Advertisement

ಪಾಲಿಕೆ ಸದಸ್ಯರ ಮನೆಗೆ ಟ್ಯಾಂಕರ್‌ ನೀರು: ಆರೋಪ

03:23 PM Jul 25, 2017 | |

ದಾವಣಗೆರೆ: ಸಾರ್ವಜನಿಕರಿಗಿಂತ ಟ್ಯಾಂಕರ್‌ ನೀರನ್ನು ಪಾಲಿಕೆ ಸದಸ್ಯರೇ ಹೆಚ್ಚು ಬಳಸುತ್ತಿದ್ದಾರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

Advertisement

ಕೆರೆಗಳಲ್ಲಿ ನೀರು ತುಂಬಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್‌ ಕ್ರಮದಿಂದಾಗಿ ಜನರನ್ನು ಸಮಸ್ಯೆಗೆ ದೂಡಿದ್ದಾರೆ. ಈ ಮಧ್ಯೆ ಟ್ಯಾಂಕರ್‌ ಮೂಲಕ ನೀರು ಕೊಡುತ್ತಿದ್ದೇವೆಂದು ಹೇಳಿಕೊಳ್ಳುವ ಪಾಲಿಕೆ ಸದಸ್ಯರು ಸ್ವತಃ ತಮ್ಮ ಮನೆಗಳಿಗೆ ಆ ಟ್ಯಾಂಕರ್‌ ನೀರು ಪೂರೈಸಿಕೊಳ್ಳುತ್ತಿದ್ದಾರೆ ಎಂದರು.

ಹಿರಿಯ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಪಾಲಿಕೆಗೆ ಸೇರಿದ ಬೋರ್‌ವೆಲ್‌ ಅನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ಫ್ಲೋರ್‌ ಮಿಲ್‌ ಬಳಿಯ ತಮ್ಮ ನಿವಾಸ, ತಮ್ಮ ಸಿಮೆಂಟ್‌ ಅಂಗಡಿಗೆ ಇದೇ ಪಾಲಿಕೆ ಬೋರ್‌ವೆಲ್‌ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಳೆದ ಜನವರಿಯಿಂದ ಜನರಿಗೆ ನೀರು ಪೂರೈಸಲಾಗಿದೆಯಂತೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ದಿನೇಶ್‌ ಶೆಟ್ಟಿಯವರನ್ನು ಜಿಲ್ಲಾ ಸಚಿವರು ಮೊದಲು ಪಕ್ಷದಿಂದ ಹೊರ ಹಾಕಬೇಕು ಎಂದು ಅವರು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಪದೇ ಪದೇ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಾರೆ. ಈ ಬಾರಿ ನಮ್ಮ ವಿಸ್ತಾರಕರ ಕುರಿತು ಆರೋಪ ಮಾಡಿದ್ದಾರೆ. ನಮ್ಮ ಪಕ್ಷ ಸಂಘಟನೆಗೆ ನಾವು ಮನೆ ಮನೆಗೆ ಹೋಗುತ್ತಿದ್ದೇವೆ. ಬಸವರಾಜ್‌ ಹೇಳುವಂತೆ ನಾವು ಕೋಮುವಾದ ಬಿತ್ತುತ್ತಿಲ್ಲ. ನಮ್ಮ ಪಕ್ಷದ ಧ್ಯೇಯ ಧೋರಣೆ, ನಾಯಕರ ಕುರಿತು, ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಕಾಂಗ್ರೆಸ್‌ ನಾಯಕರು ಪಕ್ಷ ಸಂಘಟನೆಗೆ ಎಂದೂ ಮತದಾರನ ಮನೆಗೆ ಹೋದವರಲ್ಲ. ಹಾಗಾಗಿ ಅವರಿಗೆ ಈ ರೀತಿಯ ಅನುಮಾನ ಇವೆ ಎಂದು ಅವರು ತಿಳಿಸಿದರು. 

ನಗರದಲ್ಲಿ ಡೆಂಘಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಚರಂಡಿಗಳು ತುಂಬಿ ತುಳುಕುತ್ತಿವೆ. ಆದರೂ ಪಾಲಿಕೆ ಸದಸ್ಯರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ ಆಡಳಿತ ನಡೆಯುತ್ತಿದೆ. ಪಾಲಿಕೆ ಸದಸ್ಯರು ಹೆಸರಿಗೆ ಮಾತ್ರ ಅಧಿಕಾರದಲ್ಲಿದ್ದಾರೆ. ಎಲ್ಲಾ ತೀರ್ಮಾನ ಸಚಿವರ ಮನೆಯಲ್ಲಿಯೇ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪಕ್ಷದ ಮುಖಂಡರಾದ ಎಂ. ರಾಜಶೇಖರ್‌, ಪಿ.ಸಿ. ಶ್ರೀನಿವಾಸ್‌, ಧನುಷ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಒಂದು ಗುಂಡಿಗೆ 8 ಸಾವಿರ ರೂ.!
ವೀರಶೈವ ರುದ್ರಭೂಮಿಯಲ್ಲಿ ಒಂದು ಗುಂಡಿ ತೆಗೆಯಲು 8 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಸತತ ದೂರು ನೀಡಿದರೂ ಪಾಲಿಕೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ತಲೆ ಕೆಡಿಸಿಕೊಳ್ಳಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಮುಂದಾದರೆ ಕಾಂಗ್ರೆಸ್‌ ಸದಸ್ಯರು ಏಕಾಏಕಿ ಗಲಾಟೆಗೆ ಇಳಿಯುತ್ತಾರೆ.
 ಡಿ.ಕೆ. ಕುಮಾರ್‌, ಪಾಲಿಕೆ ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next