ವಿಶಾಖಪಟ್ಟಣ:ಆಂಧ್ರದಲ್ಲಿ ಭಾನುವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಶಾಸಕ ಮತ್ತು ಮಾಜಿ ಶಾಸಕರೊಬ್ಬರನ್ನು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಅರಾಕು ಕಣಿವೆ ಪ್ರದೇಶದ ದಂಬ್ರಿಗುಡಾ ಮಂಡಲದಲ್ಲಿ ಅರಾಕು ಕ್ಷೇತ್ರದ ಶಾಸಕ ಕಿಡಾರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮ ಅವರ ಕಾರನ್ನ ಅಡ್ಡಗಟ್ಟಿದ 50 ಕ್ಕೂ ಹೆಚ್ಚು ನಕ್ಸಲರು ಗುಂಡಿನ ಮಳೆ ಗರೆದು ಪರಾರಿಯಾಗಿದ್ದಾರೆ.
ದಾಳಿಯ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಶವಗಳು ರಕ್ತದ ನದಿಯಲ್ಲಿ ಮುಳುಗಿರುವ ಭೀಕರ ದೃಶ್ಯ ಕಂಡು ಬಂದಿದೆ.
ಸರ್ವೇಶ್ವರ ರಾವ್ ಅವರು ವೈಎಸ್‌ಆರ್‌ಪಿ ಕಾಂಗ್ರೆಸ್‌ನಿಂದ ಟಿಡಿಪಿಯ ಸೋಮ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಟಿಡಿಪಿಗೆ ಸೇರ್ಪಡೆಯಾಗಿದ್ದರು. ರಾವ್ ಅವರು ನಕ್ಸಲರ ಹಿಟ್ ಲಿಸ್ಟ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ನಕ್ಸಲ್ ನಿಗ್ರಹ ಪಡೆ ದೌಡಾಯಿಸಿದೆ.