Advertisement

ಮೊದಲ ತಿಂಗಳಲ್ಲಿ ಆಶಾದಾಯಕ ತೆರಿಗೆ ಸಂಗ್ರಹ

01:31 AM May 04, 2021 | Team Udayavani |

ಬೆಂಗಳೂರು:  2021- 22ನೇ ಆರ್ಥಿಕ ವರ್ಷದ ಮೊದಲ ತಿಂಗಳಾಗಿರುವ  ಎಪ್ರಿಲ್‌ನಲ್ಲಿ ರಾಜ್ಯ ಸರಕಾರದ ನಾಲ್ಕು ತೆರಿಗೆ ಮೂಲ ಗಳಿಂದ ಸುಮಾರು 8,633 ಕೋ. ರೂ. ಆದಾಯ ಸಂಗ್ರಹವಾಗಿದೆ.

Advertisement

ಕೋವಿಡ್‌ ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಜಾರಿ ಜತೆಗೆ ಸರಕಾರ ಎ. 27ರಿಂದ ಇನ್ನಷ್ಟು ಬಿಗಿ ನಿರ್ಬಂಧಗಳನ್ನು ವಿಧಿಸಿರುವುದರಿಂದ ತೆರಿಗೆ ಆದಾಯ ಸಂಗ್ರಹದಲ್ಲಿ ತುಸು ಏರುಪೇರಾ

ದರೂ ತಿಂಗಳ ಆರಂಭದಲ್ಲಿ ಆದಾಯ ಸಂಗ್ರಹ ಸಮಾಧಾನಕರವಾಗಿತ್ತು. ಆದರೆ ಮೇ 12ರ ವರೆಗೆ ಜಾರಿಯಲ್ಲಿರುವ ಕಠಿನ ನಿರ್ಬಂಧ ಕ್ರಮಗಳು  ಇನ್ನಷ್ಟು ದಿನ ವಿಸ್ತರಣೆಯಾದರೆ  ಈ ತಿಂಗಳ ತೆರಿಗೆ ಸಂಗ್ರಹ ಇಳಿಕೆಯಾಗುವ ಸಾಧ್ಯತೆ ಇದೆ.

ಉತ್ತಮ ವಾಣಿಜ್ಯ ತೆರಿಗೆ ಆದಾಯ :

ಎಪ್ರಿಲ್‌ನಲ್ಲಿ ರಾಜ್ಯ ಜಿಎಸ್‌ಟಿ ರೂಪದಲ್ಲಿ ಸರಕಾರಕ್ಕೆ 5,100 ಕೋ. ರೂ. ಸಂಗ್ರಹವಾಗಿದೆ. ಪೆಟ್ರೋಲ್‌, ಡೀಸೆಲ್‌ ಮಾರಾಟದಿಂದ ಮಾಸಿಕ ವಾಗಿ ಸರಾಸರಿ 1,500 ಕೋ. ರೂ. ಮಾರಾಟ ತೆರಿಗೆ ಸಂಗ್ರಹವಾಗುತ್ತಿದೆ. ಜತೆಗೆ ಜಿಎಸ್‌ಟಿ ಪರಿಹಾರವೂ ಸಹಿತ ಒಟ್ಟು 7,000 ಕೋ. ರೂ. ಆದಾಯ ಬರುವ ನಿರೀಕ್ಷೆ ಇದೆ.  2020ರ ಎಪ್ರಿಲ್‌ನಲ್ಲಿ ಲಾಕ್‌ಡೌನ್‌ ಜಾರಿ ನಡುವೆಯೂ 3,566 ಕೋ.ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು.

Advertisement

2,205 ಕೋ. ರೂ. ಆದಾಯ! :

ಲಾಕ್‌ಡೌನ್‌ ಜತೆಗೆ ವರ್ಷವಿಡೀ ಕೋವಿಡ್‌ ಹಾವಳಿ ಮಧ್ಯೆ 2020-21ನೇ ಸಾಲಿನಲ್ಲಿ ಶೇ. 100ರ ಗುರಿ ಮೀರಿ ತೆರಿಗೆ ಸಂಗ್ರಹವಾಗಿದ್ದ ಅಬಕಾರಿ   ಮೂಲದಿಂದ ಈ ಎಪ್ರಿಲ್‌ನಲ್ಲಿ 2,205 ಕೋ. ರೂ. ಸಂಗ್ರಹವಾಗಿದೆ. ಸಾಮಾನ್ಯ ಸಂದರ್ಭದಲ್ಲಿ 2,100ರಿಂದ 2,200 ಕೋ. ರೂ.  ಸಂಗ್ರಹವಾಗುತ್ತಿತ್ತು.

