ರಾಯಚೂರು: ಟಿಬಿ ರೋಗಕ್ಕೆ ತುತ್ತಾದವರು ವೈದ್ಯರು ನೀಡುವ ಔಷಧಗಳನ್ನು ನಿತ್ಯ ಸೇವಿಸುವುದರಿಂದ ಈ ರೋಗದಿಂದ ಮುಕ್ತರಾಗಲು ಸಾಧ್ಯ ಎಂದು ಡಾ| ಸುರೇಂದ್ರಬಾಬು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟಿಬಿ ಚಿಕಿತ್ಸಾ ವಿಭಾಗದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ 20 ಟಿಬಿ ರೋಗಿಗಳಿಗೆ ಉಚಿತವಾಗಿ ಪೌಷ್ಟಿಕಾಂಶ ಪದಾರ್ಥ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಸ್ವಲ್ಪ ದಿನ ಔಷಧ ತೆಗೆದುಕೊಂಡಲ್ಲಿ ಫಲಿತಾಂಶ ತಿಳಿಯಲಿದೆ. ಪೂರ್ಣ ಔಷಧ ಸೇವಿಸುವುದರಿಂದ ಆರು ತಿಂಗಳಲ್ಲಿ ಟಿಬಿ ರೋಗದಿಂದ ಮುಕ್ತರಾಗಬಹುದು. ಆದರೆ, ಬಹಳ ಜನ ಔಷಧವನ್ನು ಸೇವಿಸದೆ ನಿರ್ಲಕ್ಷ್ಯ ಮಾಡುವುದರಿಂದ ರೋಗ ಸಂಪೂರ್ಣ ವಾಸಿಯಾಗುವುದಿಲ್ಲ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ್ ಸಜ್ಜನ್ ಮಾತನಾಡಿ, ರೋಟರಿ ಕ್ಲಬ್ ಸದಾ ನಿಮ್ಮ ತೊಂದರೆಗಳಿಗೆ, ಅನಾನುಕೂಲಗಳಿಗೆ ಬೆನ್ನೆಲುಬಾಗಿ ನಿಂತು ನಿಮ್ಮ ಸೇವೆ ಮಾಡಲು ಸಿದ್ಧವಿದೆ. ಯಾವುದೇ ರೀತಿಯ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸುವಂತೆ ಕೋರಿದರು.
ನಂತರ ಆಯುಷ್ಮಾನ್ ಭಾರತದ ಬಗ್ಗೆ ನೆರೆದಂಥ ಟಿಬಿ ರೋಗಿಗಳಿಗೆ ಸರ್ಕಾರ ಸೌಲಭ್ಯಗಳನ್ನು ಪಡೆಯಲು ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ರವಿಕುಮಾರ್, ಕಾರ್ಯದರ್ಶಿ ರಾಘವೇಂದ್ರ ಶ್ರೀನಿವಾಸ ಹಾಗೂ ಅಮಿತ್ ಕುಮಾರ್ ಉಪಸ್ಥಿತರಿದ್ದರು.