Advertisement

ಡಿಕೆಶಿ ನಿವಾಸದಲ್ಲಿ 11 ಕೋಟಿ ಸಿಕ್ಕಿಲ್ಲ!;ಐಟಿ ಅಧಿಕಾರಿಗಳ ಸ್ಪಷ್ಟನೆ

11:41 AM Aug 02, 2017 | |

ಹೊಸದಿಲ್ಲಿ : ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ  ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಗುರಿಯಾಗಿರಿಸಿಕೊಂಡು ಭಾರೀ ದಾಳಿ ನಡೆಸಿದ್ದು ಸುಮಾರು 3 ಸೂಟ್‌ಕೇಸ್‌ಗಳಷ್ಟು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

Advertisement

11 ಕೋಟಿ ಸಿಕ್ಕಿಲ್ಲ ಐಟಿ ಅಧಿಕಾರಿಗಳ ಸ್ಪಷ್ಟನೆ!

ಡಿ.ಕೆ.ಶಿವಕುಮಾರ್‌ ಅವರ ದೆಹಲಿಯ ಸಫ್ದರ್‌ ಜಂಗ್‌ನಲ್ಲಿರುವ ನಿವಾಸದಲ್ಲಿ 5 ಕೋಟಿ ರೂಪಾಯಿ ಸೇರಿ ರಾಜ್ಯದ ವಿವಿಧೆಡೆ11 ಕೋಟಿ ಜಪ್ತಿ ಮಾಡಲಾಗಿದೆ ಎಂದು ದೇಶಾದ್ಯಂತ ಮಾಧ್ಯಮಗಳಲ್ಲಿ ವರದಿಯಾಗಿತ್ತು. 11 ಕೋಟಿ ಹಣ ವಶ ಪಡಿಸಿಕೊಳ್ಳಲಾಗಿತ್ತು ಎಂದು ಸುದ್ದಿ ಹಬ್ಬಿತ್ತು. ಆದರೆ ಯಾವುದೇ ಹಣವನ್ನು ವಶಕ್ಕೆ ಪಡೆದುಕೊಂಡಿಲ್ಲ ಎಂದು ಐಟಿ ಅಧಿಕಾರಿಗಳು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. 

ಗುಜರಾತ್‌ನ ಕಾಂಗ್ರೆಸ್‌ ಶಾಸಕರು ತಂಗಿರುವ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ನಿವಾಸ ಸೇರಿದಂತೆ 35 ಕಡೆಗಳಲ್ಲಿ  ಬುಧವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳ ತಂಡಗಳು ದಾಳಿ ನಡೆಸಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಾಕ್‌ ನೀಡಿದೆ. 

ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ದಾಳಿ ನಡೆಸಲಾಗಿದ್ದು, ರೆಸಾರ್ಟ್‌ನಿಂದ ಹೊರಹೋಗುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. 20ಕ್ಕೂ ಹೆಚ್ಚು ಮಂದಿ  ಅಧಿಕಾರಿಗಳು ಶಾಸಕರ ಕೊಠಡಿಗಳಲ್ಲಿಯೂ  ಪರಿಶೀಲನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. 

Advertisement

 ಬೆಂಗಳೂರಿದ ಸದಾಶಿವನಗರದಲ್ಲಿರುವ ಶಿವಕುಮಾರ್‌ ನಿವಾಸ, ಕನಕಪುರದಲ್ಲಿರುವ ಸಂಸದ ಸುರೇಶ್‌ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಕುಮಾರ್‌ ಅವರ ಆಪ್ತ ವಿಧಾನ ಪರಿಷತ್‌ ಸದಸ್ಯ ಎನ್‌.ರವಿ ಅವರ ನಿವಾಸ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್‌ ಕಿರಣ್‌ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಶಿವಕುಮಾರ್‌ ಅತ್ತೆಯ ಮನೆ,ಮೈಸೂರಿನ ಇಟ್ಟಿಗೆ ಗೂಡಿನಲ್ಲಿರುವ ಮಾವನ ನಿವಾಸದ ಮೇಲೂ ದಾಳಿ ಮಾಡಲಾಗಿದೆ. 

