Advertisement

ಟಿಡಿಪಿ ಸಚಿವರ ಪದತ್ಯಾಗ

08:15 AM Mar 09, 2018 | Team Udayavani |

ನವ ದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರ ಸಂಬಂಧ ಬಿಜೆಪಿ ಮತ್ತು ಟಿಡಿಪಿ ನಡುವಿನ ಮುನಿಸು ಗುರುವಾರವೂ ಮುಂದುವರಿದಿದ್ದು, ಕೇಂದ್ರ ಸಂಪುಟದಿಂದ ಚಂದ್ರ ಬಾಬು ನಾಯ್ಡು ಅವರ ಪಿಡಿಪಿಯ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಸ್ವತಃ ಪ್ರಧಾನಿ ಮೋದಿ ಅವರೇ ನಾಯ್ಡು ಜತೆ 10 ನಿಮಿಷಗಳ ಕಾಲ ದೂರವಾಣಿ ಮಾತುಕತೆ ನಡೆಸಿದರೂ ಫ‌ಲಪ್ರದವಾಗಿಲ್ಲ. 

Advertisement

ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಪ್ರಧಾನಿ ಭೇಟಿ ಮಾಡಿದ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಣಪತಿ ರಾಜು ಹಾಗೂ ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ ಸಹಾಯಕ ಸಚಿವ ವೈ.ಎ ಸ್‌. ಚೌಧರಿ ರಾಜೀನಾಮೆ ಸಲ್ಲಿಸಿದ್ದಾರೆ. ಆಂಧ್ರದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಈ ರಾಜೀನಾಮೆ ಸಲ್ಲಿಸಲಾಗಿದೆ ಎಂದು ಪ್ರಧಾನಿ ಮೋದಿ ಅವರಿಗೆ ಹೇಳಿಯೇ ತ್ಯಾಗ ಪತ್ರ ನೀಡಿ ಬಂದಿದ್ದಾರೆ. 

ನಂತರ ಮಾತನಾಡಿದ ವೈ.ಎ ಸ್‌. ಚೌಧರಿ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣದಿಂದಾಗಿ ಅನಿವಾರ್ಯವಾಗಿ ಸಂಪುಟದಿಂದ ಹೊರಗೆ ಬರಬೇಕಾಯಿತು ಎಂದರು. ಈ ಬೆಳವಣಿಗೆಯನ್ನು ವಿವಾಹ ಮತ್ತು ವಿಚ್ಛೇದನಕ್ಕೆ ಹೋಲಿಕೆ ಮಾಡಿದ ಅವರು, ಎಲ್ಲರಿಗೂ ವಿವಾಹ ಖುಷಿ ತರುತ್ತದೆ, ಆದರೆ, ವಿಚ್ಛೇದನವನ್ನು ಯಾರೂ ಸಂತಸದಿಂದ ಆಲಿಂಗನ ಮಾಡಿಕೊಳ್ಳಲ್ಲ. ದುರದೃಷ್ಟವಶಾತ್‌, ಇಂದು ವಿಚ್ಛೇದನಕ್ಕೆ ಶರಣಾಗುವ ಕಾಲ ಬಂದಿದೆ ಎಂದರು. ಜತೆಗೆ ಸಹಕಾರದ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್‌ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಟಿಡಿಪಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಭರವಸೆಯನ್ನೂ ನೆನಪಿಸಿದ್ದಾರೆ. 

ಸದ್ಯ ಟಿಡಿಪಿ ಲೋಕ ಸಭೆಯಲ್ಲಿ 16 ಮತ್ತು ರಾಜ್ಯ ಸಭೆಯಲ್ಲಿ ಆರು ಸದಸ್ಯರನ್ನು ಒಳಗೊಂಡಿದ್ದು, ಎನ್‌ಡಿಎಗೆ ನೀಡಿರುವ ಬೆಂಬಲ ಮುಂದುವರಿಸಿಕೊಂಡು ಹೋಗಲಿದ್ದೇವೆ ಎಂದು ಟಿಡಿಪಿ ನಾಯಕರು ಹೇಳಿದ್ದಾರೆ. 

ನಾಯ್ಡು ಜತೆ ಮೋದಿ 10 ನಿಮಿಷ ಚರ್ಚೆ
ಈ ಬೆಳವಣಿಗೆಗಳ ಮಧ್ಯೆಯೇ ಪ್ರಧಾನಿ ಮೋದಿ ಅವರು ಚಂದ್ರ ಬಾಬು ನಾಯ್ಡು ಅವರಿಗೆ ದೂರವಾಣಿ ಕರೆ ಮಾಡಿ 10 ನಿಮಿಷ ಗಳ ಕಾಲ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮನವೊಲಿಕೆಯನ್ನೂ ನಡೆಸಿದ್ದಾರೆ. ಆದರೆ, ಮೋದಿ ಅವರು ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಬಗ್ಗೆ ಭರವಸೆ ನೀಡಿಲ್ಲ. ಹೀಗಾಗಿ ಮಾತುಕತೆ ಮುರಿದು ಬಿದ್ದಿದೆ. 

Advertisement

ಬಿಜೆಪಿ ಸಚಿವರ ರಾಜೀನಾಮೆ
ಇನ್ನು ದೋಸ್ತಿ ಕಾಳಗದ ನಡುವೆಯೇ ಆಂಧ್ರ ಸಂಪುಟದಲ್ಲಿದ್ದ ಬಿಜೆಪಿಯ ಇಬ್ಬರು ಸಚಿವರು ಗುರುವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸೂಚನೆ ಅನ್ವಯ ರಾಜೀನಾಮೆ ನೀಡಿದ್ದಾರೆ.

ವೈಎಸ್‌ ಆರ್‌ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳ ಒತ್ತಡ ಮತ್ತು ವಿಶೇಷ ಸ್ಥಾನ ಮಾನದ ಕುರಿತ ಅಪಪ್ರಚಾರದಿಂದಾಗಿ ಟಿಡಿ ಪಿಗೆ ಸೇರಿದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. 
ಅನಂತ್‌ ಕುಮಾರ್‌,  ಸಂಸದೀಯ ವ್ಯವಹಾರಗಳ ಸಚಿವ

ವಿಶೇಷ ಸ್ಥಾನ ಮಾನಕ್ಕೆ ಆಗ್ರಹಿಸಿ ನಾಯ್ಡು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ನಿತೀಶ್‌ ಕುಮಾರ್‌ ಕೂಡ ಇಂಥದ್ದೇ ಕಠಿಣ ನಿರ್ಧಾರಕ್ಕೆ ಮುಂದಾಗಬೇಕು. ಬಿಹಾರಕ್ಕೆ ವಿಶೇಷ ಸ್ಥಾನ ಮಾನಕ್ಕೆ ಒತ್ತಾಯಿಸಬೇಕು.
ಮನೋಜ್‌ ಝಾ, ಆರ್‌ ಜೆಡಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next