ಉಡುಪಿ: ಉತ್ತರಾಖಂಡ ರಾಜ್ಯ ಉತ್ತರಕಾಶಿಯ ಗಂಗೋರಿ ಆಶ್ರಮದಲ್ಲಿ ಉಡುಪಿ ಮೂಲದ ಸುಭದ್ರಾ ಮಾತಾ ಯಾನೆ ತಪೋವನಿ ಮಾತಾ ಅವರ ಅಂತಿಮ ಸಂಸ್ಕಾರ ಶುಕ್ರವಾರ ನಡೆಯಿತು.
ಕೇಂದ್ರ ಸರಕಾರದ ಮಾಜಿ ಸಚಿವೆ, ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿಯವರು ಸುಭದ್ರಾ ಮಾತಾ ಅವರ ಭೌತಿಕ ಶರೀರಕ್ಕೆ ಸ್ನಾನ ಮಾಡಿಸುವುದು, ಬಟ್ಟೆ ಬದಲಾಯಿಸುವುದು, ವೃಂದಾವನ ಸ್ಥಳದಲ್ಲಿ ಕುಳ್ಳಿರಿಸುವುದೇ ಮೊದಲಾದ ಕರ್ಮಾಂಗಗಳನ್ನು ನಡೆಸಿದರೆ, ಮುಂಬಯಿ ಪೇಜಾವರ ಮಠದಿಂದ ಬಂದ ಪುರೋಹಿತರು ಧಾರ್ಮಿಕ ಕ್ರಿಯೆಗಳನ್ನು ನಡೆಸಿದರು.
ಹರಿದ್ವಾರದ ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ, ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆ ನೀಡಿದ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|ಕುಲದೀಪ್, ಸುಭದ್ರಾ ಮಾತಾ ಅವರ ಶಿಷ್ಯ ಶೃಂಗೇರಿ ಮೂಲದ ಸಾಧಕ ಹರಿದಾಸ, ಹಿಂದಿಯಲ್ಲಿ ಜೀವನಚರಿತ್ರೆ ಗ್ರಂಥವನ್ನು ಸಂಕಲಿಸಿದ್ದ ಪತ್ರಕರ್ತ ಶೈಲೇಂದ್ರ ಸಕ್ಸೇನ, ಸುಭದ್ರಾಮಾತಾ ಅವರ ತಮ್ಮಂದಿರಾದ ಉಡುಪಿಯ ನರೇಂದ್ರ ಶೆಟ್ಟಿ, ತಾರೇಂದ್ರ ಶೆಟ್ಟಿ, ತಂಗಿಯರಾದ ಮುಂಬಯಿನ ಡಾ|ವನಜಾ, ಬೆಂಗಳೂರು ನಿವಾಸಿ ವಸಂತಿ ಶೆಟ್ಟಿ, ಚಿಕ್ಕಮ್ಮನ ಮಗ ಮುಂಬಯಿನ ಪುನೀತ್‌ಕುಮಾರ್ ಶೆಟ್ಟಿ, ಅನೇಕ ಸಾಧು ಸಂತರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಆದಿಉಡುಪಿ ಪಂದುಬೆಟ್ಟಿನಲ್ಲಿ ಜನಿಸಿದ್ದ ವಾರಿಜಾಕ್ಷಿ 1970ರ ದಶಕದಲ್ಲಿ ಪೇಜಾವರ ಶ್ರೀಗಳ ಸಂಪರ್ಕಕ್ಕೆ ಬಂದು ದೀಕ್ಷೆಯನ್ನು ಪಡೆದು ಸುಭದ್ರಾ ಮಾತಾ ಎನಿಸಿದರು. ಸುಮಾರು 40 ವರ್ಷಗಳ ಹಿಂದೆ ಉತ್ತರ ಭಾರತಕ್ಕೆ ತೆರಳಿ ಉತ್ತರಾಖಂಡದ ತಪೋವನದಲ್ಲಿ ಒಂಭತ್ತು ವರ್ಷ ಕಠಿನ ತಪಸ್ಸು ಮಾಡಿ ತಪೋವನಿ ಮಾತಾ ಎಂದು ಪ್ರಸಿದ್ಧರಾಗಿದ್ದರು. ಇತ್ತೀಚಿಗೆ ಹರಿದ್ವಾರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುರುವಾರ ನಿರ್ಯಾಣ ಹೊಂದಿದರು.