Advertisement

‘ಅನುದಾನರಹಿತ ಶಿಕ್ಷಕರತ್ತ ಸರ್ಕಾರ’ ಕಾರ್ಯಕ್ರಮದಡಿ ಟಿಬಿಎಫ್ ಸೌಲಭ್ಯ:  ಸುರೇಶ್ ಕುಮಾರ್

03:01 PM Apr 20, 2021 | Team Udayavani |

ಬೆಂಗಳೂರು: ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು “ಅನುದಾನರಹಿತ ಶಿಕ್ಷಕರತ್ತ ಸರ್ಕಾರ ಎಂಬ ಧ್ಯೇಯದೊಂದಿಗೆ ನಿಧಿಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದೆಂದು   ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕಕರ ಕಲ್ಯಾಣ ಪ್ರತಿಷ್ಠಾನ ಈ ಕುರಿತು ಆದೇಶ ಹೊರಡಿಸಿ, ಕೋವಿಡ್ ದಂತಹ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದರಿಂದಾಗಿ ಎಲ್ಲ ಶಿಕ್ಷಕರಂತೆ ಕಷ್ಟಕಾಲದ ತತ್‍ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದು  ತಿಳಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಕೋವಿಡ್ ಸೋಂಕು ಶಿಕ್ಷಣ ಕ್ಷೇತ್ರದ ಮೇಲೆ ತನ್ನ ಗಧಾ ಪ್ರಹಾರ ಮಾಡಿದೆ. ಇದರಿಂದ ಮಕ್ಕಳ ಭವಿತವ್ಯವನ್ನು ರೂಪಿಸುವ ಪವಿತ್ರ ಕಾರ್ಯಕ್ಕೆ ಅತೀವವಾದ ಹಿನ್ನಡೆಯಾಗಿದೆ. ಶಾಶ್ವತ ಕಾಯಕಲ್ಪವನ್ನು ಒದಗಿಸಲು ಹಲವು ಮಹತ್ವಪೂರ್ಣ ಯೋಜನೆಗಳನ್ನು ನಾವು ಕೈಗೆತ್ತಿಕೊಳ್ಳಲು ಸಾಧ್ಯವೇ ಆಗಿಲ್ಲ. ಆರ್ಥಿಕತೆಯ ಮೇಲಿನ ತೀವ್ರ ಹೊಡೆತ, ಭವಿಷ್ಯದ ಮೇಲೂ ಪ್ರತಿಕೂಲವಾದ  ಪರಿಣಾಮಗಳನ್ನು  ಬೀರಿದೆ. ಪೋಷಕ-ಶಾಲೆಗಳ ನಡುವೆ ಕಂಡ ಬಿರುಕು ನಮ್ಮ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ ಅಲ್ಲಿ ಕೆಲಸ ಮಾಡುವ ಶಿಕ್ಷಕರ ಮೇಲೆ ಆಪಾರವಾದ ಪರಿಣಾಮ ಬೀರಿತು. ವಿದ್ಯಾರ್ಥಿಗಳು ಅವೈಜ್ಞಾನಿಕವಾದ ಆನ್‍ಲೈನ್ ಶಿಕ್ಷಣಕ್ಕೆ ತೆರೆದುಕೊಳ್ಳಬೇಕಾದಾಗ ಸರ್ಕಾರ ಅದನ್ನು ನಿಯಂತ್ರಿಸಲು ಮುಂದಾಗಬೇಕಾಯಿತು. ಕಡೆಗೆ ಆನ್‍ಲೈನ್ ಶಿಕ್ಷಣ ಅನಿವಾರ್ಯವಾದ್ದರಿಂದ ಅದಕ್ಕೆ ಷರತ್ತುಬದ್ಧವಾದ ಅನುಮತಿ ನೀಡಬೇಕಾಯಿತು. ಇಡೀ ರಾಷ್ಟ್ರದಲ್ಲಿ ಮೊದಲ ಬಾರಿಗೆ ‘ಆನ್‍ಲೈನ್ ಶಿಕ್ಷಣದ ಮಾರ್ಗಸೂಚಿ’ಗಳನ್ನು ನಾವು ಪ್ರಕಟಿಸಿದ್ದೆವು ಎಂದು ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ : ತರೀಕೆರೆ ಬಳಿ ಬಿಯರ್ ಲಾರಿ ಅಪಘಾತ : ಬಾಟಲಿಗಾಗಿ ಮುಗಿಬಿದ್ದ ಜನ!

