Advertisement

ಘನ ತ್ಯಾಜ್ಯ ನಿರ್ವಹಣೆಗೆ ತೆರಿಗೆ ಹೆಚ್ಚಳ: ಸದಸ್ಯರಿಂದ ಖಂಡನೆ

12:32 PM Apr 28, 2017 | Team Udayavani |

ಕಾರ್ಕಳ: ಇಲ್ಲಿನ  ಪುರಸಭೆಯ ಸಾಮಾನ್ಯ ಸಭೆ  ಗುರುವಾರ ನಡೆಯಿತು. ಕಾರ್ಕಳ ಪುರಸಭೆ ನಿರ್ಮಿಸಿದ ಬಯೋಗ್ಯಾಸ್‌ ಘಟಕ ಕಾರ್ಯಾರಂಭ ಮಾಡದೇ ಇರುವುದು, ವಿವಿಧ ವಾರ್ಡ್‌ಗಳಲ್ಲಿ  ಬೇಸಗೆಯಲ್ಲಿ ಸೃಷ್ಠಿಯಾಗುತ್ತಿರುವ ನೀರಿನ ಸಮಸ್ಯೆಯನ್ನು ಪುರಸಭೆ ನಿರ್ವಹಿಸಲು ಸೋತಿರುವುದು, ಮೊದಲಾದವುಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.ಮುಖ್ಯವಾಗಿ ಕಾರ್ಕಳ ಪುರಸಭೆ ಘನ ತ್ಯಾಜ್ಯ ನಿರ್ವಹಣೆಗಾಗಿ ಶೇ.15 ತೆರಿಗೆ ಏರಿಕೆ ಮಾಡಿರುವ ಕುರಿತು ಸಭೆಯಲ್ಲಿ ಬಲವಾದ ವಿರೋಧ ವ್ಯಕ್ತವಾಯಿತು.

Advertisement

ಪುರಸಭೆಯಿಂದ ಹಗಲು ದರೋಡೆ
ತ್ಯಾಜ್ಯ ನಿರ್ವಹಣೆಯಲ್ಲಿ ಪುರಸಭೆ ಹಿಂದಿನಂತೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿಲ್ಲ.ಆದರೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸಾರ್ವಜನಿಕರಿಂದ ತೆರಿಗೆ ಸುಲಿಗೆ ನಿರಂತರವಾಗಿ ನಡೆಯುತ್ತಿದೆ. ಇದೀಗ ಶೇ. 15ರಷ್ಟು ತೆರಿಗೆ ಏರಿಕೆ ಮಾಡಿದ್ದು ಖಂಡನಾರ್ಹ.ಇದರಿಂದ ಬಡವರು ತ್ರಾಸ ಪಡುತ್ತಿದ್ದಾರೆ. ಮನೆ ಮನೆಗೂ ತ್ಯಾಜ್ಯ ಸಂಗ್ರಹಣೆಯನ್ನು ಪುರಸಭೆ ಸರಿಯಾಗಿ ಮಾಡುತ್ತಿಲ್ಲ.ಅದರ ನಡುವೆ ಇದೀಗ ಚ.ಅಡಿಗೆ ತೆರಿಗೆಯನ್ನು 60 ಪೈಸೆಗೆ ಹೆಚ್ಚಿಸಲಾಗಿದೆ. ಇದು ಪುರಸಭೆಯ ಹಗಲು ದರೋಡೆ. ಕೂಡಲೇ ಇದನ್ನು 20 ಪೈಸೆಗೆ ಇಳಿಸಬೇಕು ಇಲ್ಲದಿದ್ದರೆ ಪ್ರತಿಭಟಿಸಲಾಗುವುದು ಎಂದು ಸದಸ್ಯ ಅಶ#ಕ್‌ ಅಹಮ್ಮದ್‌ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಈ ನಿರ್ಣಯವನ್ನು ಹಿಂಪಡೆದು ತೆರಿಗೆಯನ್ನು ಇಳಿಸದಿದ್ದರೆ ಸಭೆಯನ್ನು ಇಲ್ಲಿಗೇ ಮೊಟಕು ಗೊಳಿಸಲಾಗುವುದು ಎಂದು ಸದಸ್ಯರು ಸಭೆಯಲ್ಲಿ ಮುಖ್ಯಾಧಿಕಾರಿಯವರ ವಿರುದ್ದ ಧಿಕ್ಕಾರ ಕೂಗಿದರು.

