“ಇದೊಂದು ಕಂಟೆಂಟ್ ಸಿನಿಮಾ. ಇಲ್ಲಿ ನೀವು ಮೊದಲ ಫೈಟ್ ನೋಡಲು ಮುಕ್ಕಾಲು ಗಂಟೆ ಕಾಯಲೇಬೇಕು. ನನ್ನ ಕೆರಿಯರ್‌ನಲ್ಲಿ ತುಂಬಾ ವಿಶೇಷವಾದ ಚಿತ್ರವಿದು…’ ಹೀಗೆ ದರ್ಶನ್ “ಕಾಟೇರ’ ಬಗ್ಗೆ ಹೇಳಿಕೊಂಡಿದ್ದರು. ಸಿನಿಮಾ ನೋಡಿದ ಮೇಲೆ ಅವರ ಮಾತಿಗೆ ಫ್ಯಾನ್ಸ್ ಹಾಗೂ ಸಿನಿಮಾ ಪ್ರೇಮಿಗಳು ತಲೆದೂಗಿದ್ದಾರೆ. ಅದಕ್ಕೆ ಕಾರಣ “ಕಾಟೇರ’ದೊಳಗೆ ತುಂಬಿಕೊಂಡಿರುವ ಹಲವು ವಿಚಾರಗಳು.
ಹೌದು, ಈ ವಾರ ತೆರೆಕಂಡಿರುವ “ಕಾಟೇರ’ ದರ್ಶನ್ ಕೆರಿಯರ್‌ನಲ್ಲಿ ವಿಭಿನ್ನವಾಗಿ ನಿಲ್ಲುವ ಸಿನಿಮಾ ಎಂದರೆ ತಪ್ಪಲ್ಲ. ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳು, ಅದರಲ್ಲೂ ಸ್ಟಾರ್ ಸಿನಿಮಾಗಳು ಕಂಟೆಂಟ್‌ನಿಂದ, ರೈತರ ಸಮಸ್ಯೆಗಳಿಂದ ದೂರವೇ ಇರುತ್ತವೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಆ ನಿಟ್ಟಿನಲ್ಲಿ “ಕಾಟೇರ’ ಮಾತ್ರ ವಿಭಿನ್ನ ಪ್ರಯತ್ನ ಮಾಡಿದೆ.
“ಕಾಟೇರ’ ಒಂದು ಗ್ರಾಮೀಣ ಸೊಗಡಿನ ಚಿತ್ರ ಹೇಗೋ, ಅದೇ ರೀತಿ ಒಂದು ಸಂದೇಶ ಸಾರುವ ಚಿತ್ರ ಕೂಡಾ. ಮೇಲು-ಕೀಳು, ಜಾತಿ-ಧರ್ಮ ಕುರಿತಾದ ಅಂಶವನ್ನು ಈ ಚಿತ್ರ ಹೊಂದಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರ ಪ್ರಯತ್ನ ಹಾಗೂ ಅದಕ್ಕೆ ದರ್ಶನ್ ಅವರ ಸಾಥ್ ಅನ್ನು ಮೆಚ್ಚಲೇಬೇಕು. ಸಾಮಾನ್ಯವಾಗಿ ರೆಗ್ಯುಲರ್ ಸ್ಟಾರ್ ಸಿನಿಮಾಗಳಲ್ಲಿ ಸಿಗುವ ಬಿಲ್ಡಪ್‌ಗ್ಳು, ಹೀರೋ ಇಂಟ್ರೊಡಕ್ಷನ್‌ಗಳಿಂದ “ಕಾಟೇರ’ ಮುಕ್ತ. ಇಡೀ ಸಿನಿಮಾ ಒಂದು “ಉದ್ದೇಶ’ದೊಂದಿಗೆ ಸಾಗುತ್ತದೆ.
ಕಥೆಯ ಬಗ್ಗೆ ಹೇಳುವುದಾದರೆ ಇಡೀ ಸಿನಿಮಾ ಉಳುವವನೇ ಭೂಮಿಯ ಒಡೆಯ ಕಾನೂನು ಹಾಗೂ ಅದರ ವಿರುದ್ಧ ಭೂ ಮಾಲೀಕರ ದರ್ಪ, ಅಮಾಯಕ ರೈತರ ಮೇಲೆ ಮಾಡುವ ಹಲ್ಲೆ ಸುತ್ತ ಸಾಗುತ್ತದೆ. ಮೇಲ್ನೋಟಕ್ಕೆ ಗೊತ್ತಿರುವ ವಿಚಾರ ಎಂದೆನಿಸಿದರೂ ಅದನ್ನು ಕಟ್ಟಿಕೊಟ್ಟ ರೀತಿ ಮಾತ್ರ ಇಷ್ಟವಾಗುತ್ತದೆ. ನಿರ್ದೇಶಕ ತರುಣ್ ಭರ್ಜರಿ ಪೂರ್ವತಯಾರಿಯೊಂದಿಗೆ ಅಖಾಡಕ್ಕೆ ಇಳಿದ ಕಾರಣ ಯಾವುದೇ ಅನವಶ್ಯಕ ದೃಶ್ಯವಾಗಲೀ, ಯಾರನ್ನೋ ಮೆಚ್ಚಿಸುವ ಪ್ರಯತ್ನವಾಗಲಿ ಮಾಡಿಲ್ಲ. ಕಥೆಯ ಆಶಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗಂತ ಇಲ್ಲಿ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಬಾಡೂಟವನ್ನೇ ಹಾಕಿದ್ದಾರೆ. ಅದು ಕಥೆಯ ಜೊತೆ ಜೊತೆಗೆ ಸಾಗಿ ಬಂದಿದೆ.
