Advertisement

ತೆರಿಗೆ ತಾರದ ಅಧಿಕಾರಿಗಳಿಗೆ ತಪರಾಕಿ

12:06 PM Mar 10, 2017 | |

ಬೆಂಗಳೂರು: ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಿಕ್ಕೂ ಅವಕಾಶ ಇದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ ಎಂದು ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಬೇಸರ ವ್ಯಕ್ತಪಡಿಸಿದ್ದಾರೆ. 

Advertisement

ನಗರದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಗುರುವಾರ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2016-17ನೇ ಸಾಲಿನ ವಾರ್ಷಿಕ ಅನುದಾನದಲ್ಲಿ ಟೆಂಡರ್‌ ಕರೆಯಲಾದ 2,069 ಕಾಮಗಾರಿಗಳ ಪೈಕಿ 728 ಕಾಮಗಾರಿಗಳಿಗೆ ಏಕಗವಾಕ್ಷಿ ಪದ್ಧತಿ ಅಡಿ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದರು.

ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಮಾತ್ರವಲ್ಲ; ಆಸ್ತಿ ತೆರಿಗೆಯನ್ನು ತಪ್ಪಾಗಿ ಘೋಷಿಸುವವರ ಮೇಲೆ ಕ್ರಮ ಕೈಗೊಳ್ಳಬಹುದು. ಇಂತಹವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಿಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಇದನ್ನು ಜಾರಿಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಅಧಿಕಾರಿಗಳಿಗೆ ಆಸಕ್ತಿ ಇಲ್ಲ: ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚು ತೆರಿಗೆ ಸಂಗ್ರಹ ಆಗಿರಬಹುದು. ಆದರೆ, ಸರ್ಕಾರ ಕೂಡ ತೆರಿಗೆ ಹೆಚ್ಚಿಸಿತ್ತು. ಹಾಗಾಗಿ, ಪಾಲಿಕೆಯ ಪ್ರಸಕ್ತ ಸಾಲಿನ ಸಾಧನೆ ತೃಪ್ತಿಕರವಾಗಿಲ್ಲ. ವಿದ್ಯುತ್‌ ಸರಬರಾಜು ಕಂಪೆನಿಗಳು, ಜಲ ಮಂಡಳಿ, ಮೊಬೈಲ್‌ ಕಂಪೆನಿಗಳು ಆಯಾ ತಿಂಗಳು ಗ್ರಾಹಕರಿಂದ ವ್ಯವಸ್ಥಿತವಾಗಿ ಬಿಲ್‌ ಸಂಗ್ರಹ ಮಾಡುತ್ತವೆ. ಇದು ಬಿಬಿಎಂಪಿಯಲ್ಲಿ ಯಾಕೆ ಆಗುತ್ತಿಲ್ಲ ಎಂದು ಕೇಳಿದ ಸಚಿವ ಜಾರ್ಜ್‌, ಅಧಿಕಾರಿಗಳು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಿಲ್ಲ ಎಂದರು. 

ಪಾಲಿಕೆಗೆ ತೆರಿಗೆಯೇ ಆರ್ಥಿಕ ಮೂಲ. ಆದ್ದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಆಸ್ತಿಗಳಿವೆ? ಇನ್ನೂ ಎಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಗೊಳಪಡಬೇಕು ಎನ್ನುವುದು ಸೇರಿದಂತೆ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳಕ್ಕೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಜಿಐಎಸ್‌ ಮೂಲಕ ಆಸ್ತಿ ತೆರಿಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಆಸ್ತಿಗಳ ಪತ್ತೆಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ತಾಂತ್ರಿಕ ನೆರವು ಪಡೆಯಬೇಕು ಎಂದು ಹೇಳಿದರು. 

Advertisement

ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿಸಮಿತಿ ಅಧ್ಯಕ್ಷ ಬಿ. ಭದ್ರೇಗೌಡ ಮಾತನಾಡಿ, “”2016-17ನೇ ಸಾಲಿನಲ್ಲಿ 465 ಕೋಟಿ ಅನುದಾನದಲ್ಲಿ 2,069 ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿತ್ತು. 1,526 ಕಾಮಗಾರಿಗಳ ಪೈಕಿ 728 ಕಾಮಗಾರಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಗಿದೆ,” ಎಂದು ಹೇಳಿದರು. ಆಡಳಿತ ಪಕ್ಷ  ನಾಯಕ ರಿಜ್ವಾನ್‌, ಸಮಿತಿ ಸದಸ್ಯರಾದ ಮೋಹನ್‌ ಕುಮಾರ್‌, ಮಂಜುನಾಥ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ಇದ್ದರು.

ಟ್ರಾಫಿಕ್‌ ಸಮಸ್ಯೆಗೆ ನಗರದ ಸುತ್ತ ಎತ್ತರಿಸಿದ ಮಾರ್ಗ 
ನಗರ ವಾಹನದಟ್ಟಣೆ ತಗ್ಗಿಸಲು ಉತ್ತರ-ದಕ್ಷಿಣ ಮತ್ತು ಪೂರ್ವ- ಪಶ್ಚಿಮ ಎಲಿವೇಟೆಡ್‌ ಕಾರಿಡಾರ್‌ಗಳನ್ನು (ಎತ್ತರಿಸಿದ ಮಾರ್ಗ) ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಗೊಂಡಿದೆ ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. ಸುಮಾರು 15ರಿಂದ 20 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ವಿದೇಶಿ ಕಂಪೆನಿಗಳು ಬಂಡವಾಳ ಹೂಡಲು ಆಸಕ್ತಿ ಹೊಂದಿವೆ. ತಜ್ಞರು, ಸಾರ್ವಜನಿಕ ರಿಂದ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಿ ಸರ್ಕಾರ ಮುಂದಡಿ ಇಡಲಿದೆ ಎಂದರು. 

ಮಳೆಗಾಲ ಬರ್ತಿದೆ, ನೆಪ ಹೇಳದೆ ಕಾಮಗಾರಿ ಆರಂಭಿಸಬೇಕು 
ಮೇಯರ್‌ ಜಿ. ಪದ್ಮಾವತಿ ಮಾತನಾಡಿ, “ಗುತ್ತಿಗೆದಾರರಿಗೆ ಕಾರ್ಯಾದೇಶ ಪಡೆಯು ವಲ್ಲಿ ಆಗುತ್ತಿದ್ದ ಅಡತಡೆ ನಿವಾರಣೆಗೆ ಏಕಗವಾಕ್ಷಿ ಪದ್ಧತಿ ಅಡಿ ಕಾರ್ಯಾದೇಶ ಪತ್ರ ವಿತರಿಸ ಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮಳೆ ಗಾಲ ಶುರುವಾಗುವುದರಿಂದ ಗುತ್ತಿಗೆದಾರರು ಯಾವುದೇ ಸಮಜಾಯಿಷಿ ನೀಡದೆ, ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು,” ಎಂದು ತಾಕೀತು ಮಾಡಿದರು. 

ಬಿಬಿಎಂಪಿಯಲ್ಲಿ ಈಗಾಗಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಎರಡು ವರ್ಷಗಳಿಂದ ಬಿಲ್‌ ಆಗಿಲ್ಲ. ಬಾಕಿ ಪಾವತಿಗೆ ಸರ್ಕಾರ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. 
-ಪದ್ಮನಾಭ ರೆಡ್ಡಿ, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next