Advertisement

ಚಕಿತ ರುಚಿಯ ಚಪಾತಿ ಮನೆ

05:59 PM Feb 24, 2018 | |

ಹೊಟ್ಟೆ ಹಸಿದಾಗ ನಮಗೆ ಮೊದಲು ನೆನಪಾಗುವುದು ಹೋಟೆಲ್‌ಗ‌ಳು. ಬೆಂಗಳೂರಿನಂಥ ನಗರದಲ್ಲಿ ಲಕ್ಷಾಂತರ ಜನರು ಹೋಟೆಲ್‌ ಆಹಾರವನ್ನು ಅವಲಂಬಿಸಿದ್ದಾರೆ. ಹೀಗೆ ದಿನನಿತ್ಯ ಹೊರಗಡೆಯೇ ತಿನ್ನುವವರಲ್ಲಿ ಹೆಚ್ಚಿನವರು ಸಣ್ಣಪುಟ್ಟ ಕ್ಯಾಂಟೀನ್‌ಗಳನ್ನು, ಖಾನಾವಳಿಗಳನ್ನು ಮೆಚ್ಚಿಕೊಳ್ಳುತ್ತಾರೆ. ಯಾಕೆಂದರೆ, ಅಲ್ಲಿನ ಅಡುಗೆ ಮನೆಯ ಊಟವನ್ನು ನೆನಪಿಸುವುದಷ್ಟೇ ಅಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು. ಅಂಥ ಹೋಟೆಲ್‌ಗ‌ಳು ದೂರವಿದ್ದರೂ ಜನ ಹುಡುಕಿಕೊಂಡು ಹೋಗುತ್ತಾರೆ.

Advertisement

   ಅದೇ ರೀತಿ, ಮನೆಯ ಊಟವನ್ನು ಬಡಿಸುವ ತಾಣವೊಂದು ಇಲ್ಲಿದೆ. ಅದುವೇ “ಚಪಾತಿ ಮನೆ’. ಮಲೆನಾಡಿನ ತಿಂಡಿಗಳು ಇಲ್ಲಿ ವಿಶೇಷವಾಗಿ ಲಭ್ಯ. 

ಮಲೆನಾಡಿನ ರುಚಿ
ಶುಚಿ- ರುಚಿಗೆ ಆದ್ಯತೆ ಕೊಡುವ ಈ ಹೋಟೆಲ್‌ನ ಮಾಲೀಕರು ಎಚ್‌. ಲಕ್ಷ್ಮಣ್‌ ರಾವ್‌ ಮತ್ತು ಲಕ್ಷ್ಮೀ ದೇವಿ ದಂಪತಿ. ಮೂಲತಃ ತೀರ್ಥಹಳ್ಳಿ ತಾಲೂಕಿನ ಮಾಸ್ತಿಕಟ್ಟೆ ಬಳಿಯ ಹೆಬ್ಬಲಗೆಯವರಾದ ಲಕ್ಷ್ಮಣ್‌ರಾವ್‌ 13 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವರು. ಜೀವನೋಪಾಯಕ್ಕೆ ಏನು ಮಾಡುವುದು ಅಂತ ಯೋಚಿಸುತ್ತಿದ್ದಾಗ, ಸ್ನೇಹಿತರಿಂದ ಸಿಕ್ಕ ಸಲಹೆ ಚಪಾತಿ ಮಾಡಿ ಮಾರುವುದು. ಅದನ್ನೇ ಅವರು ಉದ್ಯೋಗವನ್ನಾಗಿ ತೆಗೆದುಕೊಳ್ಳಲು ನಿರ್ಧರಿಸಿದರು.
ಜನ ಮೆಚ್ಚಿದರು…

ಆರಂಭದಲ್ಲಿ ದಿನಕ್ಕೆ ಕೇವಲ 15 ಚಪಾತಿಗಳನ್ನು ಮಾಡಿ, ಅದನ್ನು ತೆಗೆದುಕೊಂಡು ಎಲ್ಲ ಕಡೆ ಸುತ್ತಾಡಿದರೂ ಯಾರೂ ಖರೀದಿಸುವ ಮನಸ್ಸು ಮಾಡಲಿಲ್ಲ. ಆದರೂ ಇವರು ಎದೆಗುಂದಲಿಲ್ಲ. ಚಪಾತಿಗಳನ್ನು ಮಾಡುತ್ತಾ, ಬೇರೆ ಬೇರೆ ಹೋಟೆಲ್‌ಗ‌ಳನ್ನು ಸಂಪರ್ಕಿಸುತ್ತಾ ಗ್ರಾಹಕರನ್ನು ಆಕರ್ಷಿಸಲೆತ್ನಿಸಿದರು. ಬರುಬರುತ್ತಾ ಜನ ಇವರ ಚಪಾತಿಯನ್ನು ಮೆಚ್ಚಿದರು. ಈಗ ತಿಂಗಳಿಗೆ ಸರಾಸರಿ 40 ಸಾವಿರ ಚಪಾತಿಗಳು ಮಾರಾಟವಾಗುತ್ತವೆ. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಆಗದವರು, ರುಚಿಯಾದ ಮತ್ತು ಆರೋಗ್ಯಕರ ಊಟಕ್ಕಾಗಿ “ಚಪಾತಿ ಮನೆ’ಯನ್ನು ಹುಡುಕಿಕೊಂಡು ಬರುವುದು ವಿಶೇಷ. 

ಮಲೆನಾಡ ತಿಂಡಿಗಳೂ ಲಭ್ಯ
ಹೆಸರು ಚಪಾತಿ ಮನೆಯಷ್ಟೇ. ಆದರೆ, ಇಲ್ಲಿ ಮಲೆನಾಡಿನ ವಿಶಿಷ್ಟ ಖಾದ್ಯಗಳಾದ, ಒತ್ತು ಶ್ಯಾವಿಗೆ, ನೀರುದೋಸೆ, ಅಕ್ಕಿರೊಟ್ಟಿ, ಹಾಲುಬಾಯಿ (ಹಿಟ್ಟಿನ ಮಣ್ಣಿ) ಕಾಯಿ ಕಡುಬು (ಸಿಹಿ ಮತ್ತು ಖಾರ) ಹಾಗೂ ಇನ್ನಿತರ ರುಚಿಕರ ತಿಂಡಿಗಳು ಸಿಗುತ್ತವೆ. ಸ್ಥಳೀಯರ ಬೇಡಿಕೆಯ ಮೇರೆಗೆ ಇಲ್ಲಿ ಕೋಡುಬಳೆ, ಕಜ್ಜಾಯ, ಸಮೋಸ, ತಟ್ಟೆಇಡ್ಲಿ, ಬೆಣ್ಣೆ ಮುರುಕು, ಈರುಳ್ಳಿ ಪಕೋಡ, ಹಪ್ಪಳ, ಸಂಡಿಗೆ… ಇತ್ಯಾದಿಗಳನ್ನೂ ತಯಾರಿಸುತ್ತಿದ್ದಾರೆ. 

Advertisement

ಸ್ವತ್ಛತೆ- ಗುಣಮಟ್ಟ
ಗ್ರಾಹಕರನ್ನು ಆಕರ್ಷಿಸುವ ಮತ್ತೂಂದು ಮುಖ್ಯ ವಿಷಯ ಅಡುಗೆ ಮನೆಯ ಸ್ವತ್ಛತೆ ಮತ್ತು ಗುಣಮಟ್ಟಕ್ಕೆ ಇವರು ಕೊಡುವ ಆದ್ಯತೆ. ಆಹಾರ ತಯಾರಿಸುವಾಗ ಶುದ್ಧತೆಯ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಇಲ್ಲಿನ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಮಹಿಳೆಯರೇ ಪ್ರಮುಖ ಪಾತ್ರಧಾರಿಗಳು. ಆದ್ದರಿಂದ, ಅಡುಗೆ ಮನೆಯ ಸ್ವತ್ಛತೆ ಕಾಪಾಡುವಲ್ಲಿ ಲೋಪಗಳಾಗುವುದಿಲ್ಲ.

ಮೂರು ಕಡೆ ಶಾಖೆಗಳು
ಮಲ್ಲೇಶ್ವರಂನ 9ನೇ ಅಡ್ಡರಸ್ತೆಯಲ್ಲಿ, ಮಹಾಲಕ್ಷ್ಮಿ ಲೇಔಟ್‌ನ 11ನೇ ಅಡ್ಡರಸ್ತೆಯಲ್ಲಿರುವ ಶ್ರೀನಿವಾಸ ದೇಗುಲದ ಹಿಂಭಾಗದಲ್ಲಿ ಹಾಗೂ ಮಹಾಲಕ್ಷ್ಮಿಪುರಂನ 3ನೇ ಅಡ್ಡರಸ್ತೆ, ಎಜಿಬಿ ಲೇಔಟ್‌ನಲ್ಲಿ ಚಪಾತಿ ಮನೆ ಶಾಖೆಗಳಿವೆ.

ಹಬ್ಬಹರಿದಿನಗಳಲ್ಲಿ ಡಿಮ್ಯಾಂಡ್‌
ಹಬ್ಬ ಹರಿದಿನಗಳಲ್ಲಿ “ಚಪಾತಿ ಮನೆ’ಯ ಹೋಳಿಗೆ, ಕಜ್ಜಾಯ ಇತ್ಯಾದಿ ತಿನಿಸುಗಳ ಬೇಡಿಕೆ ದುಪ್ಪಟ್ಟಾಗುತ್ತದೆ. ಸಮಯಕ್ಕೆ ಸರಿಯಾಗಿ, ಕೈಗೆಟುಕುವ ದರದಲ್ಲಿ ಹಬ್ಬದ ತಿಂಡಿಗಳನ್ನು ಇವರು ತಯಾರಿಸಿ ಕೊಡುತ್ತಾರೆ.
   ಇಲ್ಲಿ ಬಹಳಷ್ಟು ಜನ ಕೆಲಸ ಮಾಡುತ್ತಿದ್ದರೂ ಅವರಲ್ಲಿ ಗೃಹಿಣಿಯರೇ ಹೆಚ್ಚಿದ್ದಾರೆ. ಹಾಗಾಗಿ, ಮನೆಯ ಅಡುಗೆಮನೆಯನ್ನೇ ಹೊಕ್ಕ ಭಾವನೆ ಉಂಟಾಗುತ್ತದೆ. ಮಹಿಳೆಯರಿಗೆ ಉದ್ಯೋಗ ನೀಡಿ, ಆ ಮೂಲಕ ಅವರ ಜೀವನಕ್ಕೆ ಬೆಳಕಾಗಿರುವುದು ವಿಶೇಷ. 

ಎಲ್ಲಿದೆ?: ಎಜಿಬಿ ಲೇಔಟ್‌, ಮಹಾಲಕ್ಷ್ಮಿಪುರಂನ 3ನೇ ಅಡ್ಡರಸ್ತೆ ಹಾಗೂ ಮಲ್ಲೇಶ್ವರಂನ 9ನೇ ಅಡ್ಡರಸ್ತೆ
ಸಮಯ: ಬೆಳಗ್ಗೆ 7 ರಿಂದ ರಾತ್ರಿ 9.30
ಸಂಪರ್ಕ: ಮೊ. 9243478860/ 9243124789

Advertisement

Udayavani is now on Telegram. Click here to join our channel and stay updated with the latest news.

Next