ಬೆಂಗಳೂರು: ರಸ್ತೆ ವಿಸ್ತರಣೆಗಾಗಿ ಈಗಾಗಲೇ ಗುರುತಿಸಿರುವ ಜಾಗಗಳ ಮಾಲಿಕರಿಗೆ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಅನ್ನು ಬಿಬಿಎಂಪಿಯಿಂದಲೇ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರದೊಂದಿಗೆ ಆಯುಕ್ತರು ಚರ್ಚೆ ನಡೆಸಬೇಕು ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು.
ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ವಿಷಯ ಪ್ರಸ್ತಾಪಿಸಿ, 216 ರಸ್ತೆಗಳ ವಿಸ್ತರಣೆಗೆ ಜಾಗ ಗುರುತಿಸಲಾಗಿದೆ. ಆದರೆ, ಜಾಗಗಳ ಮಾಲಿಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ಡಿಆರ್‌ಸಿ ನೀಡುತ್ತಿಲ್ಲ. ಇದರಿಂದ ಜಾಗವನ್ನು ಮಾರಾಟ ಮಾಡಲಿಕ್ಕೂ ಆಗದು; ಅಭಿವೃದ್ಧಿಪಡಿಸಲಿಕ್ಕೂ ಆಗದೆ ಮಾಲಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಗಮನಸೆಳೆದರು.
ಇದಕ್ಕೆ ದನಿಗೂಡಿಸಿದ ಮಾಜಿ ಮೇಯರ್ ಬಿ.ಎಸ್. ಸತ್ಯನಾರಾಯಣ, ಬಿಡಿಎಯಿಂದ ನೀಡಲಾಗುವ ಟಿಡಿಆರ್ ಅನ್ನು ಪುನಃ ಬಿಬಿಎಂಪಿಯಿಂದಲೇ ನೀಡುವಂತಾಗಬೇಕು. ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರು ಕೋರ್ ಏರಿಯಾದಲ್ಲಿ ಬರುವ ನೂರು ವಾರ್ಡ್‌ಗಳಲ್ಲಿ ರಸ್ತೆ ವಿಸ್ತರಣೆಗೆ ಜಾಗ ಗುರುತಿಸಲಾಗಿದೆ. ಆದರೆ, ತದನಂತರದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಬಗ್ಗೆಯೂ ಮರುಪರಿಶೀಲನೆ ಮಾಡಬೇಕು ಎಂದು ಮಂಜುನಾಥ್ ಸೇರಿದಂತೆ ಮತ್ತಿತರ ಸದಸ್ಯರು ಒತ್ತಾಯಿಸಿದರು.
ದೂಮಪಾನ – ನಿಯಮ ಉಲ್ಲಂಘನೆ: ಇದಕ್ಕೂ ಮುನ್ನ ತಂಬಾಕು ಸೇವನೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಮನವರಿಕೆ ಮಾಡಿದ ತಂಬಾಕು ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಿಶಾಲ್‌ರಾವ್, ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್‌ಗಳಲ್ಲಿ ನಿಯಮ ಉಲ್ಲಂ ಸಿ ದೂಮಪಾನಕ್ಕೆ ಅವಕಾಶ ನೀಡಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ದಶಕದ ಹಿಂದೆ ಬಂದ ಸುನಾಮಿಯಿಂದ 12 ಲಕ್ಷ ಜನ ಸಾವನ್ನಪ್ಪಿದ್ದರು. ಆದರೆ, ತಂಬಾಕು ಸೇವನೆಯಿಂದ ಪ್ರತಿ ವರ್ಷ 10 ಲಕ್ಷ ಜನ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗಾಗಿಯೇ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ. ಖರ್ಚಾಗುತ್ತಿದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವವರಿಗೂ ಈ ರೋಗ ಹರಡುತ್ತಿದೆ. ಆದ್ದರಿಂದ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್‌ರಾಜ್, ಪಾಲಿಕೆಯ ಆರೋಗ್ಯಾಧಿಕಾರಿಗಳಿಂದ ನಗರದ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಇದಕ್ಕೆ ಕಡಿವಾಣ ಹಾಕಲಾಗುವುದು ಎಂದರು.