ಈ ಚಿತ್ತಾಕರ್ಷಕ ಹಣ್ಣಿನ ಮೂಲ, ಪಶ್ಚಿಮ ಆಫ್ರಿಕ. ಆದರೆ ಅದೀಗ ಈ ನೆಲದ ಹಣ್ಣು ಎಂಬಷ್ಟು ಸಹಜವಾಗಿ ಬೆಳ್ತಂಗಡಿ ತಾಲೂಕಿನ ಬಳಂಜದ ಅನಿಲಕುಮಾರರ ತೋಟದಲ್ಲೂ ಬೆಳೆಯುತ್ತಿದೆ. ಪುಟ್ಟ ಗಿಡದ ತುಂಬ ಗೆಜ್ಜೆ ಕಟ್ಟಿದಂತೆ ಕೆಂಪು ಕೆಂಪಾದ ಹಣ್ಣುಗಳು ತುಂಬಿಕೊಂಡಿವೆ. ಪರದೇಶದ ಅಪರೂಪದ ಈ ಹಣ್ಣು ತನ್ನ ವಿಸ್ಮಯದ ಗುಣದಿಂದ ಎಲ್ಲರ ನಾಲಿಗೆಗೆ ತಲುಪಿ ಅಚ್ಚರಿಯ ನೋಟ ಬೀರುವಂತೆ ಮಾಡಿದೆ.
ಸಿ ಜೀವಸತ್ವ ವಿಪುಲವಾಗಿರುವ ಈ ಹಣ್ಣು ಕಿತ್ತಳೆ ಅಥವಾ ನಿಂಬೆಯ ಪರಿಮಳ ಹೊಂದಿದೆ. ವಿಶೇಷವೆಂದರೆ ಹಣ್ಣು ತಿನ್ನುವಾಗ ಸಿಹಿಯಿಲ್ಲ. ಇದರಲ್ಲಿ ಕಡಮೆ ಸಕ್ಕರೆಯ ಅಂಶವಿದೆ. ಇದನ್ನು ಪವಾಡದ ಹಣ್ಣು ಎಂದು ಕರೆಯೋಣ. ಅದರ ಗುಣದ ಪರಿಚಯವಾಗಲು ಹೆಚ್ಚು ಹೊತ್ತು ಬೇಡ. ಇದರ ರುಚಿಮೊಗ್ಗುಗಳು ನಾಲಿಗೆಗೆ ಅಂಟಿಕೊಳ್ಳುತ್ತವೆ. ಈ ಹಣ್ಣು ತಿಂದ ಮೇಲೆ ಹುಣಸೆಹಣ್ಣನ್ನೋ ಇಡೀ ಲಿಂಬೆಹಣ್ಣನ್ನೋ ತಿಂದರೆ ಅವುಗಳ ಸಹಜವಾದ ರುಚಿ ನಾಲಿಗೆಯಲ್ಲಿ ಆಗುವುದೇ ಇಲ್ಲ. ಸಕ್ಕರೆಯಲ್ಲಿ ಹೋಳುಗಳನ್ನು ಅದ್ದಿರುವ ಹಾಗೆ ಹುಳಿಯ ಬದಲಾಗಿ ಬಾಯ್ತುಂಬ ಸಿಹಿಯೋ ಸಿಹಿ! ತುಂಬ ಹೊತ್ತು, ಒಂದೆರಡು ತಾಸುಗಳ ಕಾಲ ಆ ರುಚಿ ಹಾಗೆಯೇ ಉಳಿಯುತ್ತದೆ. ಅದಕ್ಕೇ ಹೇಳಿದ್ದು ಮಿರಾಕಲ್ ಅಂದರೆ ಪವಾಡ! ಯಾವುದೇ ಹುಳಿ ಹಣ್ಣನ್ನು ಇಡೀ ತಿಂದು ಮುಗಿಸಿದರೂ ಬಾಯಿ ಸಿಹಿಯಾಗಿಯೇ ಇರುತ್ತದೆ.
ವೈಜ್ಞಾನಿಕವಾಗಿ ಸಿನ್ಸೆಪಲಂ ಡ್ಯುಸಿಫಿಕಂ ಎಂದು ಹೆಸರಿರುವ ಮಿರಾಕಲ್ ಕಡಮೆ ಕ್ಯಾಲೊರಿಗಳನ್ನು ಹೊಂದಿರುವ ಕಾರಣ ಮಧುಮೇಹ ರೋಗಿಗಳಿಗೂ ಅಪಥ್ಯವಲ್ಲ ಎನ್ನಲಾಗಿದೆ. ಅದಕ್ಕೆ ಕ್ಯಾನ್ಸರ್ ನಿರೋಧಕ ಗುಣವೂ ಇದೆಯಂತೆ. ಇದರಿಂದ ದೇಶಗಳಲ್ಲಿ ಕೇಕ್ ಮುಂತಾದ ಸಿಹಿಗಳನ್ನು ತಯಾರಿಸುತ್ತಾರೆ.
ಆಮ್ಲಿಯವಲ್ಲದ, ಫಲವತ್ತಾದ ಎಲ್ಲ ಮಣ್ಣಿನಲ್ಲಿಯೂ ಮಿರಾಕಲ್ ಸುಲಭವಾಗಿ ಬೆಳೆಯುತ್ತದೆ. ಆದರೆ ಮೂವತ್ತು ಡಿಗ್ರಿಗಿಂತ ಹೆಚ್ಚಿನ ತಾಪ ಸದಾ ಕಾಲವಿರುವ ಉತ್ತರ ಕರ್ನಾಟಕದ ಊರುಗಳಲ್ಲಿ ಈ ಹಣ್ಣಿನ ಗಿಡವನ್ನು ಬದುಕಿಸುವುದು ಸುಲಭವಲ್ಲ. ಗಿಡದ ಬುಡ ಒಣಗದೆ ಬುಡ ತಂಪಾಗಿರಬೇಕು. ಹಾಗೆಂದು ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲಬಾರದು. ಬೀಜದಿಂದ ವಂಶಾಭಿವೃದ್ಧಿ ಸುಲಭ. ಮೂರು ವರ್ಷಗಳಲ್ಲಿ ಹಣ್ಣುಗಳಾಗಲು ಆರಂಭವಾಗುತ್ತದೆಂದು ವಿವರಿಸುತ್ತಾರೆ ಅನಿಲ ಬಳಂಜ.
ಪ,ರಾಮಕೃಷ್ಣ ಶಾಸ್ತ್ರಿ