Advertisement
ಆಂಧ್ರ ಮೂಲದ ಜಿಎಂಆರ್ ವಿದ್ಯುತ್ ಕಂಪೆನಿಯು ತನ್ನ ಅವಶೇಷವನ್ನು ತೆರವುಗೊಳಿಸದೆ ಜಾಗ ಖಾಲಿ ಮಾಡಿರುವ ಕಾರಣದಿಂದ ಪಳೆಯುಳಿಕೆ ಸಮಸ್ಯೆ ಉಲ್ಬಣಿಸಿದೆ. ಹಲವು ವರ್ಷಗಳ ಹಿಂದೆ ಸಮುದ್ರದೊಳಗೆ ಹಾಕಿದ ಕಾಂಕ್ರೀಟ್ ಪಿಲ್ಲರ್, ಪೈಪ್‌ಲೈನ್ ತೆರವುಗೊಳಿಸದ ಕಾರಣದಿಂದ ಇದರ ಮೇಲ್ಭಾಗ ಸದ್ಯ ಕಾಣಸಿಗುತ್ತಿದೆ. ಕಬ್ಬಿಣ ತುಕ್ಕು ಹಿಡಿದಿದ್ದು, ಬಹಳಷ್ಟು ಚೂಪಾಗಿಯೂ ಇದ್ದು ಅಪಾಯ ಆಹ್ವಾನಿಸುತ್ತಿದೆ. ಕೆಲವು ಬಾರಿ ಇದು ಮರಳಿನಲ್ಲಿ/ನೀರಿನಲ್ಲಿ ಮುಚ್ಚಿ ಹೋದರೆ, ಇನ್ನು ಕೆಲವು ಬಾರಿ ಕಾಣಸಿಗುತ್ತದೆ. ಲೋ ಟೈಡ್ ಸಂದರ್ಭ ಇದು ಸ್ಪಷ್ಟವಾಗಿ ಕಾಣುತ್ತದೆ. ಒಂದು ವೇಳೆ ಅಪ್ಪಿತಪ್ಪಿ ಅದರ ಮೇಲೆ ಕಾಲಿಟ್ಟರೆ ಗಂಭೀರ ಗಾಯವಾಗುವ ಅಪಾಯವಿದೆ.ಹೀಗಾಗಿ, ಬೀಚ್‌ನ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ.
ತಣ್ಣೀರುಬಾವಿ ಬೀಚ್‌ನ ಸಮೀಪ ಸುಮಾರು 15 ವರ್ಷಗಳ ಹಿಂದೆ ವಿದ್ಯುತ್ ಕಂಪೆನಿಯು ತೇಲುವ ವಿದ್ಯುತ್ ಯೋಜನೆ ಆರಂಭಿಸಿತ್ತು. ಹೀಗಾಗಿ ತನ್ನ ಉಪಯೋಗಕ್ಕಾಗಿ ಬೀಚ್ ದಡದಲ್ಲಿ ಬೃಹತ್ ಕಲ್ಲುಗಳನ್ನು ಹಾಕಿ ಕಾಂಕ್ರೀಟ್ ಪಿಲ್ಲರ್ ಬಳಸಿ ಕಂಬಗಳನ್ನು ನಿರ್ಮಿಸಿತ್ತು. ಬೀಚ್ ಮುಖೇನವಾಗಿ ಸಮುದ್ರಕ್ಕೆ ಪೈಪ್‌ಲೈನ್ ಕೂಡ ಅಳವಡಿಕೆ ಮಾಡಲಾಗಿತ್ತು. ಆದರೆ ಸುಮಾರು 10 ವರ್ಷಗಳ ಹಿಂದೆ ಸಂಸ್ಥೆಯು ಈ ಭಾಗದಿಂದ ಯೋಜನೆಯನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿತ್ತು. ಇದನ್ನೂ ಓದಿ:ನಗರಸಭೆಯ ಮಳಿಗೆ ಬಳಸಿ ಅಕ್ರಮ ನಾಟಾ ಸಂಗ್ರಹ!
