Advertisement

ಟ್ಯಾಕ್ಸೋ..ಟಿಡಿಎಸ್ಸೋ…

02:35 PM Oct 09, 2017 | |

ಗುರುಗುಂಟಿರಾಯರು ತಮ್ಮ ಪೆನ್ಷನ್‌ ದುಡ್ಡನ್ನು ಇಪ್ಪತ್ತೆ„ದು ಬ್ಯಾಂಕಿನಲ್ಲಿ ಇಡಲು ಅಲೆದಾಡುವುದನ್ನು ಕಂಡು ಬಹೂರಾನಿಗೆ ನಗು ಬಂತು. ‘ಯಾಕೆ ಮಾವಾ ಈ ದ್ರಾವಿಡ ಪ್ರಾಣಾಯಾಮ? ಎಲ್ಲಾ ಒಂದೇ ಕಡೆ ಹಾಕ್ಬಾರ್ದೇ?’ ಅಂತ ನೆಗೆಯಾಡಿದಳು. ‘ಇಲ್ಲಾ ಮಗೂ ಎಲ್ಲಾ ಒಂದೇ ಕಡೆ ಹಾಕಿದ್ರೆ ಟಿಡಿಎಸ್‌ ಕಟ್‌ ಆಗ್ತದೆ’ ಟ್ಯಾಕ್ಸ್‌ ಉಳಿಸ್ಲಿಕ್ಕೆ ಸ್ಪ್ಲಿಟ್‌ ಮಾಡಿ ಬೇರೆ ಬೇರೆ ಕಡೆ ಎಫ್ಡಿ ಮಾಡ್ಬೇಕು- ಬಡ್ಡಿ ಹತ್ಸಾವ್ರ ದಾಟದ ಹಾಗೆ’ ಸಮಜಾಯಿಷಿ ನೀಡಿದರು ರಾಯರು.

Advertisement

ಟಿಡಿಎಸ್‌ ಅಥವಾ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಎಂಬುದು ಬಹುತೇಕರಿಗೆ ಮೂರಕ್ಷರದ ಭೂತವೇ ಆಗಿ ಪರಿಣಮಿಸಿದೆ. “ಹೀಗೆ ಮಾಡಿದರೆ ಅಥವಾ ಹಾಗೆ ಮಾಡಿದರೆ ಟಿಡಿಎಸ್‌ ಡಿಡಕ್ಟ್ ಮಾಡ್ತಾರಾ?’ ಮತ್ತು ‘ಟಿಡಿಎಸ್‌ ಡಿಡಕ್ಟ್ ಮಾಡದೆ ಇರುವ ಹಾಗೆ ಎಂತ ಮಾಡಬೇಕು?’ ಯಾವುದೇ ರೀತಿ ಮಾತು ಆರಂಭಿಸಿದರೂ ಸುತ್ತಿ ಬಳಸಿ ಮತ್ತೆ ಕೊನೆಗೆ ಬರುವುದು ಇಂಥದೇ ಪ್ರಶ್ನೆಗಳಿಗೇ. ಒಟ್ಟಿನಲ್ಲಿ ಟಿಡಿಎಸ್‌ ಅನ್ನು ತಪ್ಪಿಸುವುದೇ ಸದ್ಯಕ್ಕೆ, ಟ್ಯಾಕ್ಸ್‌ ಕಟ್ಟುವ ಎಲ್ಲರ ಮುಖ್ಯ ಉದ್ಧೇಶವಾಗಿರುತ್ತದೆ.

ಮೊತ್ತ ಮೊದಲಾಗಿ ನಾವು ಟಿಡಿಎಸ್‌ ಮತ್ತು ಟ್ಯಾಕ್ಸ್‌ ಮಧ್ಯೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಓರ್ವ ವ್ಯಕ್ತಿಗೆ ನಿಗದಿತ ರಿಯಾಯಿತಿಗಳ ಬಳಿಕ (ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ, ಇತ್ಯಾದಿ) ಬರುವ ಆದಾಯವು ಕನಿಷ್ಠ ಆದಾಯ ತೆರಿಗೆ ಮಿತಿಯನ್ನು ಮೀರಿದರೆ ತೆರಿಗೆ ಕಟ್ಟತಕ್ಕದ್ದು. ಈ ಮಿತಿಯು ಸಾಮಾನ್ಯ ನಾಗರಿಕರಿಗೆ ರೂ 2.5 ಲಕ್ಷ, ಹಿರಿಯ ನಾಗರಿಕರಿಗೆ (ವಯಸ್ಸು 60-80) ರೂ. 3 ಲಕ್ಷ ಹಾಗೂ ಅತಿ ಹಿರಿಯ ನಾಗರಿಕರಿಗೆ (ವಯಸ್ಸು 80 ಮೀರಿರಬೇಕು) 5 ಲಕ್ಷ ಆಗಿದೆ. ಇದು ಮಾತ್ರ ಅಂತಿಮವಾಗಿ ನಮಗೆ ಭಾದಿಸುವ ತೆರಿಗೆ ಕಾನೂನು. 