ತಣ್ಣಗೆ ಆರಂಭವಾಗುವ ಸಿನಿಮಾ ಮುಂದೆ ಸಾಗುತ್ತಾ “ಕಾವು’ ಪಡೆದುಕೊಳ್ಳುತ್ತದೆ. ಆ್ಯಕ್ಷನ್ ಅಬ್ಬರಕ್ಕೆ ಕಾಯುತ್ತಿದ್ದ ಮಾಸ್ ಪ್ರೇಕ್ಷಕರು ಖುಷಿಪಡುವಂತಹ ಭರ್ಜರಿ ಹಾಗೂ ರೆಗ್ಯುಲರ್ ಶೈಲಿ ಬಿಟ್ಟ ಫೈಟ್‌ಗಳು ಈ ಸಿನಿಮಾದ ಹೈಲೈಟ್ ಗಳಲ್ಲಿ ಒಂದು. ಚಿತ್ರದಲ್ಲಿ ಅತಿಯಾದ ಮಾತಿಲ್ಲ, ಆದರೆ ಅರ್ಥಪೂರ್ಣವಾದ ಮಾತಿಗೆ ಕೊರತೆಯಿಲ್ಲ. ಅವೆಲ್ಲವೂ ಕಥೆಯ ಚೌಕಟ್ಟಿನಲ್ಲೇ ಸಾಗಿ ಬರುವುದು ಮತ್ತೂಂದು ವಿಶೇಷ. ಸಿನಿಮಾದ ಕಥೆಯನ್ನು ಸುದೀರ್ಘವಾಗಿ ಮತ್ತು ಅಷ್ಟೇ ಗಂಭೀರವಾಗಿ ಹೇಳಿರುವುದರಿಂದ ಕೊಂಚ ಸಿನಿಮಾದ ಅವಧಿ ಹೆಚ್ಚಾಯಿತು ಎನಿಸುತ್ತದೆ. ಆದರೆ, ಅವೆಲ್ಲವನ್ನು ಮರೆಸುವಂತೆ ಅಕ್ಕ-ತಮ್ಮನ ಸೆಂಟಿಮೆಂಟ್, ಪೌರಾಣಿಕ ದೃಶ್ಯಗಳು ಮರೆಸುತ್ತವೆ.
ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ನಟ ದರ್ಶನ್. ತುಂಬಾ ದಿನಗಳ ನಂತರ ವಿಭಿನ್ನವಾದ ಹಾಗೂ ನಟನೆಗೆ ಹೆಚ್ಚು ಒತ್ತು ಇರುವ ಪಾತ್ರದಲ್ಲಿ ಮಿಂಚಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಪಾತ್ರಕ್ಕೆ ಎರಡು ಶೇಡ್ ಇದ್ದು, ಎರಡರಲ್ಲೂ ದರ್ಶನ್ ಇಷ್ಟವಾಗುತ್ತಾರೆ. ಮೊದಲ ಬಾರಿಗೆ ನಾಯಕಿಯಾಗಿ ಎಂಟ್ರಿಕೊಟ್ಟಿರುವ ಆರಾಧನಾ ಈ ಸಿನಿಮಾದ ಅಚ್ಚರಿ. ಮೊದಲ ಚಿತ್ರದಲ್ಲೇ ತೂಕದ ಪಾತ್ರ ಸಿಕ್ಕಿದ್ದು, ಅದನ್ನು ಅಚ್ಚುಕಟ್ಟಾಗಿ ನಿಭಾಹಿಸಿ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಶ್ರುತಿ, ಕುಮಾರ್ ಗೋವಿಂದ, ಜಗಪತಿ ಬಾಬು, ವಿನೋದ್ ಆಳ್ವ, ಬಿರಾದಾರ್ ಸೇರಿದಂತೆ ಇತರರು ನಟಿಸಿದ್ದಾರೆ. ಸಿನಿಮಾದಲ್ಲಿ ಹಾಡಿಗಿಂತ ಕಥೆಯೇ
ಹೆಚ್ಚು ಹೈಲೈಟ್ ಆಗಿದೆ. ಮಾಸ್ತಿ ಬರೆದಿರುವ ತುಂಬಾ ಹರಿತವಾದ ಸಂಭಾಷಣೆ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಫ್ಯಾಮಿಲಿ ಡ್ರಾಮಾದ ಜೊತೆಗೆ ಮಾಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆಂದುಕೊಂಡವರಿಗೆ “ಕಾಟೇರ’ ಒಳ್ಳೆಯ ಆಯ್ಕೆಯಾಗಬಹುದು
ರವಿಪ್ರಕಾಶ್ ರೈ