Advertisement

ಸಸ್ಯ ಸಂಕುಲ ಉಳಿಸಲು ಟ್ಯಾಂಕರ್‌ ನೀರು!

03:46 PM Jun 04, 2018 | Team Udayavani |

ಸಿರುಗುಪ್ಪ: ತಾಲೂಕಿನ ದೇಶನೂರು ಸಮೀಪವಿರುವ ತೋಟಗಾರಿಕೆ ಇಲಾಖೆಗೆ ಸೇರಿದ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆದಿದ್ದ ವಿವಿಧ ಜಾತಿಯ ಮರಗಳು ಮತ್ತು ಸಸಿಗಳು ಕಳೆದ ಮೂರು ತಿಂಗಳಿನಿಂದ ನದಿಯಲ್ಲಿ ನೀರಿಲ್ಲದೆ ಒಣಗುತ್ತಿರುವುದನ್ನು ತಡೆಯಲು ಇಲಾಖೆಯ ಅಧಿಕಾರಿಗಳು
ಟ್ಯಾಂಕರ್‌ ಮೂಲಕ ಒಂದು ತಿಂಗಳಿನಿಂದ ನೀರು ಪೂರೈಸುತ್ತಿದ್ದರಿಂದ ಮರ ಹಾಗೂ ಸಸಿಗಳು ಹಸಿರಿನಿಂದ ಕಂಗೊಳಿಸುತ್ತಿವೆ.

Advertisement

ತೋಟಗಾರಿಕೆ ಕ್ಷೇತ್ರಕ್ಕೆ ಬೇಕಾದ ನೀರಿನ ಮೂಲ ತುಂಗಭದ್ರಾ ನದಿಯಿಂದ ಬಳಸಿಕೊಂಡು ಮಾವು, ತೆಂಗು, ಸಫೋಟ, ಹಲಸು, ಪೇರಲ, ನೇರಳೆ, ಕರಿಬೇವು, ನಿಂಬೆ, ಮಾವಿನ ಸಸಿ ಸೇರಿದಂತೆ ವಿವಿಧ ಅಲಂಕಾರಿಕ ಸಸಿಗಳು ಮತ್ತು ಗಿಡಗಳನ್ನು ಇಲ್ಲಿ ಬೆಳೆಯಲಾಗಿದೆ.

 ಕಳೆದ ಮೂರು ತಿಂಗಳಿನಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಬತ್ತಿ ಹೋಗಿದ್ದರಿಂದ ಇಲ್ಲಿರುವ ಗಿಡಗಳಿಗೆ ನೀರುಣಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗಿಡಗಳು ಮತ್ತು ಸಣ್ಣ ಸಸಿಗಳು ಒಣಗಲು ಆರಂಭಿಸಿದ್ದವು. ಸುಮಾರು 15 ಸಾವಿರ ಸಸಿ ಮತ್ತು ಮರಗಳು ಇಲ್ಲಿದ್ದು, ಬೇಸಿಗೆಯ ಬಿರುಬಿಸಿಲು ಒಂದು ಕಡೆಯಾದರೆ ಮತ್ತೂಂದು ಕಡೆ ನದಿಯಲ್ಲಿ ನೀರು ಬತ್ತಿ ಹೋಗಿತ್ತು. ದಿನದಿಂದ ದಿನಕ್ಕೆ ಗಿಡಗಳು ಮತ್ತು ಸಸಿಗಳು ಒಣಗಲು ಆರಂಭಿಸಿದ್ದವು.

ಹೇಗಾದರೂ ಮಾಡಿ ಬೆಳೆದಿರುವ ಗಿಡ ಮತ್ತು ಬೆಳೆಸಿದ ಸಸಿಗಳನ್ನು ಉಳಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರು ತಮ್ಮ ಕಚೇರಿಯ ಮೇಲಧಿಕಾರಿಗಳನ್ನು ಸಂಪರ್ಕಿಸಿದರು. ಟ್ಯಾಂಕರ್‌ ಮೂಲಕ ತೋಟಗಾರಿಕೆ ಕ್ಷೇತ್ರದಲ್ಲಿರುವ ಗಿಡಗಳಿಗೆ ನೀರುಣಿಸಲು ಅನುಮತಿ ಪಡೆದುಕೊಂಡರು. 

ಮಳೆಗಾಲ ಆರಂಭವಾಗಿದ್ದರೂ ಈ ಭಾಗದಲ್ಲಿ ಸರಿಯಾದ ಮಳೆಯಾಗಿಲ್ಲ. ತುಂಗಭದ್ರಾ ನದಿಯಲ್ಲಿ ಈಗ ನೀರು ಹರಿಯುತ್ತಿದ್ದರೂ ತೋಟಕ್ಕೆ ನೀರು ಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನದಿ ತೀರದ ಭಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಇಂದಿಗೂ ಸಮರ್ಪಕವಾಗಿ ನೀರು ಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ಟ್ಯಾಂಕರ್‌ ಮೂಲಕ ನೀರನ್ನು ತಂದು ಗಿಡಗಳಿಗೆ ಹಾಕಲಾಗುತ್ತಿದೆ.

Advertisement

ಇಲ್ಲಿನ ಅಧಿಕಾರಿಗಳ ಕಾಳಜಿಯಿಂದ ಒಣಗುತ್ತಿರುವ ಸಸಿ ಮತ್ತು ಮರಗಳು ಜೀವ ಹಿಡಿದುಕೊಂಡಿವೆ. ಅಧಿಕಾರಿಗಳು ಟ್ಯಾಂಕರ್‌ ಮೂಲಕ ತೋಟಕ್ಕೆ ನೀರು ಪೂರೈಸುವ ಕ್ರಮ ಕೈಗೊಳ್ಳದೆ ಹೋಗಿದ್ದರೆ ತೋಟದಲ್ಲಿರುವ ಸಸ್ಯ ಸಂಕುಲ ಒಣಗಿ ಹೋಗುತ್ತಿತ್ತು. ಪ್ರತಿನಿತ್ಯ ನಾಲ್ಕರಿಂದ ಐದು ಟ್ಯಾಂಕರ್‌ ನೀರನ್ನು ಸಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ರುಣಿಸಲಾಗುತ್ತಿದೆ. ಗಿಡಗಳಿಗೆ ಸರದಿಯ ಪ್ರಕಾರ ನೀರು ಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next