ಬದಲಿಗೆ, ಟಿಡಿಎಸ್‌ ಅಥವ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಎಂಬುದು ಮೂಲದಲ್ಲಿಯೇ ಸ್ವಲ್ಪ ತೆರಿಗೆ ಸಂಗ್ರಹ ಮಾಡಲು ಸರಕಾರವು ಮಾಡಿಕೊಂಡ ಒಂದು ಆಡಳಿತಾತ್ಮಕ ವ್ಯವಸ್ಥೆ ಮಾತ್ರ. ಅದುವೇ ಅಂತಿಮ ಕರವಲ್ಲ. ಜನತೆ ಕರ ತಪ್ಪಿಸುವುದಕ್ಕೆ ಉತ್ತರವಾಗಿ ಆರಂಭಿಸಿರುವ ಆಡಳಿತಾತ್ಮಕ ಹೆಜ್ಜೆ. 

ಉದಾಹರಣೆಗೆ, ಬ್ಯಾಂಕ್‌ ಬಡ್ಡಿಯ ಮೆಲೆ ರೂ 10,000 ವಾರ್ಷಿಕ ಆದಾಯ ಮೀರಿದರೆ ಆ ಬ್ಯಾಂಕ್‌ ಕಾನೂನು ಪ್ರಕಾರ ಶೇ.10ರಷ್ಟು ಲೆಕ್ಕದಲ್ಲಿ ಟಿಡಿಎಸ್‌ ಕಳೆಯುತ್ತದೆ. (ಪ್ಯಾನ್‌ ಕಾರ್ಡ್‌ ಸಲ್ಲಿಸದೆ ಇದ್ದವರಿಗೆ ಇದು ಶೇ.20ರಷ್ಟು) ಆದರೆ ಇದೊಂದು ತಾತ್ಕಾಲಿಕ ವ್ಯವಸ್ಥೆ. ವರ್ಷಾಂತ್ಯದಲ್ಲಿ ನಿಮ್ಮ ಒಟ್ಟು ಆದಾಯ ತೆರಿಗೆ ಮಿತಿಯೊಳಗಿದ್ದರೆ ಈ ಮೊತ್ತವನ್ನು ರಿಟರ್ನ್ ಸಲ್ಲಿಸಿ ವಾಪಸ್‌ ಪಡದೆಕೊಳ್ಳಬಹುದು. ಬದಲಿಗೆ ಒಟ್ಟು ತೆರಿಗೆ ತಮ್ಮ ಹೆಚ್ಚುವರಿ ಸ್ಲಾಬಿನ ಕಾರಣ ಟಿಡಿಎಸ್‌ ಮೊತ್ತಕ್ಕಿಂತ ಜಾಸ್ತಿ ಬಂದಲ್ಲಿ ಉಳಿದ ಬಾಕಿಯನ್ನು ನಿಗದಿತ ಸಮಯದ ಒಳಗೆ ಪಾವತಿ ಮಾಡತಕ್ಕದ್ದು. ಹೀಗೆ ಅಂತಿಮವಾಗಿ ಎಲ್ಲಾ ಆದಾಯವನ್ನೂ ಸೇರಿಸಿ ನೋಡಿ ಸಲ್ಲಿಸಬೇಕಾದ ತೆರಿಗೆ ಮತ್ತು ಈಗಾಗಲೇ ಕಟ್ಟಲ್ಪಟ್ಟ ತೆರಿಗೆಗೆಯ ನಡುವಿನ ವ್ಯತ್ಯಾಸವನ್ನು ಭರಿಸಿಕೊಳ್ಳಬೇಕು. ಆದಕಾರಣ ಟಿಡಿಎಸ್ಸೇ ಅಂತಿಮವಲ್ಲ. ಅದೊಂದು ಹಂತ ಮಾತ್ರ. 

