ಮಣಿಪಾಲ: ಮೌಲ್ಯ ಮತ್ತುಸಂಬಂಧಗಳಿಗೆ ಮಹತ್ವ ನೀಡಿದಾಗ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ. ಉನ್ನತ ಕಂಪೆನಿಗಳಲ್ಲೂ ಸೇವಾ ಶ್ರೇಷ್ಠತೆ ಪಡೆಯಲು ಈ ಅಂಶ ಸಹಾಯಮಾಡುತ್ತದೆ ಎಂದು ಬ್ಲೂಮ್ಬರ್ಗ್ ಎಲ್ಪಿಯ ದಕ್ಷಿಣ ಏಷಿಯಾ ಫೈನಾನ್ಸಿಯಲ್ ಪ್ರೊಡಕ್ಟ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮಿರ್ವಾನಿ ಹೇಳಿದರು.
ಅಂಬಾಗಿಲಿನ ಅಮೃತ್ ಗಾರ್ಡನ್ನಲ್ಲಿ ಶನಿವಾರ ನಡೆದ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ)ಯ 38ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಬದಲಾವಣೆಗಳನ್ನು ಅರ್ಥ ಮಾಡಿಕೊಂಡು ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವ ಪ್ರವೃತ್ತಿ ಇರಬೇಕು ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು ಮಾಹೆ ವಿ.ವಿ.ಯ ಜತೆಗೆ ಟ್ಯಾಪ್ಮಿ ಸಾಧನೆಯನ್ನು ವಿವರಿಸಿ, ಘಟಿಕೋತ್ಸವ ಪ್ರಕ್ರಿಯೆ ನಡೆಸಿಕೊಟ್ಟರು.
ಸಹ ಕುಲಪತಿ ಡಾ| ಮಧು ವೀರರಾಘವನ್ ಅವರಿಗೆ ಸುದೀರ್ಘ ಸೇವಾ ಪ್ರಶಸ್ತಿ ಹಾಗೂ ಸಂಶೋಧನ ಶ್ರೇಷ್ಠತೆಗಾಗಿ ಟಿಎಂಎ ಪೈ ಚಿನ್ನದ ಪದಕ ನೀಡಿ ಸಮ್ಮಾನಿಸಲಾಯಿತು. ಎಂಬಿಎ ವಿವಿಧ ವಿಭಾಗದ 510 ವಿದ್ಯಾರ್ಥಿಗಳು ಪದವಿ ಪಡೆದರು. ಕಾರು ಅಪಘಾತದಲ್ಲಿ ನಿಧನ ಹೊಂದಿದ ವಿದ್ಯಾರ್ಥಿನಿ ಜೆಸ್ವಿನಿ ಎಸ್. ರೆಡ್ಡಿ ಅವರಿಗೆ ನೀಡಿದ ಮೊದಲ ಪದವಿಯನ್ನು ಕುಟುಂಬದ ಸದಸ್ಯರು ಸ್ವೀಕರಿಸಿದರು. ಇದೇ ವೇಳೆ ಜಸ್ವಿನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟ್ಯಾಪ್ಮಿ ನಿರ್ದೇಶಕ ಡಾ| ರಾಜೀವ್ ಕುಮ್ರಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಾಹೆ ಸಹ ಕುಲಪತಿಗಳಾದ ಡಾ| ಎನ್.ಎನ್.ಶರ್ಮ, ಕುಲಸಚಿವ ಡಾ| ಗಿರಿಧರ ಕಿಣಿ, ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ| ವಿನೋದ್ ಥಾಮಸ್ ಉಪಸ್ಥಿತರಿದ್ದರು.