Advertisement

ಕೋವಿಡ್‌ 19: ಟಿಬಿ ರೋಗಿಗಳ ನೋಂದಣಿಯಲ್ಲಿ ಶೇ. 25ರಷ್ಟು ಇಳಿಕೆ!

03:48 PM Aug 23, 2020 | Suhan S |

ಮಣಿಪಾಲ: ಕೋವಿಡ್‌ 19 ಸಾಂಕ್ರಾಮಿಕವು ಟಿಬಿ ರೋಗಿಗಳ ಆರೈಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಜನವರಿ ಮತ್ತು ಜೂನ್‌ ನಡುವೆ ಕ್ಷಯರೋಗದ ಹೊಸ ಪ್ರಕರಣಗಳ ನೋಂದಣಿಯಲ್ಲಿ ಶೇಕಡಾ 25ರಷ್ಟು ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Advertisement

ಲಾಕ್‌ಡೌನ್‌ ಹಾಗೂ ಕೋವಿಡ್‌ ವಿರುದ್ಧದ ಹೋರಾಟದ ವೇಳೆ ಉಂಟಾದ ಆರೋಗ್ಯ ಸೇವೆಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ. ಇದು 2025ರ ವೇಳೆಗೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಭಾರತದ ಗುರಿಗೆ ತೊಂದರೆಯನ್ನುಂಟುಮಾಡಿದೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ 2030ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿ ವಿಶ್ವಸಂಸ್ಥೆಗೆ ಇದೆ.

ಭಾರತದಲ್ಲಿ ಅತಿ ಹೆಚ್ಚು ಟಿಬಿ ರೋಗಿಗಳು : ಟಿಬಿ ರೋಗಿಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ 19 ಅನೇಕ ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿರುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳುವಂತೆ 2018ರಲ್ಲಿ ವಿಶ್ವದಾದ್ಯಂತ 10 ಮಿಲಿಯನ್‌ ಜನರು ಟಿಬಿ ಕಾಯಿಲೆಗೆ ತುತ್ತಾಗಿದ್ದು, ಅವರಲ್ಲಿ 1.5 ಮಿಲಿಯನ್‌ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ. 27ರಷ್ಟು ಹೊಸ ಪ್ರಕರಣಗಳು ಭಾರತದಲ್ಲಿ ವರದಿ ಯಾಗಿವೆ ಎಂದಿದೆ. ಭಾರತದಲ್ಲಿ ಸಾವನ್ನಪ್ಪಿದ ಕ್ಷಯರೋಗಿಗಳ ಸಂಖ್ಯೆ 45 ಸಾವಿರ. ಕೋವಿಡ್‌ ಸಾಂಕ್ರಾಮಿಕ ರೋಗವು ಟಿಬಿ ಆರೈಕೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಇದು ಟಿಬಿ ರೋಗ ನಿಯಂತ್ರಣಕ್ಕೆ ತೊಡಕಾಗಲಿದೆ ಎಂದು ಭಾರತದ ಕೇಂದ್ರ ಟಿಬಿ ವಿಭಾಗ ಹೇಳಿದೆ.

ಇದರ ಜತೆಗೆ ಕೋವಿಡ್‌ ಮಾರ್ಗಸೂಚಿಯಲ್ಲಿ ಬಳಸಲ್ಪಡುವ ಫೇಸ್‌ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಜಾರಿಗೆ ತರಲಾದ ಕಾರಣದಿಂದ ಕನಿಷ್ಠ ಪ್ರಮಾಣದಲ್ಲಿ ಕೆಮ್ಮು ಮತ್ತು ಸೀನುಗಳ ಮೂಲಕ ಟಿಬಿ ಹರಡುವುದನ್ನು ತಡೆಯಲು ಸಹಾಯ ಮಾಡಿದೆ. ಮಾರ್ಚ್‌ ಅಂತ್ಯದಲ್ಲಿ ಭಾರತದಲ್ಲಿ 70 ದಿನಗಳ ಕಟ್ಟುನಿಟ್ಟಿನ ಲಾಕ್ಡೌನ್‌ ವಿಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಲಕ್ಷಾಂತರ ಟಿಬಿ ರೋಗಿಗಳಿಗೆ ವೈದ್ಯರನ್ನು ಭೇಟಿಯಾಗಿ ಔಷಧಿ ಪಡೆಯಲು ಸಾಧ್ಯವಾಗಿಲ್ಲ.

ಕೋವಿಡ್‌ ಸಾಂಕ್ರಾಮಿಕವು ಭಾರತದ ಆರೋಗ್ಯ ವ್ಯವಸ್ಥೆಯನ್ನು ಈಗಾಗಲೇ ಹದಗೆಡಿಸಿದೆ. ಇದೀಗ ಟಿಬಿ ರೋಗಿಗಳನ್ನು ತೊಂದರೆಗೀಡು ಮಾಡಿದೆ. ಕೋವಿಡ್‌ ತಡೆಗಟ್ಟುವಲ್ಲಿ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ವೈದ್ಯಕೀಯ ಸೇವೆಗಳಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದ ಟಿಬಿ ರೋಗಿಗಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಜೂನ್‌ನಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದರೂ, ಜನರು ಇನ್ನೂ ಆಸ್ಪತ್ರೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಅನೇಕ ಆಸ್ಪತ್ರೆಗಳಲ್ಲಿ ಸಿಬಂದಿಗಳ ಕೊರತೆಯಿದೆ. ಕೋವಿಡ್‌ ಹೃದಯ ಸಂಬಂಧಿ ಮತ್ತು ಶ್ವಾಸಕೋಶದ ಕಾಯಿಲೆ ಇರುವವರಿಗೆ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ನಡುವೆ ಕ್ಲಪ್ತ ಸಮಯಕ್ಕೆ ಔಷಧ ಸೇವೆಗಳು ಲಭ್ಯವಾಗದೇ ಇರುವುದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ವಾಸ್ತವವಾಗಿ, ಕೋವಿಡ್‌ ಮತ್ತು ಟಿಬಿ ಎರಡೂ ಕಾಯಿಲೆಗಳು ಕೆಲವು ಸಾಮ್ಯತೆಗಳನ್ನು ಹೊಂದಿವೆ. ಕೆಮ್ಮು, ಕಫ‌, ಎದೆ ನೋವು, ಶಕ್ತಿ ಹೀನತೆ ಮತ್ತು ಜ್ವರ ಸಾಮಾನ್ಯವಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next