Advertisement

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

03:04 PM Dec 07, 2019 | Naveen |

ತರೀಕೆರೆ: ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಹಂತ ಹಂತವಾಗಿ ತಾಲೂಕಿನಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಸರಕಾರದ ಅನುಮೋದನೆ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

Advertisement

ಅಮೃತಾಪುರ ಕ್ಷೇತ್ರದ ಕುಂಟಿನಮಡು ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಿಂದಿನ ಅವಧಿಯ ಶಾಸಕರಂತೆ ನಾನು ಪೇಪರ್‌ ಟೈಗರ್‌ ಅಲ್ಲ. ಸುಳ್ಳು ಹೇಳುತ್ತ ಪೊಳ್ಳು ಭರವಸೆಗಳನ್ನು ನಾನು ನೀಡುವುದಿಲ್ಲ. ಕೆಲಸ ಮಾಡಿ ಜನರ ಮುಂದೆ ಬರುತ್ತಿದ್ದೇನೆ ಎಂದು ತಿಳಿಸಿದರು.

ಮಾಜಿ ಶಾಸಕರು ತಾಲೂಕಿನಲ್ಲಿ ಗುಂಡಿ ಮುಕ್ತ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ವಾಸ್ತವದಲ್ಲಿ ಗ್ರಾಮೀಣ ಭಾಗದ ಒಂದು ರಸ್ತೆಯೂ ಅಭಿವೃದ್ಧಿಯಾಗಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ. ಈ ಕೆಲಸ ನಿಮ್ಮಗಳ ಆಶೀರ್ವಾದದಿಂದ ಸಾಧ್ಯವಾಗುತ್ತಿದೆ. ನೀವು ನೀಡಿರುವ ಜವಾಬ್ದಾರಿ ನಮ್ಮ ಮೇಲಿದೆ. ಏಕ ಕಾಲದಲ್ಲಿ ಎಲ್ಲೆಡೆ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೂ ಆದ್ಯತೆ ಮೇರೆಗೆ ಎಲ್ಲಾ ಗ್ರಾಮಗಳಿಗೂ ಸಮನಾಂತರವಾಗಿ ಅನುದಾನ ನೀಡಿದ್ದೇನೆ ಎಂದರು.

ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆಯಲ್ಲಿ ಹಾದಿಕೆರೆ, ಮಲ್ಲೆದೇವರ ಕೆರೆ ಮತ್ತು ಇಟ್ಟಿಗೆ ಸೀರಿಸ್‌ನಲ್ಲಿ ಕೆರೆಗಳಿಗೆ ಭದ್ರಾ ನೀರು ಹರಿಸಲು ನೀರಾವರಿ ನಿಗಮದಿಂದ 9.80 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದ್ದು, 1 ತಿಂಗಳಲ್ಲಿ ಟೆಂಡರ್‌ ಕರೆದು ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು.

ಅಮೃತಾಪುರ ಪಂಚಾಯಿತಿಯಲ್ಲಿ ಎಲ್ಲಾ ಗ್ರಾಮಗಳ ಅಭಿವೃದ್ಧಿ ಕೆಲಸಗಳು ಮುಗಿಯುತ್ತ ಬಂದಿವೆ. ಉಳಿದಿರುವ ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳಲಾಗುವುದು. ನೇರಕೆರೆ ಗ್ರಾಮದಲ್ಲಿ 1 ಕೋಟಿ, ಮುದುಗುಂಡಿ-ಹೊಸಳ್ಳಿ ತಾಂಡಾ ರಸ್ತೆ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ.

Advertisement

ಇಟ್ಟಿಗೆ ಗ್ರಾಮದ 4 ಕೆರೆಗಳಿಗೆ 2.40 ಕೋಟಿ ವೆಚ್ಚದ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಭದ್ರಾ ಮೇಲ್ದಂಡೆ ಯೋಜನೆಯ ಆರಂಭದ ದಿನಗಳಲ್ಲಿ ತಾಲೂಕಿನ ಜನತೆ ಪ್ರತಿರೋಧ ತೋರಿದ್ದರು. ಭದ್ರಾ ಮೇಲ್ದಂಡೆಯಲ್ಲಿ ನೀರು ಹರಿದು ಬರುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ ವರ ಎಂದು ಭಾವಿಸಬೇಕಾಗಿದೆ. 80 ಕೆರೆಗಳಿಗೆ ಇನ್ನೊಂದು ವರ್ಷದಲ್ಲಿ ನೀರು ಹರಿಸಲಾಗುವುದು. ಗೊಂದಿ ಅಣೆಕಟ್ಟಿನಿಂದ ತರೀಕೆರೆ ತಾಲೂಕಿನ 46 ಗ್ರಾಮಗಳಿಗೆ, ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನ ಕೆಲವು ಗ್ರಾಮಗಳಿಗೆ 1300 ಕೋಟಿ ವೆಚ್ಚದ ಕಾಮಗಾರಿಗೆ ಸರಕಾರ ಅನುಮೋದನೆ ನೀಡಿದೆ ಎಂದರು.

ಜಿಪಂ ಸದಸ್ಯ ಕೆ.ಆರ್‌.ಆನಂದಪ್ಪ ಮಾತನಾಡಿ, ರಾಜಕಾರಣ ಮಾಡುವ ಸಮಯದಲ್ಲಿ ರಾಜಕೀಯ ಮಾಡಬೇಕು. ಗ್ರಾಮದ ಅಥವಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮತ್ತು ಜನಪರ ಕೆಲಸಗಳಲ್ಲಿ ರಾಜಕೀಯ ಬೆರೆಸಬಾರದು. ಶಾಸಕ ಡಿ.ಎಸ್‌.ಸುರೇಶ್‌ ಯಾವುದೇ ವಿಚಾರದಲ್ಲಿ ಪಕ್ಷಪಾತ ಮಾಡಿಲ್ಲ. ಎಲ್ಲಾ ಸಮಾಜವನ್ನು ವಿಶ್ವಾಸದಿಂದ ನೋಡುತ್ತ ಬಂದಿದ್ದಾರೆ.

ಕುಂಟಿನಮಡು ಗ್ರಾಮಕ್ಕೆ 5 ಕೋಟಿ ಅನುದಾನ ನೀಡಿದ್ದಾರೆ. ಗ್ರಾಮದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡಿದವರ ಋಣವನ್ನು ನಾವೆಲ್ಲ ತೀರಿಸಬೇಕಾಗಿದೆ. ನನ್ನೂರು ಎಂಬ ಸ್ವಾರ್ಥದಿಂದ ಸ್ವಲ್ಪ ಹೆಚ್ಚಿನ ಅನುದಾನ ತಂದಿದ್ದೇನೆ ಎಂದರು.

ಜನರಿಗೆ ಕಟ್ಟೆ ಪಂಚಾಯಿತಿ ಮಾಡುತ್ತ ಕೆಲಸಗಳ ಬಗ್ಗೆ ಸುಳ್ಳು ಮಾಹಿತಿ ನೀಡಬಾರದು. ಊರಿನ ಅಭಿವೃದ್ಧಿಗೆ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು. ಆಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಜನಪ್ರತಿನಿಧಿಗಳಾಗಿ ನಾವೇನಾದರೂ ತಪ್ಪು ಮಾಡಿದ್ದರೆ ಬುದ್ದಿ ಹೇಳಿ. ಆಗ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಹೋಗುತ್ತೇವೆ ಎಂದರು.

ಸಭೆಯನ್ನು ಉದ್ದೇಶಿಸಿ ಗಾಪಂ ಸದಸ್ಯ ಸುಧಾಕರ್‌, ಅಮೃತಾಪುರ ಗಾಪಂ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯ ಓಂಕಾರಪ್ಪ ಮಾತನಾಡಿದರು. ಗುದ್ದಲಿ ಪೂಜೆಯಲ್ಲಿ ಮಾಜಿ ಜಿಪಂ ಅಧ್ಯಕ್ಷ ಕೆ.ಆರ್‌.ಧೃವಕುಮಾರ್‌, ಪಿಡಿಒ ಯೋಗೀಶ್‌, ಸದಸ್ಯೆ ಭಾಗ್ಯಾ ಮಂಜುನಾಥ್‌, ತಿಪ್ಪೇಶ್‌, ರಾಜು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next