Related Articles
ಸಂಸ್ಥೆಯು ಸ್ಥಳಾಂತರವಾಗುತ್ತಿದ್ದಂತೆ ಯೋಜನೆಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಅವರು ಸಾಗಾಟ ಮಾಡಿದ್ದರು. ಆದರೆ ಸಮುದ್ರ ತೀರದಲ್ಲಿ ಹಾಕಿದ್ದ ಪಿಲ್ಲರ್ ತೆರವಾಗಿರಲಿಲ್ಲ. ಬಳಿಕ ಸಮುದ್ರ ತೀರದಲ್ಲಿ ಹಾಕಲಾಗಿದ್ದ ಪಿಲ್ಲರ್ ತೆರವಿಗೆ ಸಂಸ್ಥೆಯು ಗುತ್ತಿಗೆ ನೀಡಿತ್ತು. ಆದರೆ ಆಗ ಸಮುದ್ರದ ಮೇಲಿನ ಪಿಲ್ಲರ್ ತೆರವಾಗಿದ್ದರೂ ಆಳದವರೆಗೆ ತೆಗೆಯದೆ ಹಾಗೆಯೇ ಬಿಡಲಾಗಿತ್ತು. ಸ್ಥಳೀಯರ ಪ್ರಕಾರ ಇದು ನೀರಿನಲ್ಲಿ ಭಾರೀ ಆಳಕ್ಕೆ ಇರುವ ಸಾಧ್ಯತೆಯಿದೆ. ಜತೆಗೆ ನೀರಿನಲ್ಲಿ ಕಲ್ಲಿನ ರಾಶಿಯನ್ನೂ ಹಾಗೆಯೇ ಬಿಡಲಾಗಿದೆ.
Advertisement
ಎಚ್ಚರ ತಪ್ಪಿದರೆ ಅಪಾಯ!ಇತ್ತೀಚೆಗೆ ಬೋಟ್ ದುರಂತ ಆದ ಸಂದರ್ಭ ಯುವಕನ ಹುಡುಕಾಟಕ್ಕಾಗಿ ಸಮುದ್ರಕ್ಕೆ ಧುಮುಕಿದ ಸ್ಥಳೀಯ ನಿವಾಸಿಯೊಬ್ಬರು ಕಬ್ಬಿಣದ ಅವಶೇಷ ಗಮನಿಸದ ಕಾರಣದಿಂದ ಅವರ ಎಡಕಾಲಿಗೆ ಗಂಭೀರ ಸ್ವರೂಪದಲ್ಲಿ ತಿವಿದ ಮಾದರಿಯ ಗಾಯಗಳಾಗಿವೆ. ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಕೆಗೆ ಇನ್ನೂ ಕೆಲವು ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಇದೇ ರೀತಿ ಗಮನಹರಿಸದೆ ಇಲ್ಲಿ ಕಡಲಿಗಿಳಿದರೆ ಅಥವಾ ಪ್ರವಾಸಿಗರು ಇಲ್ಲಿ ಈಜಲು ತೆರಳಿದರೆ ಅಪಾಯ ಖಚಿತ. ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ತಣ್ಣೀರುಬಾರಿ ಬೀಚ್ ಅಭಿವೃದ್ಧಿ ಸಮಿತಿಯವರು ಫಲಕ ಅಳವಡಿಸಿದ್ದಾರೆ. ಜತೆಗೆ ಇಲ್ಲಿ ಜೀವರಕ್ಷಕರು ಕೂಡ ಎಚ್ಚರಿಕೆ ವಹಿಸಲು ಸೂಚನೆ ನೀಡುತ್ತಾರೆ. ಹೀಗಿದ್ದರೂ ಸಮುದ್ರಕ್ಕೆ ತೆರಳಿದರೆ ಅಪಾಯ ಕಟ್ಟಿಟ್ಟ ಬುತ್ತಿ! ವರದಿ ನೀಡಲು ಸೂಚನೆ
ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಕಬ್ಬಿಣದ ಅವಶೇಷ ಬಾಕಿಯಾಗಿರುವ ಹಿನ್ನೆಲೆಯಲ್ಲಿ ಇದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಆರ್‌ಝಡ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿಯ ಆಧಾರದಲ್ಲಿ ಸಂಬಂಧಪಟ್ಟವರ ಮೂಲಕ ಇದನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು.
ಡಾ|ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ದ.ಕ ಕ್ರಮ ಕೈಗೊಳ್ಳಲು ಸೂಚನೆ
ತಣ್ಣೀರುಬಾವಿ ಬೀಚ್ ವ್ಯಾಪ್ತಿಯಲ್ಲಿ ಕಬ್ಬಿಣದ ಅವಶೇಷ ಬಾಕಿಯಾಗಿರುವುದನ್ನು ತೆರವು ಮಾಡುವ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಜತೆಗೆ ಮಾತುಕತೆ ನಡೆಸಲಾಗುವುದು. ಪ್ರವಾಸಿಗರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗುವುದು.
-ಡಾ|ಭರತ್ ಶೆಟ್ಟಿ ವೈ., ಶಾಸಕರು – ದಿನೇಶ್ ಇರಾ