ಚಿಕ್ಕೋಡಿ: ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಹುಕ್ಕೇರಿ ತಾಲೂಕು ಹಾಗೂ ಜೈನಾಪುರ ಪರಿಸರದ ಕಬ್ಬು ಬೆಳೆಗಾರರ ಹಿತ ಕಾಪಾಡಲು ಹಿರಿಯ ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ಕಾರ್ಖಾನೆ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಎಲ್ಲರ ಸಹಕಾರದಿಂದ ಕಳೆದ ಹಂಗಾಮು ಯಶಸ್ವಿಯಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ಅರಿಹಂತ ಶುಗರ್ ವತಿಯಿಂದ 4 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ನಿರ್ದೇಶಕ ಉತ್ತಮ ಪಾಟೀಲ ಹೇಳಿದರು.
ತಾಲೂಕಿನ ಜೈನಾಪುರ ಗ್ರಾಮದ ಅರಿಹಂತ ಶುಗರ್ಸ್‌ನ ನಾಲ್ಕನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ 40 ಸಾವಿರ ಹೆಕ್ಟರ್ ಕಬ್ಬು ನೋಂದಣಿಯಾಗಿದೆ. ಜಿಲ್ಲೆಯ ಎಲ್ಲ ಕಾರ್ಖಾನೆಯವರು ನೀಡುವಷ್ಟೇ ದರವನ್ನು ಅರಿಹಂತ ವತಿಯಿಂದ ಕೂಡ ನೀಡಲಾಗುವುದು. ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕಳೆದ ವರ್ಷದಲ್ಲಿ 3.30 ಲಕ್ಷ ಮೆ.ಟನ್ ಕಬ್ಬು ನುರಿಸಲಾಗಿದೆ. ಕಬ್ಬು ಕಳುಹಿಸಿದ ರೈತರಿಗೆ ಪ್ರತಿ ಟನ್‌ಗೆ 1 ಕೆ.ಜಿ.ಸಕ್ಕರೆ ನೀಡಲಾಗಿದೆ ಎಂದರು.
ಕಾರ್ಖಾನೆಯ ವ್ಯಾಪ್ತಿಯ ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವ ವಿಶ್ವಾಸವಿದೆ. ಕಬ್ಬು ಕಟಾವು ಕಾರ್ಮಿಕರ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಆರೋಗ್ಯ ಸೌಲಭ್ಯ ನೀಡಲಾಗಿದೆ. ಕಬ್ಬು ಕಟಾವು ಸೇರಿದಂತೆ ಎಲ್ಲ ಖಾತೆಯ ತಯಾರಿ ಪೂರ್ಣವಾಗಿದ್ದು, ಕಬ್ಬು ಬೆಳೆಗಾರರು ಹಾಗೂ ರೈತರು ಕಾರ್ಖಾನೆಗೆ ಕಬ್ಬು ಕಳುಹಿಸಿ ಕಾರ್ಖಾನೆ ಪ್ರಗತಿಯಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಖಾನೆ ಅಧ್ಯಕ್ಷ ರಾವಸಾಹೇಬ ಪಾಟೀಲ, ಕಾರ್ಖಾನೆ ಎಂ.ಡಿ.ಅಭಿನಂದನ ಪಾಟೀಲ, ನಿರ್ದೇಶಕಿ ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಅನುರಾಗ ಪಾಟೀಲ, ರೋಹಿತ ಚೌಗುಲಾ, ರಾಜೀವ ಚೌಗುಲಾ, ಬಾಹುಬಲಿ ಸೋಲಾಪುರೆ, ಅಮೋಲ ನಾಯಿಕ್, ಮಾಮಾಸಾಬ ಮದಭಾವಿ, ಅಭಿಜಿತ ಪಾಟೀಲ, ಮದನ ಪಾಟೀಲ, ಕೋಮಲ ಪಾಟೀಲ, ಅನಿಲ ಪಾಟೀಲ, ಎ.ಪಿ.ಎಂ.ಸಿ.ಸದಸ್ಯ ಕೆಳಗಿನಮನಿ, ಸತೀಶ ಪಾಟೀಲ, ಕೇದಾರ ಕುಲಕರ್ಣಿ, ಕಾರ್ಖಾನೆ ಸಿ.ಇ.ಓ ಆರ್.ಕೆ.ಶೆಟ್ಟಿ, ರಾಕೇಶ ಚಿಂಚಣೆ, ಪ್ರಕಾಶ ಗಾಯಕವಾಡ, ರಾಮಗೊಂಡ ಪಾಟೀಲ, ಅನಿಲ ಕಲಾಜೆ, ಎಸ್.ಎ. ಚೌಗುಲಾ, ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ ಸೇರಿದಂತೆ ಕಬ್ಬು ಬೇಳೆಗಾರರು ಹಾಜರಿದ್ದರು.