ಬೆಂಗಳೂರು: ರಾಜ್ಯದ ವಿವಿಧ ಆರ್‌ಟಿಒ ಕಚೇರಿಗಳಲ್ಲಿ ಐಷಾರಾಮಿ ಕಾರುಗಳಿಗೆ ಜೀವಾವಧಿ ತೆರಿಗೆ ಪಾವತಿಸಿಕೊಳ್ಳದೆ ನೋಂದಣಿ ಮಾಡಿ ನೂರಾರು ಕೋಟಿ ರೂ. ತೆರಿಗೆ ಸರಕಾರಕ್ಕೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಸಿಎಜಿ ವರದಿ ತರಿಸಿಕೊಂಡು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಪ್ರಶೋತ್ತರ ವೇಳೆ ಜೆಡಿಎಸ್‌ನ ಸದಸ್ಯ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಈ ಪ್ರಕರಣದಲ್ಲಿ ಅಧಿಕಾರಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಈ ಸಂಬಂಧ 226 ಪ್ರಕರಣಗಳು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸರಕಾರ ಕಠಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕಳೆದ ಬಾರಿ ಕೂಡ ಈ ಬಗ್ಗೆ ಸದನಲ್ಲಿ ವಿಷಯ ಪ್ರಸ್ತಾವ ಮಾಡಲಾಗಿತ್ತು. ಸಿಐಡಿ ತನಿಖೆಗೆ ಪ್ರಕರಣ ವಹಿಸುವ ಭರವಸೆಯನ್ನು ಸರಕಾರ ನೀಡಿತ್ತು. ಆದರೆ ಸರಕಾರ ಇನ್ನೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ತನಿಖಾ ವಿಚಾರಣೆ ಕೂಡ ಆರಂಭವಾಗಿಲ್ಲ. ಸರಕಾರಕ್ಕೆ ಏಕಿಷ್ಟು ಉದಾಸೀನತೆ? 40 ಪರ್ಸೆಂಟ್ ಕಮಿಷನ್ ವ್ಯವಸ್ಥೆ ಇದರಲ್ಲಿ ಭಾಗಿಯಾಗಿದೆ ಎಂದು ಇದೇ ಸಂದರ್ಭ ಮಂಜೇಗೌಡ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಸದನದಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಹೇಳಿದ್ದೆ. ಆದರೆ ಈ ಬಗ್ಗೆ ಸಂಪೂರ್ಣ ಆಡಿಟ್ ನಡೆಸಿ ವರದಿ ಪಡೆಯುವಲ್ಲಿ ವಿಳಂಬವಾಗಿದೆ. ಹೀಗಾಗಿ, ಪ್ರಕರಣ ಸಿಐಡಿಗೆ ವಹಿಸುವುದು ತಡವಾಗಿದೆ. ಆದರೆ ಮಹಾಲೇಖಪಾಲರ ಆಡಿಟ್ ವರದಿ ಬಂದ ಅನಂತರ ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರು ಹಾಗೂ ಇತರ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.