Advertisement

ಆದಾಗ್ಯೂ, ಒಟ್ಟು ಆದಾಯದ ಮೇರೆಗೆ ಏನೂ ತೆರಿಗೆ ಬಾರದೇ ಇದ್ದಲ್ಲಿ ಸುಖಾ ಸುಮ್ಮನೆ ಟಿಡಿಎಸ್‌ ಕಟ್ಟಿಸಿಕೊಂಡು ಆಮೇಲೆ ಅದನ್ನೇ ರೀಫ‌ಂಡ್‌ ಪಡೆಯುವ ಕೆಲಸ ಯಾಕೆ ಬೇಕು? ಅದೊಂದು ಅನಗತ್ಯ ಕೆಲಸವಲ್ಲವೇ? ಅದೃಷ್ಟವಶಾತ್‌, ಸರಕಾರ ಇದನ್ನು ಒಪ್ಪುತ್ತದೆ ಮತ್ತು ಅಂತಹ ಅರ್ಥಹೀನ ಕೆಲಸ ಮಾಡುವುದರಿಂದ ನಮಗೆ ವಿನಾಯತಿ ಕೂಡಾ ನೀಡುತ್ತದೆ. ಅಂದರೆ ಯಾರು 
ಅಂತಿಮವಾಗಿ ಕರಾರ್ಹರಲ್ಲವೋ ಅವರಿಗೆ ಈ ಟಿಡಿಎಸ್‌ ಪ್ರಕ್ರಿಯೆಯಿಂದ ವಿನಾಯತಿಯನ್ನು ನೀಡಲಾಗಿದೆ. ಅಂತೆಯೇ ಯಾರು ಅಂತಿಮವಾಗಿ ಕರಾರ್ಹರೋ ಅವರು ಟಿಡಿಎಸ್‌ ಪ್ರಕ್ರಿಯೆಗೆ ತಲೆ ಒಡ್ಡಲೇ ಬೇಕು. 

ಅದು ಸರಿ, ಆದರೆ ಕರಾರ್ಹರಲ್ಲದವರಿಗೆ ಟಿಡಿಎಸ್‌ನಿಂದ ಮುಕ್ತಿ ಹೇಗೆ? ಒಂದು ಬ್ಯಾಂಕು ರೂ 10,000 ಮೀರಿ ಬಡ್ಡಿ ಆದಾಯವಿದ್ದವರಿಂದ ಶೇ.10ರಷ್ಟು ಟಿಡಿಎಸ್‌ ಮಾಡುವುದು ಕಾನೂನು. ಆದರೆ ತಾವು ಅಂತಿಮವಾಗಿಯೂ ಕರಾರ್ಹರಲ್ಲದೆ ಇದ್ದಲ್ಲಿ ಫಾರ್ಮ್ 15ಜಿ ಭರ್ತಿಗೊಳಿಸಿ ಬ್ಯಾಂಕಿನಲ್ಲಿ ನೀಡತಕ್ಕದ್ದು. 15ಜಿ ಎನ್ನುವುದು ‘ತಾನು ಕರಾರ್ಹನಲ್ಲ, ನನ್ನ ಡೆಪಾಸಿಟ್‌ ಮೇಲೆ ಟಿಡಿಎಸ್‌ ಕಡಿಯಬೇಡಿ’ ಎಂದು ಸ್ವಯಂ-ಹೇಳಿಕೆ ಕೊಡುವ ಡಿಕ್ಲರೇಶನ್‌. ಹಿರಿಯ ನಾಗರಿಕರಿಗೆ ಈ ಫಾರ್ಮ್ ಸ್ವಲ್ಪ ಬದಲಾವಣೆಗಳೊಂದಿಗೆ 15ಎಚ್‌ ರೂಪದಲ್ಲಿ ಬರುತ್ತದೆ. ಕರಾರ್ಹ ಮಿತಿ ಮೊದಲೇ ತಿಳಿಸಿದಂತೆ ರೂ 2.5 ಲಕ್ಷ ಹಾಗೂ ರೂ 3/5 ಲಕ್ಷ (ವಯೋಮಾನ ಹೊಂದಿಕೊಂಡು) ಇರುತ್ತದೆ. 

