ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿ ದೊಡ್ಡಮನಿ ಕಾಲೋನಿ ನಿವಾಸಿ ತಪ್ಸೀನಬಾನು ದಾವಡಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 482ನೇ ರ‍್ಯಾಂಕ್ ಪಡೆದಿದ್ದಾರೆ .
ಕೇಂದ್ರೀಯ ಲೋಕಸೇವಾ ಆಯೋಗವು ( ಯುಪಿಎಸ್ಸಿ ) ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯ ಮೇನ್ ದಲ್ಲಿ ಮೊದಲ ಪ್ರಯತ್ನದಲ್ಲೇ ತಪ್ಸೀನ ಬಾನು 482ನೇ ರ‍್ಯಾಂಕ್ ಬಂದಿದ್ದಾರೆ.
ದೊಡ್ಡಮನಿ ಕಾಲೋನಿಯ ಖಾದರ ಬಾಷಾ ಹಾಗೂ ಹಸೀನ ಬೇಗಂ ದಂಪತಿಯ ಪುತ್ರಿ ತಪ್ಸೀನ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಯಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ರೈಲ್ವೆಯ ವುಮೆನ್ಸ್ ಆರ್ಗನೈಸೇಷನ್ ಸ್ಕೂಲ್ ನಲ್ಲಿ, ಪ್ರೌಢ ಶಿಕ್ಷಣವನ್ನು ಕೇಶ್ವಾಪುರದ ಫಾತಿಮಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ವಿದ್ಯಾನಗರದ ವಿದ್ಯಾನಿಕೇತನ ವಿಜ್ಞಾನ ಪಿಯು ಕಾಲೇಜ್ ನಲ್ಲಿ, ನಂತರ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ ಇವರು ಮೊದಲು ಮುಂಬಯಿಯ ಹಚ್ ಹೌಸ್ ನಲ್ಲಿ ಪ್ರಿಲಿಮ್ಸ್ ತರಬೇತಿ ಪಡೆದುಕೊಂಡರು. ನಂತರ ಮೇನ್ಸ್ ಗೆ ತಯಾರಿ ಮತ್ತು ಸಂದರ್ಶನ ತರಬೇತಿಯನ್ನು ದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ಪ್ರಥಮ ಬಾರಿಗೆ ಮೇನ್ಸ್ ಬರೆದು ರ್ಯಾಂಕ್ ಬಂದಿರುವುದು ತುಂಬಾ ಸಂತಸ ತಂದಿದೆ. ಜೂ. 3ರಂದು ನಗರಕ್ಕೆ ಬರುತ್ತಿದ್ದಾಳೆ ಎಂದು ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ತಪ್ಸೀನಬಾನು ಅವರ ತಂದೆ ರೈಲ್ವೇ ನಿವೃತ್ತ ಉದ್ಯೋಗಿಯಾಗಿದ್ದಾರೆ.