Advertisement

ಟಾಟಾ ಮುಂಬಯಿ ಮ್ಯಾರಥಾನ್‌: ಗೆಳೆಯನ ಶೂ ಧರಿಸಿ ಓಡಿ ಚಿನ್ನ ಗೆದ್ದ ಹುರಿಸ

10:06 AM Jan 20, 2020 | sudhir |

ಮುಂಬಯಿ: ರವಿವಾರ ನಡೆದ 17ನೇ ಆವೃತ್ತಿಯ “ಟಾಟಾ ಮುಂಬಯಿ ಮ್ಯಾರಥಾನ್‌’ನಲ್ಲಿ ಇಥಿಯೋಪಿಯಾದ ಡೆರಾರ ಹುರಿಸ, ಗೆಳೆಯನ ಶೂ ಧರಿಸಿ ಓಡಿ ನೂತನ ದಾಖಲೆಯೊಂದಿಗೆ ಪುರುಷರ ವಿಭಾಗದ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

22ರ ಹರೆಯದ ಹುರಿಸ 2 ಗಂಟೆ, 8 ನಿಮಿಷ, 9 ಸೆಕೆಂಡ್‌ಗಳಲ್ಲಿ ಫ‌ುಲ್‌ ಮ್ಯಾರಥಾನ್‌ ಓಟವನ್ನು ಪೂರ್ತಿಗೊಳಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ ಈ ಸ್ಪರ್ಧೆಯ ಕೊನೆಯ ಕಿ.ಮೀ. ದೂರದ ವೇಳೆ 3 ಮಂದಿ ಇಥಿಯೋಪಿಯನ್‌ ಓಟಗಾರರೇ ಮುಂಚೂಣಿಯಲ್ಲಿದ್ದರು. ಅಂತಿಮವಾಗಿ ಇವರೇ 3 ಪದಕಗಳಿಂದ ಸಿಂಗಾರಗೊಂಡರು. ಅಯೆಲೆ ಅಬೆÏರೊ (2:08:20) ಮತ್ತು ಬಿರಾನು ಟೆಶೋಮ್‌ (2:08:26) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು.

ವನಿತಾ ವಿಭಾಗದ ಚಿನ್ನದ ಪದಕ ಕೂಡ ಇಥಿಯೋಪಿಯ ಓಟಗಾರ್ತಿಯ ಪಾಲಾಯಿತು. ಅಮಾನೆ ಬೆರಿಸೊ (2:24:51) ಈ ಗೌರವಕ್ಕೆ ಪಾತ್ರರಾದರು. ಬೆಳ್ಳಿ ಕೀನ್ಯಾದ ರೊಡಾಹ್‌ ಜೆಪ್ಕೊರಿರ್‌ (2:27:14) ಗೆದ್ದರೆ, ಕಂಚು ಇಥಿಯೋಪಿಯಾದ ಹೆವನ್‌ ಹೈಲು ಪಾಲಾಯಿತು (2:28:55).

ಶೂ ಕಳೆದುಕೊಂಡ ಹುರಿಸ!
ಮ್ಯಾರಥಾನ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಆಗಮಿಸುತ್ತಿದ್ದಾಗ ಡೆರಾರ ಹುರಿಸ ತಮ್ಮ ಶೂಗಳನ್ನು ಕಳೆದುಕೊಂಡು ಸಂಕಟಕ್ಕೆ ಸಿಲುಕಿದ್ದರು. ಕೊನೆಗೆ ಗೆಳೆಯ ಅಬ್ರಹಾಂ ಗಿರ್ಮ ಅವರಿಂದ ಶೂಗಳನ್ನು ಎರವಲು ಪಡೆದು ಓಡಿದ್ದರು. ಶನಿವಾರವಷ್ಟೇ ಈ ಶೂ ಧರಿಸಿ ಅವರು ಅಭ್ಯಾಸ ನಡೆಸಿದ್ದರು. ಹುರಿಸ ಪಾಲಿಗೆ ಇದು “ಲಕ್ಕಿ ಶೂ’ ಎನಿಸಿತು! ಅಬ್ರಹಾಂ ಗಿರ್ಮ ಕೂಡ ಈ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಯಾವುದೇ ಪದಕ ಗೆಲ್ಲಲಿಲ್ಲ.

ಬಂಗಾರದ ಸಾಧನೆಗಾಗಿ ಹುರಿಸ 45 ಸಾವಿರ ಡಾಲರ್‌ ಬಹುಮಾನ ಪಡೆದರೆ, ನೂತನ ದಾಖಲೆ ನಿರ್ಮಿಸಿದ ಸಾಹಸಕ್ಕಾಗಿ 15 ಸಾವಿರ ಡಾಲರ್‌ ಮೊತ್ತವನ್ನು ಬೋನಸ್‌ ಆಗಿ ಪಡೆದರು. ಇದು ಹುರಿಸ ಗೆದ್ದ 2ನೇ ಅಂತಾರಾಷ್ಟ್ರೀಯ ಮ್ಯಾರಥಾನ್‌ ಚಿನ್ನ. ಇದಕ್ಕೂ ಮೊದಲು 2017ರ ಟರ್ಕಿ ಹಾಫ್ ಮ್ಯಾರಥಾನ್‌ನಲ್ಲಿ ಮೊದಲಿಗರಾಗಿದ್ದರು.

Advertisement

ಭಾರತೀಯರ ವಿಭಾಗ
ಭಾರತೀಯರ ಎಲೈಟ್‌ ವಿಭಾಗದ ಪುರುಷರ ಸ್ಪರ್ಧೆಯಲ್ಲಿ ಸೇನೆಯ ಸ್ರಿನು ಬುಗಥ ಮತ್ತು ವನಿತಾ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಸುಧಾ ಸಿಂಗ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಸುಧಾ ಸಿಂಗ್‌ 2:45:30 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಒಟ್ಟಾರೆ ಸ್ಪರ್ಧೆಯಲ್ಲಿ ಸುಧಾಗೆ ಲಭಿಸಿದ್ದು 10ನೇ ಸ್ಥಾನ.

ಪುರುಷರ ವಿಭಾಗದಲ್ಲಿ ಬುಗಥ ಒಟ್ಟಾರೆಯಾಗಿ 13ನೇ ಸ್ಥಾನಿಯಾದರು. ಅವರು ಚಾಂಪಿಯನ್‌ ಹುರಿಸ ಅವರಿಗಿಂತ 10 ನಿಮಿಷ, 35 ಸೆಕೆಂಡ್‌ಗಳಷ್ಟು ವಿಳಂಬವಾಗಿ ಗುರಿ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next