ಆದರೆ ನೆನಪಿರಲಿ.  ಈ ಫಾರ್ಮುಗಳನ್ನು ಅವಕ್ಕೆ ಅರ್ಹರಾದವರು ಮಾತ್ರ ಸಲ್ಲಿಸತಕ್ಕದ್ದು. ಕರಭಾರ ಇರುವ ಜನತೆ ಇವನ್ನು ತುಂಬಿ ಕೊಟ್ಟರೆ ಅಪರಾಧವಾಗುತ್ತದೆ. ಕರಾರ್ಹ ತೆರಿಗೆ ಇಲ್ಲದವರು ಮಾತ್ರವೇ ಇವನ್ನು ಭರ್ತಿ ಮಾಡಲು ಅರ್ಹರು. ಎಷ್ಟೋ ಜನ ಬ್ಯಾಂಕುಗಳಲ್ಲಿ ರೂ 10,000 ಕ್ಕಿಂತ ಜಾಸ್ತಿ ಬಡ್ಡಿ ಬರುವಂತಹ ಡೆಪಾಸಿಟ್‌ಗಳನ್ನು ಇಟ್ಟುಕೊಂಡು ಫಾರ್ಮ್ 15 ಸಲ್ಲಿಸಿ ಟಿಡಿಎಸ್‌ ತಪ್ಪಿಸುವ ಕೆಲಸ ಮಾಡುತ್ತಾರೆ. ಕೇಳಿದರೆ ಬ್ಯಾಂಕಿನವರೇ ಹಾಗೆ ಹೇಳಿದ್ದು ಎನ್ನುವ ಉತ್ತರ ಕೊಡುತ್ತಾರೆ. ಬ್ಯಾಂಕಿನವರು ಏನು ಹೇಳಿದರೋ ಇವರು ಏನು ಕೇಳಿಸಿಕೊಂಡರೋ? ಖಂಡಿತವಾಗಿ ಇಲ್ಲಿ ಏನೋ ತಪ್ಪಾಭಿಪ್ರಾಯ ಉಂಟಾಗಿದೆ.  

ಈ ರೀತಿ ಟಿಡಿಎಸ್‌ ಮತ್ತು ಟ್ಯಾಕ್ಸ್‌ ಮಧ್ಯೆ ಇರುವ ವ್ಯತ್ಯಾಸವನ್ನು ಸರಿಯಾಗಿ ಅರಿತುಕೊಂಡು ಅಂತಿಮವಾಗಿ ಕರಾರ್ಹ ಆದಾಯ ಇಲ್ಲದವರು ಮಾತ್ರ 15ಜಿ/ಎಚ್‌ ಫಾರ್ಮುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಟಿಡಿಎಸ್‌ ಕಡಿತವನ್ನು ತಪ್ಪಿಸಿಕೊಳ್ಳಬಹುದು. ಕರಾರ್ಹ ಆದಾಯ ಇರುವವರು 15 ಅಥವಾ ಇನ್ನಾವುದೇ ಫಾರ್ಮ್ ಉಪಯೋಗಿಸಿಕೊಂಡು ಈ ಟಿಡಿಎಸ್‌ ನಿಂದ ತಪ್ಪಿಸಿಕೊಳ್ಳುವಂತಿಲ್ಲ. ಅದೂ ಅಲ್ಲದೆ ಟಿಡಿಎಸ್‌ ಕಡಿತವಾಗಿರಲಿ, ಕಡಿತವಾಗದೇ ಇರಲಿ ಅಂತಿಮ ಕರ ಸಂದಾಯ ಪ್ರತ್ಯೇಕವಾಗಿಯೇ ಸ್ಲಾಬಾನುಸಾರ ನಿರ್ಣಯವಾಗುತ್ತದೆ.  ಆ ಕರಭಾರದಿಂದ ಟಿಡಿಎಸ್‌ ಮೊತ್ತವನ್ನು ಕಳೆದು ಉಳಿದ ಕರವನ್ನು ಕಟ್ಟುವುದು/ರಿಫ‌ಂಡ್‌ ಪಡೆಯುದನ್ನು ಮಾಡಬಹುದು.   

ಇನ್ನು ಕೆಲವರು ಟಿಡಿಎಸ್‌ ತಪ್ಪಿಸುವ ಏಕೈಕ ಉದ್ಧೇಶದಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿ ಎಫ್ಡಿ ಇಡುತ್ತಾರೆ. ಇದರಿಂದ ನೈಜವಾಗಿ ಟ್ಯಾಕ್ಸ್‌ ಇಲ್ಲದವರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ನೈಜವಾಗಿ ಟ್ಯಾಕ್ಸ್‌ ಕಟ್ಟಬೇಕಾಗಿದ್ದು ಅದನ್ನು ಸರಕಾರದಿಂದ ಕಣ್ತಪ್ಪಿಸುವ ಯೋಜನೆ ಇರುವವರು ಮಾತ್ರ ಇಂತಹ ಕೃತ್ಯಗಳಿಂದ ದುರ್ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಅದರೆ ತೆರಿಗೆ ತಪ್ಪಿಸುವುದು ಕಾನೂನು ಬಾರ ಹಾಗೂ ಸಿಕ್ಕಿ ಬಿದ್ದವರಿಗೆ ಬಡ್ಡಿ ಹಾಗೂ ತಪ್ಪು ದಂಡ ವಿದಿಸುತ್ತಾರೆ. ಟ್ಯಾಕ್ಸ್‌ ಕಟ್ಟುವಲ್ಲಿ ಕಟ್ಟಲೇ ಬೇಕು. 