ಸದಸ್ಯ ಶುಭದ್‌ ರಾವ್‌ ಮಾತನಾಡಿ, ಆಡಳಿತ ಪಕ್ಷವೇ ಇಂತಹ ಹಗಲು ದರೋಡೆಯಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಬಲವಾದ ಚರ್ಚೆಗಳಾದವು.ಸದಸ್ಯರಾದ ವಿವೇಕಾನಂದ ಶೆಣೈ, ಪ್ರತಿಮಾ ಮೋಹನ್‌, ಪ್ರಕಾಶ್‌ ರಾವ್‌, ಯೋಗೀಶ್‌ ಮೊದಲಾದವರು ಈ ಕುರಿತು ಅಭಿಪ್ರಾಯ ತಿಳಿಸಿದರು.

ಮುಖ್ಯಾಧಿಕಾರಿ ಮಾತನಾಡಿ, ನಿರ್ಣಯವನ್ನು ಆರು ತಿಂಗಳವರೆಗೆ ಬದಲಾಯಿಸಲು ಸಾಧ್ಯವಿಲ್ಲ.ಆರು ತಿಂಗಳ ಬಳಿಕ ತೆರಿಗೆ ಕಡಿತ ಮಾಡಲಾಗುವುದು ಎಂದು ಹೇಳಿದರು. ಹಾಗಾದರೆ ಆರು ತಿಂಗಳ ಬಳಿಕ ಸಭೆ ಮಾಡಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಹಾಗೂ ವಿರೋಧ ಪಕ್ಷಗಳ ನಿರಂತರ ಒತ್ತಾಯದಿಂದಾಗಿ ಮುಖ್ಯಾಧಿಕಾರಿಯವರು ಸರ್ವಾ ನುಮತದಿಂದ ನಿರ್ಣಯ ಕೈಗೊಂಡು ಘನ ತ್ಯಾಜ್ಯ ನಿರ್ವಹಣೆಯಲ್ಲಿ  ಸಾರ್ವಜನಿಕರಿಗೆ ಚ.ಅಡಿಗೆ 20ಪೈಸೆ ರಷ್ಟು ಹಾಗೂ ವಾಣಿಜ್ಯಗಳಿಗೆ 30 ಪೈಸೆ ಮಾಡಲಾಗುವುದು ಎಂದು ಘೋಷಿಸಿದರು.

Advertisement

ಹಾಲ್‌ಗ‌ಳ ತೆರಿಗೆ ಇನ್ನೂ ಬಾಕಿ
ಸ್ಥಾಯಿ ಸಮಿತಿ ಸದಸ್ಯ ಅಕ್ಷಯ್‌ ರಾವ್‌ ಮಾತನಾಡಿ, ನಗರದಲ್ಲಿರುವ ಹಾಲ್‌ಗ‌ಳ ತೆರಿಗೆಗಳು ಇನ್ನೂ ಬಾಕಿ ಇವೆ.ಆ ಕುರಿತು ಪುರಸಭೆಗೆ ಕಾಳಜಿ ಇಲ್ಲ.ಆದರೆ ಸಾರ್ವಜನಿಕರಿಗೆ ಬೇಕಾಬಿಟ್ಟಿ ತೆರಿಗೆ ವಿಧಿಸಲಾಗುತ್ತಿದೆ ಎಂದು ಆರೋಪಿಸಿದರು.

ಹೂಳೆತ್ತಲು ಕ್ರಮ ಕೈಗೊಳ್ಳಿ
ಸದಸ್ಯ ಮೊಹಮ್ಮದ್‌ ಶರೀಫ್‌ ಮಾತನಾಡಿ,ವಿವಿಧ ವಾರ್ಡ್‌ಗಳಲ್ಲಿ ಜನ ನೀರಿಲ್ಲದೇ ತ್ರಾಸ ಪಡುತ್ತಿದ್ದಾರೆ. ನಗರಕ್ಕೆ ಬಿಡುತ್ತಿರುವ  ನೀರನ್ನು ನಗರದ ಹೊರಗಿರುವ ವಾರ್ಡ್‌ಗಳಿಗೆ ಬಿಡುತ್ತಿಲ್ಲ ಎಂದು ಆರೋಪಿಸಿದರು.

