ಹುಣಸೂರು: ಹುಣಸೂರು ನಗರಸಭೆಗೆ ಕೋಟ್ಯಾಂತರ ರೂ ತೆರಿಗೆ ಬಾಕಿ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳೇ ಮನೆಮನೆಗೆ ತೆರಳಿ ತೆರಿಗೆ ಸಂಗ್ರಹ ಕಾರ್ಯಕ್ಕೆ ನಗರಸಭೆ ಅಧ್ಯಕ್ಷೆ ಸೌರಭ ಸಿದ್ದರಾಜು ಚಾಲನೆ ನೀಡಿದರು.
ನಗರದ ಕಲ್ಪತರು ವೃತ್ತದಲ್ಲಿ ಮನೆ ಮಾಲಿಕರಿಗೆ ತೆರಿಗೆ ಸಂದಾಯದ ರಸೀತಿಯನ್ನು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕೌನ್ಸಿಲ್ ನಿರ್ಣಯದಂತೆ ಆಸ್ತಿ ತೆರಿಗೆ ಮತ್ತು ನೀರಿನ ಕಂದಾಯ ಬಾಕಿ ವಸೂಲಿಗಾಗಿ ನಗರಸಭೆ ವಾಹನದಲ್ಲಿ ಮನೆ ಮಾಲಿಕರಿಗೆ ಸ್ಥಳದಲ್ಲೇ ಚಲನ್ ಮುದ್ರಿಸಿ ನೀಡಿ, ಬ್ಯಾಂಕಿನಲ್ಲಿ ಹಾಗೂ ಚೆಕ್ ಮೂಲಕವೂ ಪಾವತಿಸಲು ಅವಕಾಶ ಕಲ್ಪಿಸಿದ್ದರು. ಸ್ಥಳದಲ್ಲೇ ರಸೀತಿ ನೀಡಲಾಗುವುದು, ಈ ಸೌಲಭ್ಯವನ್ನು ನಾಗರೀಕರು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಒಂದೇದಿನ 9 ಲಕ್ಷ ವಸೂಲಿ:
ಕಂದಾಯಾಧಿಕಾರಿ ನಂಜುಂಡಸ್ವಾಮಿ ಮಾತನಾಡಿ ಪ್ರತಿ ವಾರ್ಡಿನಲ್ಲೂ ತೆರಿಗೆ ವಸೂಲಿಗೆ ದಿನಾಂಕ ನಿಗದಿಗೊಳಿಸಲಾಗಿದೆ, ಈ ಬಗ್ಗೆ ಆಯಾ ವಾರ್ಡ್ಗಳಲ್ಲಿ ಪ್ರಚುರ ಪಡಿಸಲಾಗುವುದು, ಇದರಿಂದ ನಾಗರೀಕರು ತೆರಿಗೆ ಪಾವತಿಸುವ ಚಲನ್ ಪಡೆಯಲು ಕಚೇರಿಗೆ ಅಲೆಯುವುದು ತಪ್ಪಲಿದೆ. ನಗರಸಭೆಗೆ ತೆರಿಗೆ ಪಾವತಿಯಿಂದ ಆದಾಯ ಬರಲಿದೆ. ಒಂದೇದಿನದಲ್ಲಿ ೯ ಲಕ್ಷರೂ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿಸಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷ ದೇವನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್, ರೆವಿನ್ಯೂ ಇನ್ಸ್ಪೆಕ್ಟರ್‌ಗಳಾದ ಸಿದ್ದಯ್ಯ, ಸಿದ್ದರಾಜು, ಸುರೇಂದ್ರ, ಬಿಲ್ ಕಲೆಕ್ಟರ್ ಸುಭಾಷ್, ಡಾಟಾ ಎಂಟ್ರಿ ಆಪರೇಟರ್ ನವೀನ್ ಹಾಗೂ ಸಿಬ್ಬಂದಿಗಳಿದ್ದರು.