ್ಕಾರದ ಮಾತು ಯಾರು ನಂಬಬೇಡಿ. ರಾಜ್ಯದಲ್ಲಿ ಜೆಡಿಎಸ್ ಅಧಿ ಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಅಸಲು ಮತ್ತು ಬಡ್ಡಿ ಮನ್ನಾ ಮಾಡಲಾಗುವುದು.
ಹೈ-ಕ ಭಾಗದಲ್ಲಿ ಜೆಡಿಎಸ್ ಅತಿ ಹೆಚ್ಚಿನ ಸೀಟುಗಳು ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬಂದು ಮತ್ತೂಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಉತ್ತಮ ವಾತಾವರಣವಿದೆ. ಈ ತಿಂಗಳ ಕೊನೆ ವಾರದಲ್ಲಿ ಕುಮಾರಸ್ವಾಮಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.
ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಭಗವಂತ್ರಾಯಗೌಡ ಅಂಕಲಗಿ ಸೇರಿದಂತೆ ಅನೇಕ ಜನ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಮುಖ್ಯ ಅತಿಥಿಗಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ, ತಾಲೂಕು ಅಧ್ಯಕ್ಷ ಬಸವರಾಜ ಖಾನಗೌಡ ಸುಂಬಡ, ಮುಖಂಡರಾದ ನಾಸೀರ್ ಹುಸೇನ್, ಡಾ| ಡಿ.ಜಿ. ಸಾಗರ, ದೇವೇಗೌಡ ತೆಲ್ಲೂರ, ಶೇಖ್ ಫರೀದ್ ಮಳ್ಳಿಕರ್, ಎಸ್.ಕೆ. ಹೇರೂರ, ದತ್ತರಾಜ ಕಿನ್ನೂರ, ಎ.ಬಿ. ಹಿರೇಮಠ, ಶಿವಾನಂದ ದ್ಯಾಮಗೊಂಡ, ಶಂಕರ ಕಟ್ಟಿ ಸಂಗಾವಿ, ಪ್ರಭು ಜಾಧವ, ಸಮಾಧಾನ ಪೂಜಾರಿ, ಗೊಲ್ಲಾಳಪ್ಪ ಪೂಜಾರಿ, ಸದಾನಂದ ಪಾಟೀಲ, ಸಿದ್ದು ಮಾವನೂರ, ವಿಜಯಕುಮಾರ ನರಿಬೋಳ ಸೇರಿದಂತೆ ನೂರಾರು ಜನ ಜೆಡಿಎಸ್ ಕಾರ್ಯಕರ್ತರು ಇದ್ದರು.