ಆದಾದ ಬಳಿಕ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವೇತನ ಸಮಸ್ಯೆ ಸೃಷ್ಟಿಯಾಯಿತು. ಶಾಲೆಗಳು ತಮ್ಮ ಶಿಕ್ಷಕರಿಗೆ ವೇತನ ಪಾವತಿ ತೊಂದರೆ ವಿಚಾರದಲ್ಲಿ ಪೋಷಕರ ಮೇಲೆ ದೂರಿದರು. ಪೋಷಕರು ತಮ್ಮ ಸಂಕಷ್ಟವನ್ನು ಪದೇ ಪದೇ ಸರ್ಕಾರದ ಗಮನಕ್ಕೆ ತಂದರು. ಹಾಗಾಗಿ ಶುಲ್ಕ ಕಡಿತಕ್ಕೆ ನಾವು ಮುಂದಾಗಬೇಕಾಯಿತು.  ಖಾಸಗಿ ಶಾಲಾ ಶಿಕ್ಷಕರ ವೇತನಕ್ಕಾಗಿ ಆರ್‍ಟಿಇ ಹಣವನ್ನು ಬಳಸಬೇಕೆಂದು ನಾವು ಸೂಚನೆ ನೀಡಿ ಆರ್‍ಟಿಇ ಮರುಪಾವತಿ ಮೊತ್ತವನ್ನು ಕ್ಷಿಪ್ರವಾಗಿ ಬಿಡುಗಡೆ ಮಾಡಿದೆವು. ಹೆಚ್ಚುವರಿಯಾದ ಪರಿಹಾರ ಮಾರ್ಗಗಳ ಕುರಿತಂತೆ ಆಲೋಚಿಸಿದೆವಾದರೂ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ನಾವು ಗಮನಿಸಲೇಬೇಕಾ ದಂತಹ ಸಂದರ್ಭ ಬಂದೊದಗಿತು ಎಂದು ಸುರೇಶ್ ಕುಮಾರ್ ಶಿಕ್ಷಕರಿಗೆ ಸಹಾಯ ಮಾಡಲು ನಡೆಸಿದ ಪ್ರಯತ್ನಗಳನ್ನು ವಿವರಿಸಿದರು.

