Advertisement

ತರಾಟೆ, ತಾಕೀತು, ಸೂಚನೆ, ಗರಂ ಸಿಎಂ

12:46 AM Sep 09, 2019 | Lakshmi GovindaRaju |

ಬೆಂಗಳೂರು: ಮೊದಲ ಬಾರಿ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಳ್ಳುವ ಜತೆಗೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಿಂದ ಭಾನುವಾರ ಬೆಳಗ್ಗೆ 9.30ಕ್ಕೆ ಸಿಎಂ ನಗರ ಪ್ರದಕ್ಷಿಣೆ ಆರಂಭಿಸಿದರು. ಈ ವೇಳೆ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಅಧಿಕಾರಿಗಳು ಬಿಎಂಟಿಸಿಯ ಮೂರು ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಸಿದರು. ಮೊದಲಿಗೆ ಬನ್ನೇರುಘಟ್ಟ ರಸ್ತೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ, ನಂತರ ಸೆಂಟ್ರಲ್‌ ಸಿಲ್ಕ್ಬೋರ್ಡ್‌ ಜಂಕ್ಷನ್‌, ಹೆಬ್ಟಾಳ ಹಾಗೂ ಟಿನ್‌ಫ್ಯಾಕ್ಟರಿ ಮಾರ್ಗವಾಗಿ “ಕೃಷ್ಣಾ’ಗೆ ವಾಪಾಸ್ಸಾದರು.

ನಗದು ಪರಿಹಾರಕ್ಕೆ ಒತ್ತಾಯ: ಬನ್ನೇರುಘಟ್ಟ ರಸ್ತೆಯ ಜೇಡಿಮರ ಜಂಕ್ಷನ್‌ನಲ್ಲಿ ಮೆಟ್ರೋ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಸಿಎಂ ಪರಿಶೀಲಿಸಿದರು. ಈ ವೇಳೆ ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ಸ್ಥಳ ಬಿಟ್ಟುಕೊಟ್ಟಿರುವ ಭೂ ಮಾಲೀಕರು, ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) ಬದಲು ನಗದು ಪರಿಹಾರ ನೀಡುವಂತೆ ಮನವಿ ಮಾಡಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌, ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ್‌, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಸತೀಶ್‌ರೆಡ್ಡಿ, ಎಸ್‌.ರಘು, ಅರವಿಂದ ಲಿಂಬಾವಳಿ, ಎಲ್‌.ಎ.ರವಿ ಸುಬ್ರಹ್ಮಣ್ಯ, ತೇಜಸ್ವಿನಿ ಗೌಡ, ಮಾಜಿ ಶಾಸಕ ಎನ್‌.ಎಸ್‌.ನಂದೀಶ್‌ ರೆಡ್ಡಿ ಇತರರು ಉಪಸ್ಥಿತರಿದ್ದರು.

ಯಾವೋನೋ ನೀನು, ತಲೆಕೆಟ್ಟಿದ್ದೀಯಾ ನಿನಗೆ!: ಕುಂದಲಹಳ್ಳಿ ಜಂಕ್ಷನ್‌ ಸಿಗ್ನಲ್‌ ಫ್ರೀ ಕಾರಿಡಾರ್‌ ಕಾಮಗಾರಿ ಪರಿಶೀಲನೆ ವೇಳೆ ಕಳೆದ ಆರು ತಿಂಗಳಿಂದ ಕೆಲಸ ಸ್ಥಗಿತವಾಗಿರುವುದನ್ನು ಕಂಡು ಮುಖ್ಯಮಂತ್ರಿಗಳು ಗರಂ ಆದರು. ಈ ಸಂಬಂಧ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, “ತಲೆಕೆಟ್ಟಿದ್ದೀಯಾ ನಿನಗೆ, ಯಾವೋನೋ ನೀನು…ಯಾವ ಕಾರಣಕ್ಕೆ ಇದನ್ನು ಉಪಗುತ್ತಿಗೆ ನೀಡಲಾಗಿದೆ’ ಎಂದು ಪ್ರಶ್ನಿಸಿದರು.

Advertisement

ಭೂಸ್ವಾಧೀನ ಪ್ರಕ್ರಿಯೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಂತೆ ಕೋಪಗೊಂಡ ಶಾಸಕ ಅರವಿಂದ ಲಿಂಬಾವಳಿ, ಭೂಸ್ವಾದಿನಕ್ಕೂ, ಕಾಮಗಾರಿ ನಿಲ್ಲಿಸುವುದಕ್ಕೂ ಸಂಬಂಧವಿಲ್ಲ ಎಂದು ಕಿಡಿ ಕಾರಿದರು. ನಾಲ್ಕು ದಿನದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿ ಆರಂಭಿಸುವುದಕ್ಕೆ ಕ್ರಮಕೈಗೊಳ್ಳಿ ಎಂದು ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

“ಕೈ ಹಿಡಿದು ಎಳೆಯುವುದೇನಿದೆ!’: ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ವೇಳೆ ಉಪ ಮೇಯರ್‌ ಭದ್ರೇಗೌಡ ಅವರಿಗೆ ಮತ್ತು ಬಿಬಿಎಂಪಿ ಆಯುಕ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬನ್ನೇರುಘಟ್ಟ ರಸ್ತೆಯ ಐಐಎಂಬಿ ಜಂಕ್ಷನ್‌ ಬಳಿ ಟಿಡಿಆರ್‌ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿಗಳು ಚರ್ಚಿಸುತ್ತಿದ್ದಾಗ “ಈ ಕಡೆ ಸರಿ’ ಎಂದು ಆಯುಕ್ತರು ಅವಮಾನಿಸಿದ್ದಾರೆ ಎಂದು ಉಪಮೇಯರ್‌ ಗರಂ ಆದರು. ಜತೆಗೆ ಬೇಸರಗೊಂಡು ಅರ್ಧಕ್ಕೆ ಹಿಂದಿರುಗಿದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭದ್ರೇಗೌಡ, “ಆಯುಕ್ತರು ಕೈಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಕೈ ಹಿಡಿದು ಹಿಂದಕ್ಕೆ ಎಳೆಯುವಂತಹದ್ದು ಅವರಿಗೆ ಏನಿದೆ’ ಎಂದು ಪ್ರಶ್ನೆ ಮಾಡಿದರು.

ಅಂತರ ಕಾಯ್ದುಕೊಂಡ ಸಚಿವ-ಡಿಸಿಎಂ: ನಗರ ಪ್ರದಕ್ಷಿಣೆ ವೇಳೆ ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅಂತರ ಕಾಯ್ದುಕೊಂಡದ್ದು ಕಂಡುಬಂತು. ಸಿಎಂ ಜತೆ ಅಶ್ವಥ§ನಾರಾಯಣ ಚರ್ಚಿಸುವಾಗ ಆರ್‌.ಅಶೋಕ್‌ ಅಂತರ ಕಾಯ್ದುಕೊಳ್ಳುತ್ತಿದ್ದರು. ಅಶೋಕ್‌ ಅವರು ಮುಖ್ಯಮಂತ್ರಿ ಜತೆಯಿದ್ದಾಗ ಡಿಸಿಎಂ ದೂರ ನಿಲ್ಲುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next