Advertisement

ಇಂದು ಮಿನಿ ಐಪಿಎಲ್‌ ಹರಾಜು: ಆಟಗಾರರ ಖರೀದಿಗೆ ಫ್ರಾಂಚೈಸಿಗಳ ಪೈಪೋಟಿ

09:50 PM Dec 22, 2022 | Team Udayavani |

ಕೊಚ್ಚಿ: 2023ರ ಐಪಿಎಲ್‌ 2023ರ ಹೋರಾಟಕ್ಕಾಗಿ ಸಣ್ಣ ಪ್ರಮಾಣದ ಹರಾಜು ಪ್ರಕ್ರಿಯೆ ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. 10 ಫ್ರಾಂಚೈಸಿಗಳಿಗೆ ಬೇಕಿರುವುದು ಒಟ್ಟು 87 ಆಟಗಾರರು ಮಾತ್ರ. ಪಟ್ಟಿಯಲ್ಲಿ 405 ಆಟಗಾರರಿದ್ದಾರೆ. ಇದರಲ್ಲಿ 132 ವಿದೇಶಿ, 273 ಸ್ವದೇಶಿ ಆಟಗಾರರಿದ್ದಾರೆ.

Advertisement

ಗಮನಿಸಬೇಕಾದ ಸಂಗತಿಯೆಂದರೆ ಆರಂಭದ 86 ಆಟಗಾರರ ಹರಾಜು ಸ್ವಲ್ಪ ತಡವಾಗಬಹುದು. 87ರಿಂದ ಪ್ರಕ್ರಿಯೆ ಜೋರಾಗಲಿದೆ. ಅಷ್ಟರಲ್ಲಾಗಲೇ ಬಹುತೇಕ ಫ್ರಾಂಚೈಸಿಗಳು ತಮ್ಮ ಖರೀದಿ ಪ್ರಕ್ರಿಯೆ ಮುಗಿಸಿರುತ್ತವೆ. ಕೆಲವು ಆಟಗಾರರನ್ನಷ್ಟೇ ಖರೀದಿಸಬೇಕಿರುವುದರಿಂದ, ಫ್ರಾಂಚೈಸಿಗಳು ಬಯಸುವ ಆಟಗಾರರನ್ನೇ ಅಗ್ರಪಟ್ಟಿಗೆ ತರಲಾಗುತ್ತದೆ. ಒಂದು ವೇಳೆ ಖರೀದಿ ಬೇಗ ಮುಗಿದರೆ, ಇತರ ಆಟಗಾರರ ಹೆಸರು ಕೇವಲ ಪಟ್ಟಿಯಲ್ಲಿರುತ್ತದೆ ಅಷ್ಟೇ!

ಈ ಬಾರಿ ಕೋಲ್ಕತಾ ನೈಟ್‌ರೈಡರ್ಸ್‌ ತಂಡಕ್ಕೆ ಮಾತ್ರ ಹೆಚ್ಚು ಆಟಗಾರರನ್ನು ಕೊಳ್ಳಬೇಕಾದ ಒತ್ತಡವಿದೆ. ಆ ತಂಡದ ಬಳಿ ಹಣವೂ ಹೆಚ್ಚಿಲ್ಲ. ಈ ಒತ್ತಡವನ್ನು ಅದು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು. ಅದರ ಬಳಿ ಇರುವುದು ಕೇವಲ 7.05 ಕೋಟಿ ರೂ. ಅಗತ್ಯವಿರುವ ಆಟಗಾರರು 11!

ಗರಿಷ್ಠ ಬೇಡಿಕೆ ಹೊಂದಿರುವ ಆಟಗಾರರು

ಬೆನ್‌ ಸ್ಟೋಕ್ಸ್‌: ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ, ಇತ್ತೀಚೆಗಷ್ಟೇ ಪಾಕಿಸ್ಥಾನವನ್ನು ಅದರ ನೆಲದಲ್ಲಿ ಐತಿಹಾಸಿಕವಾಗಿ 3-0ಯಿಂದ ಸೋಲಿಸಿ ಸಂತೋಷದಲ್ಲಿರುವ ಬೆನ್‌ ಸ್ಟೋಕ್ಸ್‌ಗೆ ಭಾರೀ ಬೇಡಿಕೆಯಿದೆ. ಇವರು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಯಾವುದೇ ತಂಡಕ್ಕೆ ಅದ್ಭುತ ಆಸ್ತಿ ಎನ್ನುವುದು ಗಮನಾರ್ಹ. ಹಾಗೆಯೇ ನಾಯಕನಾಗಿಯೂ ಮಹತ್ವದ ಪಾತ್ರ ವಹಿಸಬಲ್ಲರು. 2019ರ ಏಕದಿನ, 2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡನ್ನು ಗೆಲ್ಲಿಸಿದ್ದು ಇವರೇ.