Advertisement

ಶಿಕ್ಷಣ ಇಲಾಖೆಯ ಇತಿಮಿತಿಯಲ್ಲಿ ನಾವು ಸಾಧ್ಯವಾಗಬಹುದಾದ ಎಲ್ಲವನ್ನೂ ಮಾಡಿದ್ದೇವೆ. ಖಾಸಗಿ ಶಾಲೆಗಳು ವರ್ಷದಿಂದ ಅನುಭವಿಸುತ್ತಿರುವ ಶಾಲಾ ಸುರಕ್ಷಿತ ನಿಯಮಗಳನ್ನು ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿಯೇ ಮತ್ತಷ್ಟು ಸರಳೀಕರಣಗೊಳಿಸುತ್ತಿದ್ದೇವೆ.  ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಎಸ್.ವ್ಹಿ. ಸಂಕನೂರ ನೇತೃತ್ವದ ಸಮಿತಿ ಸಂಬಂಧಿಸಿದ ಎಲ್ಲ   ಪಾಲುದಾರರೊಂದಿಗೆ ಚರ್ಚಿಸಿ ಕಾನೂನು ತಜ್ಞರೊಂದಿಗೆ  ಸಮಾಲೋಚಿಸಿ ವರದಿ ಸಿದ್ಧಪಡಿಸುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಈ ವರದಿಯನ್ನು ಸ್ವೀಕರಿಸುವವರಗೆ ಯಾವುದೇ ಖಾಸಗಿ ಶಾಲೆಗಳಿಗೆ ಅನಗತ್ಯ ಶೋಷಣೆ ಮಾಡಬಾರದೆಂದು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 1995-2000ರ ಅವಧಿಯಲ್ಲಿ ಪ್ರಾರಂಭವಾದ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ ವಾರ್ಷಿಕ ಸುಮಾರು 200-250 ಕೋಟಿ ರೂ. ಒದಗಿಸಬೇಕೆಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದೇನೆ. ಬಜೆಟ್ ಪೂರ್ವ ಚರ್ಚೆಯಲ್ಲಿಯೂ ಈ ಕುರಿತು ಪ್ರಸ್ತಾವನೆ ಮಂಡಿಸಲಾಗಿತ್ತು. ಎಲ್ಲ ಶಿಕ್ಷಕ/ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಇದನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದರು. ವಿಧಾನಪರಿಷತ್ತಿನ ಗೌರವಾನ್ವಿತ ಸಭಾಪತಿ ಶ್ರೀ ಬಸವರಾಜ ಎಸ್. ಹೊರಟ್ಟಿಯವರೂ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಖುದ್ದಾಗಿ ಮನವಿ ಮಾಡಿದ್ದರು. ಆದರೆ ಪ್ರತಿಕೂಲ ಆರ್ಥಿಕ ಪರಿಸ್ಥಿತಿ ನಮ್ಮನ್ನು ಕಟ್ಟಿ ಹಾಕಿದೆ. ಮುಂದಿನ ದಿನಗಳಲ್ಲಿ ಇದರ ಸಾಧ್ಯತೆಯ ಭರವಸೆ ನನಗಿದೆ ಎಂದು ಅವರು ಹೇಳಿದರು.

ನಿಧಿಯ ವತಿಯಿಂದ ಅನುದಾನರಹಿತ ಶಿಕ್ಷಕರಿಗೆ ನೀಡಲಾಗುವ ಸೌಲಭ್ಯಗಳು:

ಈಗ ನಾವು ಘೋಷಿಸುತ್ತಿರುವ ಕಾರ್ಯಕ್ರಮದಲ್ಲಿ “ಅನುದಾನರಹಿತ ಶಿಕ್ಷಕರತ್ತ ಸರ್ಕಾರ” ಎಂಬ ಧ್ಯೇಯದೊಂದಿಗೆ   ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿದಿಯ ಅಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ನಿಧಿಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ.

ಶಿಕ್ಷಕರಿಗೆ ಅಪಘಾತ ಮತ್ತು ಮರಣ ಪರಿಹಾರ ಸೌಲಭ್ಯ ನೀಡಲಾಗುತ್ತದೆ.

ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ (ನಿವೃತ್ತ ಶಿಕ್ಷಕರೂ ಸೇರಿ),

ಶಿಕ್ಷಕರು   ಮತ್ತು ಅವರ ಅವಲಂಬಿತರಿಗೆ ವೈದ್ಯಕೀಯ ಧನ ಸಹಾಯ,

ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ,

ಶಿಕ್ಷಕರಿಗೆ ತಾಲೂಕು/ಜಿಲ್ಲಾ/ರಾಜ್ಯ ಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳು,

ಶಿಕ್ಷಕರಿಗೆ ರಾಜ್ಯ/ಜಿಲ್ಲಾ ಮಟ್ಟದ ಪ್ರಶಸ್ತಿಗಳು,

ಲ್ಯಾಪ್‍ಟಾಪ್/ಟ್ಯಾಬ್ ಖರೀದಿಗಾಗಿ ಶಿಕ್ಷಕರಿಗೆ ಬಡ್ಡಿ ರಹಿತ ಧನ ಸಹಾಯ,

ವೈದ್ಯಕೀಯ/ ಇಂಜನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಬ್ಯಾಂಕ್‍ನ ಶೈಕ್ಷಣಿಕ ಸಾಲದ ಮರುಪಾವತಿ, ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next