ಮುದ್ರಾಂಕ- ನೋಂದಣಿ ಶುಲ್ಕ ಆಶಾದಾಯಕ :

ರಾಜ್ಯಾದ್ಯಂತ ಮುದ್ರಾಂಕ ಮತ್ತು ನೋಂದಣಿ ಶುಲ್ಕ ರೂಪದಲ್ಲಿ ಎಪ್ರಿಲ್‌ನಲ್ಲಿ ಸುಮಾರು 844 ಕೋ. ರೂ. ಸಂಗ್ರಹವಾಗಿದೆ. 2020ರ ಎಪ್ರಿಲ್‌ನಲ್ಲಿ ಲಾಕ್‌ಡೌನ್‌ ಪರಿಣಾಮ ಸರಕಾರಕ್ಕೆ ಕೇವಲ 29 ಕೋ. ರೂ. ಆದಾಯವಷ್ಟೇ ಸಂಗ್ರಹವಾಗಿತ್ತು. ಎ. 27ರಿಂದ ಬಿಗಿ ನಿರ್ಬಂಧ ಕ್ರಮಗಳ ಜಾರಿ ನಡುವೆಯೂ ಆಸ್ತಿ ನೋಂದಣಿಗೆ ಅವಕಾಶವಿದ್ದರೂ ಹೆಚ್ಚು ಸ್ಪಂದನೆ ಇಲ್ಲದ ಕಾರಣ ನಿರೀಕ್ಷಿತ ಆದಾಯ ಸಂಗ್ರಹದಲ್ಲಿ ತುಸು ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗುರಿಗಿಂತ 66 ಕೋ. ರೂ. ಕಡಿಮೆ   :

ಸಾರಿಗೆ ತೆರಿಗೆ ಮೂಲದಿಂದ ಎಪ್ರಿಲ್‌ನಲ್ಲಿ 550 ಕೋ. ರೂ. ಆದಾಯ ಸಂಗ್ರಹದ ಗುರಿ  ಹೊಂದಲಾಗಿತ್ತು. ಆದರೆ ತಿಂಗಳಿಡೀ ತೆರಿಗೆ ರೂಪದಲ್ಲಿ ಸಂಗ್ರಹವಾಗಿ ರುವುದು 484 ಕೋ. ರೂ. ಮಾತ್ರ. ಎ. 27ರಿಂದ ಕಠಿನ ಕ್ರಮ ಜಾರಿಯಲ್ಲಿರುವುದರಿಂದ ಹೊಸ ವಾಹನಗಳ ನೋಂದಣಿ ಗಣನೀಯ ವಾಗಿ ಇಳಿದಿದೆ. 2020ರ ಎಪ್ರಿಲ್‌ನಲ್ಲಿ ಲಾಕ್‌ಡೌನ್‌ ಇದ್ದ ಕಾರಣ ಸುಮಾರು 35 ಕೋ. ರೂ. ಆದಾಯ ಬಂದಿತ್ತು ಎಂದು ಮೂಲಗಳು ಹೇಳಿವೆ.

ಮೇ ತಿಂಗಳ ಆದಾಯ ಖೋತಾ? :

ಎ. 27ರಿಂದ ಮೇ 12ರ ವರೆಗೆ ವಿಧಿಸಿರುವ ನಿರ್ಬಂಧ ಕ್ರಮಗಳಿಂದ 15 ದಿನ ರಾಜ್ಯಾದ್ಯಂತ  ವ್ಯಾಪಾರ- ವ್ಯವಹಾರ ಕಡಿಮೆಯಾಗಲಿದೆ. ಈ ಅವಧಿಯಲ್ಲಿ ಹೊಟೇಲ್‌, ಮದ್ಯ ಮಾರಾಟ ಮಳಿಗೆಗಳಲ್ಲಿ ಪಾರ್ಸೆಲ್‌ನಷ್ಟೇ ಅವಕಾಶವಿದ್ದು ಸಹಜವಾಗಿ ವಹಿವಾಟು ಇಳಿಕೆಯಾಗಲಿದೆ. ಅನಗತ್ಯ ಸಂಚಾರವನ್ನೂ ನಿರ್ಬಂಧಿಸಿರುವುದರಿಂದ ಪೆಟ್ರೋಲ್‌, ಡೀಸೆಲ್‌ ಮಾರಾಟವೂ ಇಳಿಕೆಯಾದರೆ ಮಾರಾಟ ತೆರಿಗೆ ಆದಾಯವೂ ಕುಸಿತವಾಗಲಿದೆ. ನಿರ್ಬಂಧ ಕ್ರಮಗಳು ಹೊಸ ವಾಹನ, ಆಸ್ತಿ ನೋಂದಣಿ ಪ್ರಕ್ರಿಯೆ ಮೇಲೆಯೂ ಪರಿಣಾಮ ಬೀರಲಿವೆ. ಆದ್ದರಿಂದ ಮೇ ತಿಂಗಳ ತೆರಿಗೆ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಬಿ.ಟಿ. ಮನೋಹರ್‌, ರಾಜ್ಯ ಜಿಎಸ್‌ಟಿ ಸಮಿತಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next