ಇತ್ತೀಚೆಗೆ ಕರ ಇಲಾಖೆ ಎಲ್ಲವನ್ನೂ ಪ್ಯಾನ್‌ ನಂಬರ್‌ ಮೂಲಕ ಜಾಡುಹಿಡಿಯುವ ಕಾರಣ ಸರಕಾರಕ್ಕೆ ಎಲ್ಲಾ ವ್ಯವಹಾರವೂ ಗೊತ್ತಾಗಿಯೇ ಆಗುತ್ತದೆ. ಇದೀಗ ಬಂದ ಸುದ್ದಿಯ ಪ್ರಕಾರ, ಆದಾಯ ತೆರಿಗೆ ಇಲಾಖೆ ಕೆಲವು ಕೋ-ಆಪರೇಟಿವ್‌ ಬ್ಯಾಂಕುಗಳಲ್ಲಿ ವಿನಂತಿಸಿಕೊಂಡು ಅಲ್ಲಿ ಡೆಪಾಸಿಟ್‌ ಇಟ್ಟವರ ಹೆಸರುಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಅಂತಹ ಡೆಪಾಸಿಟ್‌ಗಳ ಮೇಲಿನ ಬಡ್ಡಿಯನ್ನು ಆದಾಯ ತೆರಿಗೆ ಸಲ್ಲಿಕೆಯಲ್ಲಿ ನಮೂದಿಸಲಾಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ. ಆ ರೀತಿ ತೆರಿಗೆ ಕಟ್ಟದೆ ವಾರ್ಷಿಕ ರಿಟರ್ನ್ ಫೈಲಿಂಗ್‌ನಲ್ಲೂ ಕಾಣಿಸದ ಬಡ್ಡಿ ಆದಾಯ ಇರುವವರಿಗೆ ಈಗ ಕರ ಇಲಾಖೆಯಿಂದ ನೋಟೀಸುಗಳು ಬರುತ್ತವೆ. ಇದನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಇಂತಹ ತೊಂದರೆಗಳಿಗೆ ಸಿಕ್ಕಿ ಹಾಕಿಕೊಳ್ಳದಿರಿ. 

ಪ್ಯಾನ್‌ ಕೊಡದ ಕಾರಣಕ್ಕೋ, 15 ಜಿ/ಎಚ್‌ ಅಥವಾ ಇನ್ಯಾವುದೇ ಕಾರಣಕ್ಕೆ ಅಗತ್ಯಕ್ಕಿಂತ ಜಾಸ್ತಿ ಟಿಡಿಎಸ್‌ ಕಟ್ಟಿಹೋದಲ್ಲಿ ಅದನ್ನು ರಿಟರ್ನ್ ಫೈಲಿಂಗ್‌ ಮೂಲಕ ರಿಫ‌ಂಡ್‌ ಪಡೆಯಬಹುದಾಗಿದೆ. ಆನ್‌-ಲೈನ್‌ ರಿಟರ್ನ್ ಫೈಲಿಂಗ್‌ ಮಾಡುವುದರಿಂದ ರಿಫ‌ಂಡ್‌ ಪ್ರಕ್ರಿಯೆ ಸುಲಭ ಮತ್ತು ಖಚಿತವೂ ಆಗಿದೆ. ¸ಡ್ಡಿ ಸಹಿತ ನಿಮ್ಮ ದುಡ್ಡು ನಿಮಗೆ ವಾಪಸ್‌ ಬರುತ್ತದೆ.

ಒಟ್ಟಿನಲ್ಲಿ ಟಿಡಿಎಸ್‌ ಬಗ್ಗೆ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳಲಾಗಿದೆ. ಮುಕ್ತವಾಗಿ ಕಾನೂನು ಬದ್ಧವಾಗಿ ವ್ಯವಹರಿಸುವುದೇ ಸುಲಭ ಮತ್ತು ಒಳ್ಳೆಯದು.  ತೆರಿಗೆ ಕಟ್ಟುವುದನ್ನು ತಪ್ಪಿಸಬೇಕು ಎಂದಿದ್ದರೆ ಟ್ಯಾಕ್ಸ್‌-ಫ್ರೀ ಆದಾಯ ಇರುವ ಹೂಡಿಕೆಗಳಲ್ಲಿ ಹಾಕುವುದು ಒಳ್ಳೆಯದು.                            

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next