ತಾವರಗೇರಾ: ಕಾರುವೊಂದನ್ನು ಅಡ್ಡಗಟ್ಟಿ ದುಷ್ಕರ್ಮಿಗಳು 5 ಲಕ್ಷ ರೂ. ದರೋಡೆ ಮಾಡಿದ ಘಟನೆ ಪಟ್ಟಣದ ಸಮೀಪದ ಕಿಲ್ಲಾರಹಟ್ಟಿ ಡಗ್ಗಿ ಬಳಿ ಜು.2ರ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.
ಲಿಂಗಸಗೂರಿನಿಂದ ಕೊಪ್ಪಳಕ್ಕೆ ವ್ಯವಹಾರಕ್ಕೆ ಸಂಬಂಧಿಸಿ ಲಿಂಗಸೂರ ಪಟ್ಟಣದ ಶಿವಾನಂದ ಐದನಾಳ, ವಿಜಯ ಮಹಾಂತೇಶ ಪಲ್ಲೇದ ಹಾಗೂ ಖಾಲೀದ್ ಅಹ್ಮದ್ 5 ಲಕ್ಷ ರೂ. ತೆಗೆದುಕೊಂಡು ಇನೋವಾ ಕಾರಿನಲ್ಲಿ ಕೊಪ್ಪಳಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಸಂದರ್ಭ ಕಿಲ್ಲಾರಹಟ್ಟಿ ಡಗ್ಗಿ ಬಳಿ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್ ನಲ್ಲಿ 5 ಜನ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಬ್ಲೇಡಿನಿಂದ ಗಾಯಗೊಳಿಸಿ 5 ಲಕ್ಷ ರೂ. ಹಣ ದೋಚಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ, ಸ್ಥಳೀಯ ಪಿಎಸ್ಐಗಳಾದ ನಾಗರಾಜ ಕೊಟಗಿ, ಮಲ್ಲಪ್ಪ ವಜ್ರದ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.