ಜೋತಿಷಿಯನ್ನೂ ಬಿಡಲಿಲ್ಲ!
ಡಿ.ಕೆ.ಶಿವಕುಮಾರ್‌ ಅವರ ಆಪ್ತ ಜೋತಿಷಿ ದ್ವಾರಕನಾಥ್‌ ಗೂರೂಜಿ ಅವರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಡಿಕೆಶಿ ನಿವಾಸಕ್ಕೆ ಬಿಗಿ ಭದ್ರತೆ 

ರೆಸಾರ್ಟ್‌ನಲ್ಲಿದ್ದ ಡಿ.ಕೆ.ಶಿವಕುಮಾರ್‌ ಅವರನ್ನು ಐಟಿ ಅಧಿಕಾರಿಗಳು  ಬಿಗಿ ಭದ್ರತೆಯೊಂದಿಗೆ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಕರೆ ತಂದರು.  ಮನೆಯ ಎದುರು ನೂರಾರು ಬೆಂಬಲಿಗರು ಜಮಾವಣೆಗೊಂಡಿದ್ದ ಹಿನ್ನಲೆಯಲ್ಲಿ ಹಿಂಬಾಗಿಲಿನಿಂದ ಮನೆಯ ಒಳಗೆ ಕರೆದೊಯ್ಯಲಾಯಿತು. 

ಕಾರಿನಿಂದಿಳಿದ ಡಿ.ಕೆ.ಶಿವಕುಮಾರ್‌ ಅಭಿಮಾನಿಗಳತ್ತ ಕೈ ಮುಗಿದರು.ಕೈ ಸನ್ನೆ ಮಾಡಿ ( ನಿಲ್ಲಿ, ನಿಲ್ಲಿ ಎನ್ನುವಂತೆ) ಮನೆಯ ಒಳಗೆ ತೆರಳಿದರು. 

ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, 50 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಶೇಷಾದಿಪುರಂ ಎಸಿಪಿ ಭದ್ರತೆಯ ನೇತೃತ್ವ ವಹಿಸಿದ್ದಾರೆ. 

ಡಿ.ಕೆ.ಶಿವಕುಮಾರ್‌ ಅವರ ಕಾರು ಚಾಲಕ ನಾಗರಾಜ್‌ ಅವರನ್ನು ದೆಹಲಿಯ  ಆರ್‌ಕೆ ಪುರಂನಲ್ಲಿರುವ ನಿವಾಸನಿಂದ ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಪ್ತ ಸಹಾಯಕ ಆಂಜನೇಯ ಅವರನ್ನೂ ವಿಚಾರಣೆ ನಡೆಸಿರುವ ಬಗ್ಗೆ ವರದಿಯಾಗಿದೆ. 

ದೆಹಲಿಯ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿರುವ ಡಿ.ಕೆ.ಸುರೇಶ್‌ ಅವರ ಸರ್ಕಾರಿ ಫ್ಲ್ಯಾಟ್‌ನಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 

ಲೋಕಸಭೆಯಲ್ಲಿ ವಿಷಯ ಪ್ರಸ್ತಾಪ 
ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಐಟಿ ದಾಳಿ ವಿಚಾರವನ್ನು ಲೋಕಸಭಾ ಕಲಾಪದಲ್ಲಿ ಪ್ರಸ್ತಾವಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.ಇದೇ ವಿಚಾರಕ್ಕೆ ಭಾರೀ ಚರ್ಚೆ ನಡೆಯಿತು. 

ರಾಜ್ಯಸಭೆಯಲ್ಲೂ ವಿಚಾರ ಚರ್ಚೆಗೆ ಬಂದು ಕಾಂಗ್ರೆಸ್‌ ಸದಸ್ಯರು ಕೋಲಾಹಲ ಎಬ್ಬಿಸಿದರು. ಹಣಕಾಸು ಸಚಿವ ಅರುಣ್‌  ಜೇಟ್ಲಿ ಉತ್ತರಿಸಿ, ಐಟಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿಲ್ಲ ಎಂದರು. ಈ ವೇಳೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. 

ಐಟಿ ದಾಳಿಗೂ ಶಾಸಕರಿಗೂ ಸಂಬಂಧ ಇಲ್ಲ
ಇಂದು ನಡೆಸಿರುವ ದಾಳಿಗೂ ಗುಜರಾತ್‌  ಕಾಂಗ್ರೆಸ್‌ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ ಎಂದು  ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ ಸ್ಪಷ್ಟನೆ ನೀಡಿದ್ದಾರೆ.ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ನಡೆಸುತ್ತಿರುವ ಐಟಿ ತನಿಖೆಯ ಭಾಗವಾಗಿ ಪೂರ್ವ ಯೋಜನೆಯಂತೆ ದಾಳಿ ನಡೆಸಿದ್ದೇವೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next