Advertisement
13 ಜನರಲ್ಲಿ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್, ಎಂ.ಟಿ.ಬಿ.ನಾಗರಾಜ್, ಡಾ.ಸುಧಾಕರ್, ಆನಂದ್ ಸಿಂಗ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರನ್ನು ಮಾತ್ರ ಮನವೊಲಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆಯಿಂದಲೇ ಅತೃಪ್ತರ ಮನವೊಲಿಕೆ ಯತ್ನ ಆರಂಭವಾಗಿದೆ. ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಅವರೊಂದಿಗೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರೂ ಮನವೊಲಿಕೆ ಕಾರ್ಯ ಮಾಡಿದ್ದು, ಅವರು ರಾಜೀನಾಮೆ ವಾಪಸ್ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
Related Articles
Advertisement
ಎಚ್.ನಾಗೇಶ್‌ಗೆ ಡಿಕೆಶಿ ಗಾಳ: ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು, ಮಂತ್ರಿ ಮಾಡಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅತೃಪ್ತರ ಪಡೆ ಸೇರಿಕೊಂಡಿದ್ದರು. ಆದರೆ, ರಾಜೀನಾಮೆ ಸಲ್ಲಿಸುವ ಮುಂಚಿನ ದಿನ ಮುಳಬಾಗಿಲು ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಅವರಿಗೆ ತಮ್ಮ ಖಾತೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರೆಂದು ತಿಳಿದು ಬಂದಿದೆ. ಹೀಗಾಗಿ, ಅವರ ಮೂಲಕವೇ ಸಚಿವ ಡಿ.ಕೆ. ಶಿವಕುಮಾರ್ ವಾಪಸ್ ಕರೆಸುವ ಪ್ರಯತ್ನ ನಡೆಸಿದ್ದಾರೆ. ನಾಗೇಶ್‌ಗೆ ಉತ್ತಮ ಖಾತೆ ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ವಿಜಯನಗರ ಶಾಸಕ ಆನಂದ್ ಸಿಂಗ್ ಅವರೂ ಜಿಂದಾಲ್‌ಗೆ ಜಮೀನು ಮಾರಾಟ ಮಾಡಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರೂ, ಅಸಲಿಯಾಗಿ ಅವರ ಕ್ಷೇತ್ರದಲ್ಲಿ ಪಕ್ಕದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ ಹೇಳಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ. ಅವರ ಹಸ್ತಕ್ಷೇಪ ತಡೆಯುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರು ಸ್ಪಂದಿಸದೇ ಇರುವುದರಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅವರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ.
ಈ ಒಂಬತ್ತು ಜನರಲ್ಲಿ ಕನಿಷ್ಠ ಎಂಟು ಶಾಸಕರು ವಾಪಸ್ ಬರುತ್ತಾರೆಂಬ ನಂಬಿಕೆಯನ್ನು ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ. ಈಗಿರುವ ಸಂಖ್ಯಾಬಲದಲ್ಲಿ 8 ಜನ ವಾಪಸ್ ಬಂದರೆ ಸರಳ ಬಹುಮತ ಪಡೆಯಲು ಯಾವುದೇ ತೊಂದರೆ ಆಗುವುದಿಲ್ಲ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೈ ನಾಯಕರು “ಟಾರ್ಗೆಟ್ 9′ ಕಾರ್ಯತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.
ಇಬ್ಬರ ಅನರ್ಹತೆ: ಈ ಮಧ್ಯೆ, ಈಗಾಗಲೇ ವಿಪ್ ಉಲ್ಲಂಘನೆ ಪ್ರಕರಣದಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ವಿಶ್ವಾಸಮತ ಯಾಚನೆಗೂ ಮೊದಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಾಧ್ಯತೆಯಿದೆ. ಅವರಿಬ್ಬರನ್ನು ಅನರ್ಹಗೊಳಿಸಿದರೆ, ಮುಂಬೈಗೆ ತೆರಳಿರುವ ಉಳಿದ ಅತೃಪ್ತ ಶಾಸಕರು ವಾಪಸ್ ಬರಬಹುದು ಎಂಬ ನಂಬಿಕೆಯನ್ನು ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ.
ಒಂದು ವೇಳೆ ಅವರೂ ವಾಪಸ್ ಬರದಿದ್ದರೆ, ಅವರನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈಗಿರುವ ಲೆಕ್ಕಾಚಾರದಲ್ಲಿ ಎಂಟು ಜನರನ್ನು ಬಿಟ್ಟು ಉಳಿದ ಎರಡೂ ಪಕ್ಷಗಳ ಶಾಸಕರನ್ನು ಬಹುಮತ ಸಾಬೀತಿಗೂ ಮೊದಲೇ ಅನರ್ಹಗೊಳಿಸುವ ಲೆಕ್ಕಾಚಾರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
* ಶಂಕರ ಪಾಗೋಜಿ