Advertisement

ತೌಕ್ತೆ ಚಂಡಮಾರುತ:  ಮೀನುಗಾರರ ಮನೆ, ಶಡ್ ಗಳು ಸಮುದ್ರ ಪಾಲು

02:55 PM May 15, 2021 | Team Udayavani |

ಉಪ್ಪುಂದ: ಉಪ್ಪುಂದ ಗ್ರಾಮದ ಮಡಿಕಲ್ ನ ಕರಾವಳಿ ತೀರದಲ್ಲಿ ಶನಿವಾರ  ಭೀಕರ ಚಂಡಮಾರುತ ಅಪ್ಪಳಿಸಿ ಸಮುದ್ರದ ರಾಕ್ಷಸ ಅಲೆಗಳ ರೌದ್ರ ನರ್ತನಕ್ಕೆ ಮೀನುಗಾರರ ಮನೆ, ಶಡ್, ತೆಂಗಿನ ಮರಗಳು ಸಮುದ್ರ ವಶವಾಗಿದೆ.

Advertisement

ಮೀನುಗಾರ ಕುಟುಂಬಕ್ಕೆ ಸೇರಿದ ಸಾಕಷ್ಟು ಭೂಪ್ರದೇಶಗಳು ಈಗಾಗಲೇ ಸಮುದ್ರದ ವಶವಾಗಿದ್ದು, ಅನೇಕ ತೆಂಗಿನ ಮರಗಳು, ಮೀನುಗಾರರ ಮನೆಗಳು ಸೇರಿದಂತೆ ಮೀನುಗಾರಿಕೆ ಸಂಬಂಧಪಟ್ಟ ಸಲಕರಣೆ ಶೇಖರಣೆ ಮಾಡುವ ಶೆಡ್ಡುಗಳು, ಟ್ಯಾಂಕ್ಗಳು ಸಮುದ್ರದ ಪಾಲಾಗಿ ಮೀನುಗಾರರು ಸಂಕಟಕ್ಕೊಳಗಾಗಿದ್ದಾರೆ. ನಿನ್ನೆಯಿಂದಲೇ ಗ್ರಾಮದ ಎಲ್ಲಾ ಮೀನುಗಾರರು ಸಮುದ್ರತೀರದಲ್ಲಿ ಬೀಡುಬಿಟ್ಟಿದ್ದು ತಮ್ಮ ತಮ್ಮ ಮೀನುಗಾರಿಕಾ ದೋಣಿಗಳನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಚಂಡಮಾರುತದ ಪ್ರಾರಂಭದಲ್ಲಿಯೇ ಸಮುದ್ರದ ಅಲೆಗಳು ಇಷ್ಟು ಭೀಕರವಾಗಿ ಅಪ್ಪಳಿಸುತ್ತಿದ್ದು. ಇದರ ತೀವ್ರತೆ  ಕ್ಷಣ ಕ್ಷಣಕ್ಕೂ  ಹೆಚ್ಚಾಗುತ್ತಿದೆ. ನಾಳೆಯ ತನಕ ಚಂಡಮಾರುತದ ಪ್ರಭಾವ ಹೀಗೆ ಇದ್ದರೆ ಪರಿಸ್ಥಿತಿ ಇನ್ನೂ ಕೈಮೀರಿ ಹೋಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ.

ಇದನ್ನೂ ಓದಿ :ಉಳ್ಳಾಲ: ತೌಖ್ತೆ ಚಂಡಮಾರುತದ ಪ್ರಭಾವಕ್ಕೆ ಸಮುದ್ರ ಪಾಲಾದ ಹಿಂದೂ ರುದ್ರಭೂಮಿ

ಮೀನುಗಾರಿಕಾ ಬಂದರು ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಮತ್ತು ಜನಪ್ರತಿನಿಧಿಗಳು ಭೇಟಿಕೊಟ್ಟು ಮೀನುಗಾರರಿಂದ ಅಹವಾಲು ಸ್ವೀಕರಿಸಿ ಮುಂದಿನ ಯೋಜನೆ ಬಗ್ಗೆ ಚರ್ಚಿಸಿ ಸೂರು ಕಳೆದುಕೊಂಡವರಿಗೆ ಕೂಡಲೇ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಮೀನುಗಾರರು  ವಿನಂತಿಸಿದ್ದಾರೆ.

Advertisement

ಚಂಡಮಾರುತದ ಪರಿಣಾಮದಿಂದ ಮಳೆಗಾಲದಲ್ಲಿ ಸಮುದ್ರ ತೂಫಾನ್ ನಿಂದ ಅಲೆಗಳ ಹೊಡೆತ ಇನ್ನೂ ಜಾಸ್ತಿಯಾಗುತ್ತದೆ. ಇನ್ನು ಕೆಲವು ಭೂಭಾಗ ಮತ್ತು ಮನೆಗಳನ್ನು ಉಳಿಸಿಕೊಳ್ಳಲು ತುರ್ತು ತಡೆಗೋಡೆ ಅವಶ್ಯಕತೆ ಇರುತ್ತದೆ.

ಪ್ರಸ್ತುತ ಮಡಿಕಲ್ ಸಮುದ್ರತೀರದಲ್ಲಿ 20 ರಾಣಿ ಬಲೆ ಮೀನುಗಾರರ ದೋಣಿ, 200 ಕ್ಕೂ ಹೆಚ್ಚು ಕಂತಲೆ ಪಟ್ಟೆ ಬಲೆ ದೋಣಿಗಳು ಮತ್ತು ಇನ್ನಿತರ ಸಣ್ಣ ಪುಟ್ಟ ದೋಣಿಗಳು ಬಳಸಿ ಮೀನುಗಾರಿಕೆ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಚಂಡಾಮಾರುತದಿಂದಾದ ಕಡಲ್ಕೊರೆತದಿಂದ ಮುಂದಿನ ದಿನಗಳಲ್ಲಿ  ಮೀನುಗಾರಿಕೆ ನಡೆಸುತ್ತಿರುವ ಈ ದೋಣಿಗಳಿಗೆ ಸಮುದ್ರದಡದಲ್ಲಿ ಜಾಗ ಇಲ್ಲದಂತಾಗಿದೆ.

ಇನ್ನುಮುಂದಾದರೂ ಇಲ್ಲಿಯ ಮೀನುಗಾರರು ಸಲೀಸಾಗಿ ಮೀನುಗಾರಿಕೆ ನಡೆಸಲು ಸಾಕಷ್ಟು ವರ್ಷಗಳ ಬೇಡಿಕೆಯಾದ ಬ್ರೇಕ್ ವಾಟರ್  ನ ಅಗತ್ಯತೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next