ಸದಸ್ಯರಾದ ಶುಭದ್‌ ರಾವ್‌ ಮಾತನಾಡಿ, ಕಾರ್ಕಳದ ಜೀವ ವಾಹಿನಿಯಾದ ಮುಂಡ್ಲಿ ಜಲಾಶಯ ಬತ್ತಿ ಹೋಗಿದೆ. ಆದರೂ ಅಲ್ಲಿ ಈ ವರೆಗೆ ಹೂಳೆತ್ತುವ ಕಾರ್ಯ ನಡೆದಿಲ್ಲ.ಕಳೆದ ವರ್ಷವೇ ಹೂಳೆತ್ತುವ ಕಾರ್ಯಕ್ರಮ ನಡೆಸಿದ್ದರೆ ಈ ಸಲ ನೀರಿಗೆ ಬರಗಾಲ ಬರುತ್ತಿರಲಿಲ್ಲ ಎಂದರು.

ಸದಸ್ಯ ನವೀನ್‌ ದೇವಾಡಿಗ ಮಾತನಾಡಿ, 25 ವರ್ಷಗಳಿಂದ ಮುಂಡ್ಲಿ ಜಲಾಶಯದ ಹೂಳೆತ್ತುವ ಕಾರ್ಯ ನಡೆದಿಲ್ಲ. ಆದ್ದರಿಂದ ನೀರು ಬತ್ತಿ ಹೋಗಿದೆ. ಇದಕ್ಕೆ ಪುರಸಭೆಯೇ ಹೊಣೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಸದಸ್ಯರು ಕೊಡಪಾನ ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಯೋಗ್ಯಾಸ್‌ ಘಟಕ ಲೆಕ್ಕಕ್ಕಿಲ್ಲ
ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಶಬರಿ ಆಶ್ರಮದ ಪರಿಸರದಲ್ಲಿ ನಿರ್ಮಿಸಿದ ಬಯೋಗ್ಯಾಸ್‌ ಘಟಕ ಇದೀಗ ಪ್ರಯೋಜನವಿಲ್ಲದಂತಾಗಿದೆ.ಎಲ್ಲಾ ಕಾಮಗಾರಿಗಳನ್ನು ನಡೆಸದೇ ಇದನ್ನು  ಪುರಸಭೆ ಉದ್ಘಾಟಿಸಿದೆ ಎಂದು  ಅಹಮ್ಮದ್‌ ಆರೋಪಿಸಿದರು.

ಇದಕ್ಕೆ ಪ್ರಕ್ರಿಯಿಸಿದ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ, ಆ ಘಟಕದಲ್ಲಿ ವಿದ್ಯುತ್‌ ಸಂಪರ್ಕ ಕೊಡಲು ಬಾಕಿ ಇದೆ ಅಷ್ಟೆ ಎಂದರು. ಸದಸ್ಯ ನವೀನ್‌ ದೇವಾಡಿಗ ಮಾತನಾಡಿ, ವಿದ್ಯುತ್‌ ಸಂಪರ್ಕ ಕೊಡದೇ ಆ ಘಟಕವನ್ನು ಉದ್ಘಾಟಿಸಿದ್ದು ಯಾಕೆ? ಪುರಸಭೆಗೆ ಅಷ್ಟೂ ವಿವೇಚನೆ ಇಲ್ಲವೇ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಅಧ್ಯಕ್ಷೆ ಅನಿತಾ ಅಂಚನ್‌, ಉಪಾಧ್ಯಕ್ಷ ಗಿರಿಧರ್‌ ನಾಯಕ್‌, ಸ್ಥಾಯಿಸಮಿತಿ ಅಧ್ಯಕ್ಷ ಅಕ್ಷಯ್‌ ರಾವ್‌, ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next