ನ್ಯೂಯಾರ್ಕ್: ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ರೀತಿಯ ಟ್ರೆಂಡ್, ಅದರಲ್ಲೂ ಹೊಸ ಹೊಸ ಬಗೆಯ ಡಿಸೈನ್ಗಳನ್ನು ಹುಡುಕಿ ತಿಂಗಳುಗಟ್ಟಲೇ ಆಲೋಚಿಸಿ ಜನರು ದೇಹದ ವಿವಿಧ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಆ ಟ್ಯಾಟೂವಿನಿಂದ ಕ್ಯಾನ್ಸರ್ ಕೂಡ ಬರಬಹುದು ಎನ್ನುವ ಆತಂಕಕಾರಿ ವಿಚಾರ ಅಧ್ಯಯನದಿಂದ ಬಯಲಾಗಿದೆ.
ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ (SUNY) ನ ವಿಜ್ಞಾನಿಗಳು ಕೈಗೊಂಡ ಅಧ್ಯಯನದಲ್ಲಿ ಶೇ. 50 ರಷ್ಟು ಟ್ಯಾಟೂ ಇಂಕ್‌ಗಳಲ್ಲಿ ಕ್ಯಾನ್ಸರ್ ಕಾರಣವಾಗುವ ಅಂಶಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಹೊಸ ಅಧ್ಯಯನಕ್ಕಾಗಿ ವಿವಿಧ ಜನಪ್ರಿಯ 100 ಟ್ಯಾಟೂ ಮಾದರಿಗಳನ್ನು ವಿಶ್ಲೇಷಿಸಲಾಗಿದ್ದು, ಶೇ. 50 ರಷ್ಟು, ಹಚ್ಚೆ ಶಾಯಿಗಳು ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳನ್ನು ಒಳಗೊಂಡಿವೆ. ಶಾಯಿಯಲ್ಲಿರುವ ಪಿಗ್ಮೆಂಟ್ ಮತ್ತು ಕ್ಯಾರಿಯರ್ ದ್ರಾವಣವು ಹಚ್ಚೆಗಳನ್ನು ಎಂದಿಗೂ ತೆಗೆದುಹಾಕದೆ ದೇಹದ ಮೇಲೆ ಉಳಿಯಲು ಕಾರಣವಾಗಿದೆ.
ವಿಜ್ಞಾನಿಗಳು ವಿಶ್ಲೇಷಿಸಿದ 100 ಶಾಯಿಗಳಲ್ಲಿ, 23 ಶಾಯಿಗಳು ಅಜೋ ಬಣ್ಣಗಳನ್ನು ಒಳಗೊಂಡಿರುವುದು ಕಂಡುಬಂದಿದೆ. ಸಾಮಾನ್ಯವಾಗಿ, ಅಜೋ ಸಿಂಥೆಟಿಕ್ ಡೈಗಳನ್ನು ಆಹಾರ, ಸೌಂದರ್ಯ ಮತ್ತು ಬಟ್ಟೆಗಳಲ್ಲಿ ಬಳಸಲಾಗುತ್ತದೆ.
ರಾಸಾಯನಿಕವಾಗಿ ಇವು ಸುರಕ್ಷಿತವಾಗಿದ್ದರೂ, ಬ್ಯಾಕ್ಟೀರಿಯಾ, ಯುವಿ ಕಿರಣಗಳು ಅಥವಾ ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಕ್ಯಾನ್ಸರ್-ಉಂಟುಮಾಡುವ ಸಂಯುಕ್ತಗಳಾಗಬಹುದು ಎಂದು ಈ ಅಧ್ಯಯನ ಬಹಿರಂಗಪಡಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಗೆ ಗುಡ್ ಬೈ; ಜಮ್ಮು-ಕಾಶ್ಮೀರದಲ್ಲಿ ಆಜಾದ್ ಹೊಸ ಪಕ್ಷ ಸ್ಥಾಪನೆ: ವರದಿ
ಟ್ಯಾಟೂ ಉಪಕರಣಗಳನ್ನು ಸರಿಯಾಗಿ ಶುಚಿಗೊಳಿಸದೇ ಉಪಯೋಗಿಸಿದರೆ, ಚರ್ಮ ಕೆರೆತ, ಜಾಂಡೀಸ್ ನಂತಹ ರಕ್ತಸಂಬಂಧಿ ಕಾಯಿಲೆಗಳು ಬರುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಹಚ್ಚೆಯಲ್ಲಿನ ಅಜೋ ಸಂಯುಕ್ತಗಳು ಹೆಚ್ಚು ಬಿಸಿಲು ಮತ್ತು ಹೆಚ್ಚು ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಂಡರೆ ಕಾರ್ಸಿನೋಜೆನಿಕ್ ಆಗುವ ಅಪಾಯವಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.