Advertisement

Mangaluru ತಣ್ಣೀರುಬಾವಿಯಲ್ಲಿ ಕಡಲಜೀವಿಗಳಿಗೊಂದು ಸಂರಕ್ಷಣ ಕೇಂದ್ರ

10:52 PM Oct 08, 2023 | Team Udayavani |

ಮಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಕಡಲಜೀವಿಗಳ ಸಂರಕ್ಷಣ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ.

Advertisement

ಕಾಂಪಾ ಫಂಡ್‌(ಭಾರತದ ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ)ನಡಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಕೇಂದ್ರವನ್ನು ತಣ್ಣೀರುಬಾವಿ ಕಡಲ ಬಳಿ ನಿರ್ಮಿಸಲಾಗುತ್ತಿದ್ದು ಬಹುತೇಕ ಪೂರ್ಣವಾಗಿದೆ.

ಮಂಗಳೂರಿನ ಸುತ್ತಮುತ್ತ ಸಮುದ್ರದಲ್ಲಿ ಗಾಯಗೊಳ್ಳುವ ಕಡಲ ಜೀವಿಗಳನ್ನು ಇಲ್ಲಿಗೆ ತಂದು ಚಿಕಿತ್ಸೆ ನೀಡಿ ಮತ್ತೆ ಕಡಲಿಗೆ ಬಿಡುವುದು ಉದ್ದೇಶ. ಮೀನುಗಾರರ ಬಲೆಗಳಿಗೆ ಸಿಲುಕಿಯೋ, ಬೋಟ್‌ನ ಪ್ರಾಪೆಲ್ಲರ್‌ ಚಕ್ರಗಳಿಗೆ ಬಡಿದೋ ಡಾಲ್ಫಿನ್‌, ಶಾರ್ಕ್‌, ಕಡಲಾಮೆಗಳಂತಹ ಜೀವಿಗಳು ಗಾಯಗೊಳ್ಳುವ, ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುವ ಪ್ರಮೇಯಗಳು ಆಗಾಗ ಬರುತ್ತವೆ.

ಇಂತಹ ಸನ್ನಿವೇಶಗಳಲ್ಲಿ ಚಿಕಿತ್ಸೆ ನೀಡುವಂತಹ ಮೂಲಸೌಕರ್ಯ ಗಳಾಗಲೀ, ತಜ್ಞರಾಗಲೀ ನಮ್ಮಲ್ಲಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ತಣ್ಣೀರುಬಾವಿಯಲ್ಲಿ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

ರಾಜ್ಯಕ್ಕೆ ಮೊದಲ ಕೇಂದ್ರ
ಪ್ರಸ್ತುತ ರಾಜ್ಯದಲ್ಲೆಲ್ಲೂ ಇಂತಹ ಕಡಲ ಜೀವಿಗಳ ಸಂರಕ್ಷಣ ಕೇಂದ್ರವಿಲ್ಲ. ಒಡಿಶಾ, ತಮಿಳುನಾಡು, ಗುಜರಾತ್‌ಗಳಲ್ಲಿ ಇವೆ. ನಮ್ಮಲ್ಲಿ 370 ಕಿ.ಮೀ. ಉದ್ದದ ಕಡಲ ತೀರ ಇರುವ ಕಾರಣ ಅಂತಹ ಕೇಂದ್ರ ಸ್ಥಾಪನೆಗೆ ಅರಣ್ಯ ಇಲಾಖೆ ಮುಂದಾಗಿದೆ. ಯೋಜನೆಗೆ ಅನುಮೋದನೆ ಸಿಕ್ಕಿ ಅನುದಾನ ಬಿಡುಗಡೆಯಾದ ಬಳಿಕ ತಜ್ಞರನ್ನು ನಿಯೋಜಿಸಿ ಕೇಂದ್ರವನ್ನು ಕಾರ್ಯಾ ರಂಭಿಸುವುದು ಇಲಾಖೆಯ ಸದ್ಯದ ಗುರಿ.ಮೆರೈನ್‌ ಸೆಲ್‌ಗೆ ಮರು ಜೀವ: 2 ವರ್ಷ ಹಿಂದೆ ಕಾರವಾರದಲ್ಲಿ ಅರಣ್ಯ ಇಲಾಖೆಯ ಅಧೀನದಲ್ಲಿ ಮೆರೈನ್‌ ಸೆಲ್‌ ತೆರೆಯಲಾಗಿತ್ತು. ಕಡಲ ಜೀವಿಗಳು ಗಾಯಗೊಂಡು ಬಂದು ದಡಕ್ಕೆ ಬೀಳುವಾಗ ಅವುಗಳ ಗುರುತಿಸುವಿಕೆ, ಕಡಲಿನಲ್ಲಿ ಬೇಟೆ ತಡೆ ಇತ್ಯಾದಿ ನಿಯಂತ್ರಣದ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಸೂಕ್ತ ತರಬೇತಾದ ಸಿಬಂದಿ ಅಗತ್ಯ.

