Advertisement

ರಾಜ್ಯದ 2999 ಗ್ರಾಮಗಳಿಗೆ ಟ್ಯಾಂಕರ್‌ ನೀರು

11:28 AM May 19, 2019 | Team Udayavani |

ಬೆಳಗಾವಿ: ರಾಜ್ಯದಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು ಈಗ 2999 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ನಗರದಲ್ಲಿ ಶನಿವಾರ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕೈಗೊಂಡ ಪರಿಹಾರ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರ ಜೊತೆ ವಿಡಿಯೋ ಸಂವಾದ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಗಂಭೀರವಾಗುವ ಸಾಧ್ಯತೆ ಇದೆ. ಟ್ಯಾಂಕರ್‌ ಪೂರೈಕೆಯಾಗುತ್ತಿರುವ ಗ್ರಾಮಗಳ ಸಂಖ್ಯೆ 3500 ದಾಟುವ ನಿರೀಕ್ಷೆ ಇದೆ. ಇದನ್ನು ಸಮರ್ಥವಾಗಿ ಎದುರಿಸಲು ಸರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದರು.

1,632 ಗ್ರಾಮಗಳಿಗೆ 2,322 ಟ್ಯಾಂಕರ್‌ ಹಾಗೂ 1,873 ಗ್ರಾಮಗಳಿಗೆ ಬೋರ್‌ವೆಲ್ಗಳ ಸಹಾಯದಿಂದ 1,367 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿರುವದು ಇದೇ ಮೊದಲು. ರಾಜ್ಯದಲ್ಲಿ ಕಳೆದ 18 ವರ್ಷಗಳಲ್ಲಿ 14 ವರ್ಷ ಬರಗಾಲ ಎದುರಾಗಿದೆ. ಪ್ರತಿವರ್ಷ ತಲೆದೋರುವ ಬರಗಾಲ ಎದುರಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

ಈಗಿನ ಅಂಕಿ ಅಂಶಗಳ ಪ್ರಕಾರ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳು ಟ್ಯಾಂಕರ್‌ ನೀರಿಗೆ ಮೊರೆ ಹೋಗಿವೆ. ರಾಮನಗರ, ಚಾಮರಾಜನಗರ, ಕೊಡಗು, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಯಾವುದೇ ಟ್ಯಾಂಕರ್‌ ಪೂರೈಕೆ ಇಲ್ಲ ಎಂದು ಅವರು ಹೇಳಿದರು.

Advertisement

ಭೀಕರ ಬರದ ಹಿನ್ನೆಲೆಯಲ್ಲಿ ಕೆಲಸ ಹುಡುಕಿಕೊಂಡು ಯಾರೂ ಗುಳೇ ಹೋಗಲು ಅವಕಾಶ ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಈಗ ನಾವು ಕೈಗೊಂಡಿರುವ ಪರಿಹಾರ ಕಾರ್ಯಗಳು ತಾತ್ಕಾಲಿಕ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದ್ದು ಈ ನಿಟ್ಟಿನಲ್ಲಿ ಸರಕಾರ ಗಂಭೀರ ಆಲೋಚನೆ ಮಾಡುತ್ತಿದೆ. ಕೆರೆ ತುಂಬಿಸುವುದು, ಕೆರೆ ಹೂಳೆತ್ತುವುದು. ನದಿಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಇದರ ಜೊತೆಗೆ ನಿಸರ್ಗದೊಂದಿಗೆ ಸಂಘರ್ಷ ಕೈಬಿಡಬೇಕು ಎಂದರು.

ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಪ್ರಕೃತಿ ವಿಕೋಪ ಖಾತೆಯಲ್ಲಿ ಬರ ನಿರ್ವಹಣೆಗೆ ಸುಮಾರು 700 ಕೋಟಿ ರೂ.ಹಣವಿದೆ. ಹಣಕಾಸಿನ ಕೊರತೆ ಇಲ್ಲ. ಬರ ಪೀಡಿತ ಪ್ರದೇಶಗಳಲ್ಲಿ ಪೂರೈಸಲಾಗುವ ಟ್ಯಾಂಕರ್‌ ನೀರಿನಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಠ 40 ಲೀ. ನೀರು ಒದಗಿಸಲಾಗುತ್ತಿದೆ ಎಂದರು.

ಕೃಷ್ಣಾ ನದಿ ತೀರದ ಜನರಿಗೆ ಕುಡಿಯುವ ನೀರು ತಕ್ಷಣ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ.ನೀರಿಗಾಗಿ ನೀರು ಒಡಂಬಡಿಕೆಗೆ ಕರ್ನಾಟಕ ಸರ್ಕಾರ ಸಿದ್ಧವಿದೆ. ಆದರೆ ಒಡಂಬಡಿಕೆ ಪತ್ರದ ಕೆಲ ಅಂಶಗಳನ್ನು ಪರಿಷ್ಕರಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹೀಗಿರುವಾಗ ಒಡಂಬಡಿಕೆಗೆ ಒತ್ತು ನೀಡದೇ ಮಾನವೀಯತೆ ಆಧಾರದ ಮೇಲೆ ಕುಡಿಯುವ ನೀರು ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಈಗ 139 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇದಲ್ಲದೇ ಜಾನುವಾರುಗಳಿಗೆ ಏಳು ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹ ಇದೆ. ಜಿಲ್ಲೆಗೆ ಹೆಚ್ಚುವರಿಯಾಗಿ 38 ಸಾವಿರ ಮೇವಿನ ಕಿಟ್ ಬೇಡಿಕೆಯಿದ್ದು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಡಾ| ವಿಶಾಲ ಆರ್‌, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next