Advertisement

ಗುರಿ ಮೀರಿ ತೆರಿಗೆ ಸಂಗ್ರಹ: ಸಿಎಂ ಮೆಚ್ಚುಗೆ

12:05 PM Sep 15, 2018 | Team Udayavani |

ಬೆಂಗಳೂರು: ತೆರಿಗೆ ಸಂಗ್ರಹ ಕಾರ್ಯದಲ್ಲಿ ಎಲ್ಲ ಇಲಾಖೆಗಳು ಗುರಿ ಮೀರಿದ ಸಾಧನೆ ತೋರಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ತೆರಿಗೆ ಸಂಗ್ರಹ ಕಾರ್ಯದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಸೂಚನೆ ನೀಡಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳು ಪರಿಣಾಮಕಾರಿಯಾಗಿ ಪರಿಶೀಲನಾ ಕಾರ್ಯ ಕೈಗೊಂಡು ತೆರಿಗೆ ಸಂಗ್ರಹಕ್ಕೆ ಒತ್ತು ನೀಡಬೇಕು.

ಸರ್ಕಾರದ ದೂರದರ್ಶಿತ್ವದ ಯೋಜನೆಗಳು ಯಶಸ್ವಿಯಾಗಲು ತೆರಿಗೆ ಸಂಗ್ರಹ ಕಾರ್ಯ ಯಶಸ್ವಿಯಾಗಿ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಕಾರ್ಯೋನ್ಮುಖವಾಗಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಸ್ವ/ ತೆರಿಗೆ ಸಂಗ್ರಹ ಕಾರ್ಯ ಜನಸ್ನೇಹಿಯಾಗಿರಲಿ. ಆದರೆ ನಾಗರಿಕರು ಸರ್ಕಾರಕ್ಕೆ ಪಾವತಿಸಬೇಕಾದ ಸೂಕ್ತ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಮಣ್ಯ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌.ಪ್ರಸಾದ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಯಾವ ಇಲಾಖೆಯಿಂದ ಎಷ್ಟು ತೆರಿಗೆ ಸಂಗ್ರಹ?
* ವಾಣಿಜ್ಯ ತೆರಿಗೆ ಇಲಾಖೆಯು ಕಳೆದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಒಟ್ಟು 28,537 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ಸೆಪ್ಟೆಂಬರ್‌ನಿಂದ ಮಾರ್ಚ್‌ ಅಂತ್ಯದೊಳಗೆ 38,383 ಕೋಟಿ ರೂ. ತೆರಿಗೆ ಸಂಗ್ರಹವಾಗುವ ಅಂದಾಜು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18.7ರಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ.

* ಅಬಕಾರಿ ಇಲಾಖೆಯು ಪ್ರಸಕ್ತ ವರ್ಷದಲ್ಲಿ 19,750 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿದ್ದು, ಆಗಸ್ಟ್‌ ಅಂತ್ಯಕ್ಕೆ 8,150.45 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 996.73 ಕೋಟಿ ರೂ. ತೆರಿಗೆ ಏರಿಕೆಯಾಗಿದೆ. 

* ಸಾರಿಗೆ ಇಲಾಖೆಯು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 2,377.67 ಕೋಟಿ ರೂ. ರಾಜಸ್ವ ಸಂಗ್ರಹಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 161.15 ಕೋಟಿ ರೂ. ತೆರಿಗೆ ಹೆಚ್ಚಳ ಕಂಡಿದೆ.

* ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಲ್ಲಿ ರಾಜಸ್ವ ಸಂಗ್ರಹದಲ್ಲಿ ಮೂರನೇ ಸ್ಥಾನದಲ್ಲಿದ್ದು, ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 4,300 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದರೆ 4,332 ಕೋಟಿ ರೂ. ಸಂಗ್ರಹಿಸಿದೆ.

* ಗಣಿ ಮತ್ತು ಭೂವಿಜ್ಞಾನ ಇಲಾಖೆಯು ವಾರ್ಷಿಕ ರಾಜಸ್ವ ತೆರಿಗೆ ಸಂಗ್ರಹ ಗುರಿ 3000 ಕೋಟಿ ರೂ. ಇದ್ದರೆ ಜುಲೈವರೆಗೆ 728.15 ಕೋಟಿ ರೂ. ರಾಜಸ್ವ ಸಂಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next