ಬಾಳೆಹೊನ್ನೂರು : ಹುಲ್ಲುಗಾವಲಿನಿಂದ ಕೂಡಿದ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಹಾಗೂ ಜಾನುವಾರುಗಳು ಸ್ವತ್ಛಂದವಾಗಿ ಜೀವಿಸುತ್ತಿದ್ದು ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮೀಸಲು ಅರಣ್ಯ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರು
ಬರೆದಿದ್ದಾರೆ ಎಂಬ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿರುವ ಬಗ್ಗೆ ಶಾಸಕ ರಾಜೇಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರಕಾರ ಇದ್ದ ಸಂದರ್ಭದಲ್ಲಿ ಪತ್ರ ಬರೆದಿದ್ದು ನಿಜ. ನಾನೊಬ್ಬನೇ ಈ ಪತ್ರವನ್ನು ಬರೆದಿಲ್ಲ. ಈ ಸಂದರ್ಭದಲ್ಲಿ ಸಿ.ಟಿ. ರವಿ, ಭೋಜೇಗೌಡರು ಮತ್ತು ಜಿಲ್ಲೆಯ ರಾಜಕಾರಣಿಗಳು ಸೇರಿ ಈ ಪತ್ರವನ್ನು ಬರೆದಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಮೀಸಲು ಅರಣ್ಯ ಬೇಡ. ಹುಲ್ಲುಗಾವಲಿನ ಪ್ರದೇಶದಲ್ಲಿ ಮಾಡಿ, ಅರಣ್ಯ ಇಲಾಖೆಯವರು ಅದರ ರಕ್ಷಣೆ ಮಾಡಲಿ ಎಂಬುದು ಉದ್ದೇಶವಾಗಿದೆ. ಹುಲಿ ಯೋಜನೆ ಜಾರಿ ಮಾಡಿ ಎಂದು ನಾನು ಹೇಳಿಲ್ಲ, ಕಂದಾಯ ಇಲಾಖೆಯವರು ತಮ್ಮ ಭೂಮಿಯನ್ನು ಕಾಪಾಡಿಕೊಳ್ಳುವುದಿಲ್ಲ. ಅರಣ್ಯ ಇಲಾಖೆಯವರಾದರೂ ಭೂಮಿಯನ್ನು ಕಾಪಾಡಿಕೊಳ್ಳಲಿ ಎಂದು ಪತ್ರವನ್ನು ಬರೆದಿದ್ದು ಎಂದು ಸಮರ್ಥನೆ ಮಾಡಿಕೊಂಡರು.
ನಗರ ಪ್ರದೇಶಕ್ಕೆ ಜಾರಿಗೊಳಿಸಿದ್ದ ಭೂ ಕಬಳಿಕೆ ನಿಷೇದ ಖಾಯಿದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದು, ತಲೆತಲಾಂತರದಿಂದ ಕೃಷಿ ಜೀವನ ನಡೆಸುತಿದ್ದವರಿಗೆ ಇದರಿಂದ ಭಾರೀ ಅನ್ಯಾಯವಾಗಲಿದೆ. ವನ್ಯಜೀವಿ ವಿಭಾಗದ ಗಡಿಯನ್ನು ವಿಸ್ತರಣೆ ಮಾಡಬಾರದು. ಮೀಸಲು ಅರಣ್ಯಕ್ಕೆ ಯಾವುದೇ ಸೂಕ್ಷ್ಮಜೀವಿ ವೈವಿಧ್ಯ ತಾಣವೆಂದು ಬಫರ್ ಜೋನ್ ಮಾಡುವುದು ಬೇಡವೆಂಬುದು ನಮ್ಮ ದೃಢ ನಿರ್ದಾರವಾಗಿದೆ ಎಂದರು.
ಲಾಕ್ ಡೌನ್ ವೇಳೆಯಲ್ಲಿ ನಕಲಿ ಆಕ್ಷೇಪಣಾ ಪತ್ರಗಳನ್ನು ಹಸಿರು ಪೀಠಕ್ಕೆ ಸಲ್ಲಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಮಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸ್ವಾಗತಾರ್ಹ. ಸರಕಾರ ಕೂಡಲೇ ಸೆಟ್ಲಮೆಂಟ್ ಅಧಿಕಾರಿಯನ್ನು ನೇಮಿಸಿ ತಾಲೂಕು, ಗ್ರಾಪಂ ವ್ಯಾಪ್ತಿ ಯಲ್ಲಿರೈತರ ಸಮಸ್ಯೆ ಬಗ್ಗೆ ಆಕ್ಷೇಪಣಾ ವರದಿ ಪಡೆದುಕೊಳ್ಳುವಂತೆ ತುರ್ತಾಗಿ ಆದೇಶ ಮಾಡಬೇಕೆಂದು ಒತ್ತಾಯಿಸಿದರು.
ಬಾಳೆಹೊನ್ನೂರು ಸುತ್ತಮುತ್ತ ಗಾಂಜಾ ಹಾಗೂ ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು ಗಾಂಜಾ ಮಾರಾಟದ ಬಗ್ಗೆ ಹಾಗೂ ಗೋ ಹತ್ಯೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಂ.ಎಸ್. ಚೆನ್ನಕೇಶವ ಗೌಡ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ರಾಪಂ ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಬಿ.ಸಿ. ಸಂತೋಷ್ ಕುಮಾರ್ ಸುದ್ದಿಗೋಷ್ಟಿಯಲ್ಲಿದ್ದರು.