Advertisement

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

11:29 PM Jul 02, 2024 | Team Udayavani |

ಮೈಸೂರು: ರಾಜ್ಯದೆಲ್ಲೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು ಅತಿವೃಷ್ಟಿಯಿಂದ ಪ್ರಾಣ, ಆಸ್ತಿಗೆ ಹಾನಿಯಾಗದಂತೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್ ಪೋರ್ಸ್‌ ರಚನೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿಪರಿಶೀಲನೆ ಸಭೆಯ ಅನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ 1,763 ಗ್ರಾಮಗಳನ್ನು ಅತಿವೃಷ್ಟಿ ಪೀಡಿತ ಎಂದು ಗುರುತಿಸಲಾಗಿದೆ. ಅಲ್ಲಿನ ಗ್ರಾ.ಪಂ.ಗಳಲ್ಲಿ ಟಾಸ್ಕ್ ಪೋರ್ಸ್‌ ರಚನೆ ಮಾಡಿ ಅವರಿಗೆ ಎನ್‌ಡಿಆರ್‌ಎಫ್ ನಲ್ಲಿ ಇರುವ ಅಧಿಕಾರವನ್ನು ನೀಡಲಾಗುತ್ತದೆ. ಈ ತಂಡದಲ್ಲಿ ಕಂದಾಯ, ಪೊಲೀಸ್‌, ಸೆಸ್ಕ್, ಅಗ್ನಿ ಶಾಮಕ, ಸಣ್ಣ ನಿರಾವರಿ ಇಲಾಖೆ ಅಧಿಕಾರಿ ಮತ್ತು ಸಿಬಂದಿ ಇರಲಿದ್ದಾರೆ ಎಂದರು.

ಜಿಲ್ಲಾಧಿಕಾರಿ, ತಹಶೀಲ್ದಾರ್‌ ಪಿಡಿ ಖಾತೆಯಲ್ಲಿ 776 ಕೋಟಿ ರೂ. ಟಾಸ್ಕ್ ಫೋರ್ಸ್‌ ಹಣ ಇದೆ. ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆಯ 4 ತುಕಡಿಗಳು ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನೊಂದು ತಂಡ ರಾಯಚೂರಿಗೆ ತೆರಳಲಿದೆ. ದಾವಣಗೆರೆ, ಬೆಂಗಳೂರು, ಕಲುಬುರಗಿ, ಮೈಸೂರಿಗೆ ರಾಜ್ಯ ವಿಪತ್ತು ನಿರ್ವಹಣಾ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮಳೆ ಪೀಡಿತ ಪ್ರದೇಶದಲ್ಲಿ ಸಂಕಷ್ಟಕ್ಕೀಡಾಗುವ ಜನರಿಗೆ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಶೀಘ್ರ 767 ಸರ್ವೇಯರ್‌ ನೇಮಕ
ಕಂದಾಯ ಇಲಾಖೆಯಲ್ಲಿ ಸರ್ವೇಯರ್‌ ಹುದ್ದೆಗಳು ಖಾಲಿ ಇರುವುದರಿಂದ 70ಕ್ಕೂ ಹೆಚ್ಚು ಅರ್ಜಿಗಳು ಇತ್ಯರ್ಥವಾಗಿಲ್ಲ. ಶೀಘ್ರವೇ 767 ಭೂ ಮಾಪಕರನ್ನು ನೇಮಿಸುವ ಜತೆಗೆ ಹೆಚ್ಚುವರಿಗೆ 300 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹಾಗೆಯೇ 1,200 ಲೈಸೆನ್ಸ್‌ ಸರ್ವೇಯರ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಜತೆಗೆ 43 ಎಡಿಎಲ್‌ಆರ್‌ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next