Advertisement

ಕಡಲ ಬದಿಯಲ್ಲಿದ್ದರೆ ಸೂಕ್ತ
ಸಂರಕ್ಷಣ ಕೇಂದ್ರವು ತಣ್ಣೀರುಬಾವಿಯ ಟ್ರೀಪಾರ್ಕ್‌ನ ಮುಂಭಾಗದಲ್ಲಿದೆ. ಕಡಲಿನಿಂದ ತುಸು ದೂರದಲ್ಲಿರುವುದರಿಂದ ಅಲ್ಲಿಗೆ ಗಾಯಗೊಂಡ ದೊಡ್ಡಗಾತ್ರದ ಜೀವಿಗಳನ್ನು ಸಾಗಿಸುವುದು ಕಷ್ಟವಾಗಬಹುದು. ಕಡಲ ಪಕ್ಕದಲ್ಲೇ ಮಾಡಿದ್ದರೆ ಸುಲಭವವಾಗುತ್ತಿತ್ತು. ಇನ್ನುಳಿದ ದಾರಿಯೆಂದರೆ ಅಲ್ಲಿರುವ ಕೆರೆಯೊಂದನ್ನು ಬಳಸಿಕೊಂಡು ದೊಡ್ಡ ಜೀವಿಗಳಿಗೆ ಚಿಕಿತ್ಸೆ ನೀಡುವುದು ಹಾಗೂ ಸಣ್ಣ ಕಡಲಪ್ರಾಣಿಗಳನ್ನು ಕೇಂದ್ರಕ್ಕೆ ಸಾಗಿಸುವುದು.

ಈಗ ಬರುವ ಕಡಲ ಜೀವಿಗಳನ್ನು ತೀರದಿಂದ ಒಳಗೆ ಕರೆತಂದು ಚಿಕಿತ್ಸೆ ನೀಡುವ ವ್ಯವಸ್ಥೆ ಇನ್ನೂ ಇಲ್ಲ, ಏನಿದ್ದರೂ ತಜ್ಞರನ್ನು ಕರೆಸಿ, ಕಡಲ ಬದಿಯಲ್ಲೇ ತಾತ್ಕಾಲಿಕ ಚಿಕಿತ್ಸೆ ನೀಡುವುದಷ್ಟೇ ನಡೆಯುತ್ತಿದೆ. ಕೇಂದ್ರ ಸ್ಥಾಪನೆಯಾದರೆ ಕೆಲಕಾಲ ಆರೈಕೆ ಮಾಡಿ ಅವುಗಳನ್ನು ರಕ್ಷಿಸಬಹುದಾದ ಸಾಧ್ಯತೆ ಹೆಚ್ಚಾಗಲಿದೆ.
-ಆ್ಯಂಟನಿ ಮರಿಯಪ್ಪ, ಡಿಸಿಎಫ್‌,
ಮಂಗಳೂರು ಅರಣ್ಯ ಇಲಾಖೆ

ಡಾಲ್ಫಿನ್‌ಗಳಿಗೆ ಗಾಯವಾಗುವುದು ಕಡಿಮೆ, ಕಡಲಾಮೆಗಳಿಗೆ ರಕ್ಷಣೆ ಅಗತ್ಯವಿದೆ, ಕೇಂದ್ರ ಸ್ಥಾಪನೆ ಮಾಡಿದರೆ ಸಾಲದು, ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ
ಕೆಲಸವೂ ಆಗಬೇಕಿದೆ.
– ಯತೀಶ್‌ ಬೈಕಂಪಾಡಿ, ಬೀಚ್‌ ಪ್ರವಾಸೋದ್ಯಮ ತಜ್ಞ

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next