ಗದಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ಸೆ. 17ರಿಂದ ಅ. 2ರ ವರೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ, ಬಡವರಿಗೆ ಹಾಗೂ ಪ್ರಕೃತಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಯೋಜನೆಗಳು ನಿರಂತರವಾಗಿ ನಡೆಯಲಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೆ. 17ರಂದು ನರಗುಂದ ವಿಧಾನಸಭಾ ಕ್ಷೇತ್ರ ಸೇರಿ ಜಿಲ್ಲೆಯಾದ್ಯಂತ ರಕ್ತದಾನದ ಮೂಲಕ 170 ಯುನಿಟ್ ಸಂಗ್ರಹಿಸಲಾಗಿದೆ. ಭಾನುವಾರವೂ ರಕ್ತದಾನ ನಡೆದಿದೆ, ಅ. 2ರ ವರೆಗೆ ರಕ್ತದಾನ ಶಿಬಿರಗಳು ಮುಂದುವರಿಯಲಿದ್ದು, ಜಿಲ್ಲೆಯಿಂದ 3 ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಹುರಿ ಹೊಂದಲಾಗಿದೆ ಎಂದು ಹೇಳಿದರು.
ಎಲ್ಲ ಪಕ್ಷಗಳಲ್ಲೂ ಅವರವರ ನಾಯಕರ ಜನ್ಮದಿನ ಆಚರಣೆ ನಡೆಯುತ್ತದೆ. ಆದರೆ, ಇದು ಬಿಜೆಪಿಯಲ್ಲಿ ಕೊಂಚ ಭಿನ್ನವಾಗಿದೆ. ನಾವಿಲ್ಲಿ ಕೇಕ್ ಕತ್ತರಿಸಿ, ಫ್ಲೆಕ್ಸ್ ಅಳವಡಿಸುವ ಬದಲಾಗಿ ಸೇವಾ ಕಾರ್ಯದ ಮೂಲಕ ಸ್ಮರಣೆ, ಸಮಾಜಕ್ಕೆ ಫಲ ನೀಡುವ ನಿಟ್ಟಿನಲ್ಲಿ “ಸೇವಾ ಪಾಕ್ಷಿಕ’ದ ಮೂಲಕ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾಚಿಕೆ ಬಿಟ್ಟು ರಾಜಕಾರಣ ಮಾಡಬಾರದು: ತೆಲಂಗಾಣದಲ್ಲಿ ಶೇ. 40 ಫ್ಲೆಕ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಸಿ. ಪಾಟೀಲ ಅವರು, ಶೇ. 40-50 ವಿಚಾರವಾಗಿ ಅಧಿವೇಶನದಲ್ಲಿ ಸಮರ್ಥವಾದ ತಕ್ಕ ಉತ್ತರ ಕೊಡುತ್ತೇವೆ. ಫ್ಲೆಕ್ಸ್ ಪ್ರದರ್ಶನದ ಹಿಂದೆ ಯಾರು ಇದ್ದಾರೆ ಅನ್ನೋದು ಗೊತ್ತು. ನಾಚಿಕೆ ಬಿಟ್ಟು ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಸಿ.ಸಿ. ಪಾಟೀಲ ಹರಿಹಾಯ್ದರು.
ಖರ್ಗೆ ಹೇಳಿಕೆಗೆ ಗರಂ: ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದು ಹೋಗಿದೆ. ಸರ್ಕಾರ ಸಾಲ ಮಾಡಿ ತುಪ್ಪ ತಿನ್ನುವ ಪರಿಸ್ಥಿತಿ ಬಂದಿದೆ ಎಂಬ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸಿ.ಸಿ. ಪಾಟೀಲ, ಯಾರಿಗೆ ಜೊಲ್ಲು ಸುರಿಸುವ ರೂಢಿ ಇರುತ್ತದೆ, ಅವರು ಜೊಲ್ಲು ಸುರಿಸುವ ಮಾತುಗಳನ್ನೇ ಮಾತಾಡುತ್ತಾರೆ ಎಂದು ಖರ್ಗೆ ಆರೋಪಕ್ಕೆ ತಿರಗೇಟು ನೀಡಿದರು.
ಇಷ್ಟು ವರ್ಷಗಳ ಕಾಲ ಹಿಂದುಳಿದ ಕರ್ನಾಟಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅಪ್ಪ ತಪ್ಪಿದ್ರೆ ಮಗ, ಮಗ ತಪ್ಪಿದ್ರೆ ಅಪ್ಪ ಅಧಿಕಾರದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿ, ಪಕ್ಷ ಅಧಿಕಾರಕ್ಕೆ ಬಂದಾಗ ಸತತ ಮಂತ್ರಿಯಾಗಿದ್ದುಕೊಂಡು ಯಾವ ಅಭಿವೃದ್ಧಿ ಮಾಡಿದ್ದಾರೆ. ಬಾಯಿ ಚಪ್ಪಲಕ್ಕೆ ಏನನ್ನಾದರೂ ಮಾತನಾಡಬಾರದು ಎಂದು ವಾಗ್ಧಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತನಗೌಡ ಲಿಂಗನಗೌಡ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವರಾಜಗೌಡ ಹಿರೇಮನಿಪಾಟೀಲ, ಮುಖಂಡರಾದ ರಾಜು ಕುರಡಗಿ, ಶ್ರೀಪತಿ ಉಡುಪಿ ಸೇರಿದಂತೆ ಅನೇಕರು ಇದ್ದರು.