Advertisement

ಸ್ಯಾಮ್‌ ಕರನ್‌: ಇಂಗ್ಲೆಂಡಿನ ಕೇವಲ 24 ವರ್ಷದ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಯಾವುದೇ ತಂಡಕ್ಕೂ ಅನಿವಾರ್ಯ ಆಟಗಾರ. ಇದುವರೆಗೆ 32 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ. 32 ವಿಕೆಟ್‌ ಪಡೆದು, 337 ರನ್‌ ಬಾರಿಸಿದ್ದಾರೆ.

ಆದಿಲ್‌ ರಶೀದ್‌: ಇವರೂ ಕೂಡ ಇಂಗ್ಲೆಂಡ್‌ ಆಟಗಾರ, ಇದುವರೆಗೆ ಒಮ್ಮೆ ಮಾತ್ರ ಪಂದ್ಯವಾಡಿದ್ದಾರೆ. ಲೆಗ್‌ ಸ್ಪಿನ್ನರ್‌ ಆಗಿರುವ ಇವರ ಖರೀದಿಗೆ ಹಲವು ತಂಡಗಳು ಖಚಿತವಾಗಿ ಯತ್ನಿಸಲಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್‌ನ‌ ಪ್ರಮುಖ ಆಟಗಾರರೂ ಹೌದು.

ಕ್ಯಾಮರೂನ್‌ ಗ್ರೀನ್‌: ಆಸ್ಟ್ರೇಲಿಯದ 23 ವರ್ಷದ ಆಲ್‌ರೌಂಡರ್‌ ಆಗಿರುವ ಗ್ರೀನ್‌, ತಮ್ಮ ವೇಗದ ಬೌಲಿಂಗ್‌ ಮೂಲಕವೂ ನೆರವಾಗಬಲ್ಲರು. ಇವರ ಟಿ20 ದಾಖಲೆಗಳು ಆಕರ್ಷಕವಾಗಿವೆ.

ಮಾಯಾಂಕ್‌ ಅಗರ್ವಾಲ್‌: ಕಳೆದ ಬಾರಿ ಪಂಜಾಬ್‌ ಕಿಂಗ್ಸ್‌ ನಾಯಕರಾಗಿದ್ದ ಮಾಯಾಂಕ್‌ ಅಗರ್ವಾಲ್‌ ಈ ಬಾರಿ ಎಲ್ಲ ತಂಡಗಳಿಂದ ಬೇಡಿಕೆ ಹೊಂದುವುದು ಖಚಿತ. ಇವರ ಸ್ಫೋಟಕ ಆಟವೇ ಅದಕ್ಕೆ ಕಾರಣ. ಸದ್ಯ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವ ಲಯ ಹೊಂದಿಲ್ಲ. ಅದೊಂದೇ ಚಿಂತೆಯ ವಿಚಾರ.

ಲಿಟನ್‌ ಮತ್ತು ಸಿಕಂದರ್‌: ಬಾಂಗ್ಲಾ ಏಕದಿನ ನಾಯಕ ಲಿಟನ್‌ ದಾಸ್‌, ಜಿಂಬಾಬ್ವೆಯ ಆಲ್‌ರೌಂಡರ್‌ ಸಿಕಂದರ್‌ ರಝಾ ಖರೀದಿ ಬಗ್ಗೆಯೂ ತಂಡಗಳು ಆಸಕ್ತಿ ವಹಿಸಬಹುದು.

ಹರಾಜು ಸಮಯ: ಮಧ್ಯಾಹ್ನ 2.30ಕ್ಕೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನೆಮಾ
ಸ್ಥಳ: ಕೊಚ್ಚಿ, ಕೇರಳ

Advertisement

Udayavani is now on Telegram. Click here to join our channel and stay updated with the latest news.

Next