ಕೆಲವರು ಅದೆಷ್ಟು ಪ್ರಯತ್ನಪಟ್ಟರೂ ಬ್ರೇಕ್ ಸಿಗುವುದಿಲ್ಲ. ಇನ್ನೂ ಕೆಲವರು ಒಂದೊಂದು ಅವಕಾಶಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ, ಕೆಲವರಿಗೆ ಮಾತ್ರ ಒಂದೇ ಒಂದು ಚಿತ್ರ ಬಿಡುಗಡೆಯಾಗದಿದ್ದರೂ, ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಆ ಸಾಲಿಗೆ ಸೇರುವವರು ತಾನ್ಯಾ ಹೋಪ್.
ಈ ತಾನ್ಯ ಕನ್ನಡದಲ್ಲಿ ನಟಿಸಿರುವ ಒಂದೇ ಒಂದು ಚಿತ್ರ ಬಿಡುಗಡೆಯಾಗಿಲ್ಲ. ಆದರೆ, ನಾಲ್ಕು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಉಪೇಂದ್ರ ಅವರ ಹೋಮ್ ಮಿನಿಸ್ಟರ್, ದರ್ಶನ್ ಅವರ ಯಜಮಾನ, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಗರ್ಷ ಹಾಗೂ ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಿರುವ ಅಮರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಯಾವ ಸಿನೆಮಾಗಳೂ ಬಿಡುಗಡೆಯಾಗಿಲ್ಲ. ಅದಾಗಲೇ ಒಂದರ ಹಿಂದೊಂದರಂತೆ ಸಿನೆಮಾಗಳು ತಾನ್ಯಾಗೆ ಸಿಕ್ಕಿವೆ.
ತಾನ್ಯಾ ಮಹಾರಾಷ್ಟ್ರ ಮೂಲದ ಬೆಂಗಳೂರು ಹುಡುಗಿ. ತಾನ್ಯಾ ಹುಟ್ಟಿ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಎಲ್ಲಾ ನಟಿಯರಂತೆ ತಾನ್ಯಾ ಕೂಡಾ ರ್‍ಯಾಂಪ್ ವಾಕ್, ಮಾಡೆಲಿಂಗ್ ಮಾಡಿಯೇ ಸಿನಿಮಾ ರಂಗಕ್ಕೆ ಬಂದವರು. 2015ರ ಮಿಸ್ ಇಂಡಿಯಾ ಅಂತಿಮ ಸುತ್ತಿನವರೆಗೆ ಬಂದ ಚೆಲುವೆ, ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದರು. “”ಮಿಸ್ ಇಂಡಿಯಾ ನಿಮಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ನಿಮಗೆ ಸಿಗದಂತಹ ಆತ್ಮವಿಶ್ವಾಸ ಮಿಸ್ ಇಂಡಿಯಾದಲ್ಲಿ ಭಾಗವಹಿಸುವುದರಿಂದ ಬರುತ್ತದೆ” ಎನ್ನುತ್ತಾರೆ ತಾನ್ಯಾ.
ಮಾಡೆಲಿಂಗ್ ಕ್ಷೇತ್ರಕ್ಕೆ ಹೋದವರು ಕ್ರಮೇಣ ಸಿನೆಮಾದತ್ತ ಮುಖ ಮಾಡುವಂತೆ, ತಾನ್ಯಾ ಕೂಡ ಸಿನಿಮಾಕ್ಕೆ ಎಂಟ್ರಿಕೊಟ್ಟಿದ್ದಾರೆ. ತಾನ್ಯಾ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಾದರೂ ಆಕೆ ಸಿನೆಮಾಕ್ಕೆ ಬಂದಿದ್ದು ತೆಲುಗು ಚಿತ್ರರಂಗದ ಮೂಲಕ. 2016ರಲ್ಲಿ ನೇನು ಶೈಲಜಾ ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ತಾನ್ಯಾ, ಇದುವರೆಗೂ ತೆಲುಗಿನ ನಾಲ್ಕು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಒಂದು ತಮಿಳು ಸಿನೆಮಾ ಕೂಡ ತಾನ್ಯಾ ಕೈಯಲ್ಲಿದೆ. ತೆಲುಗು ಸಿನೆಮಾದಲ್ಲಿ ಬಿಝಿಯಾಗಿದ್ದ ತಾನ್ಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರೋದು ಹೋಮ್ ಮಿನಿಸ್ಟರ್ ಸಿನೆಮಾ ಮೂಲಕ. ಉಪೇಂದ್ರ ನಾಯಕರಾಗಿರುವ ಹೋಮ್ ಮಿನಿಸ್ಟರ್ ಸಿನೆಮಾವನ್ನು ತೆಲುಗಿನ ನಿರ್ದೇಶಕರೊಬ್ಬರು ಮಾಡುತ್ತಿದ್ದು, ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿದೆ. ಈಗಾಗಲೇ ತೆಲುಗಿನಲ್ಲಿ ತಾನ್ಯಾ ಮುಖ ಪರಿಚಯವಿರುವುದರಿಂದ ಹೋಮ್ ಮಿನಿಸ್ಟರ್ ಚಿತ್ರದ ಒನ್ ಆಫ್ ದಿ ನಾಯಕಿಯಾಗಿ ತಾನ್ಯಾಗೆ ಅವಕಾಶ ನೀಡಲಾಗಿದೆ. ಈ ಮೂಲಕ ಸ್ಟಾರ್ ನಟನ ಚಿತ್ರದೊಂದಿಗೆ ತಾನ್ಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಂತಾಗಿದೆ.