Advertisement

ಗ್ರಾಮಾಂತರ ಪ್ರದೇಶದಲ್ಲಿ ಟ್ಯಾಂಕರ್‌ ನೀರೇ ಆಧಾರ

06:25 AM Mar 25, 2018 | |

ಕುಂದಾಪುರ: ಏರುತ್ತಿರುವ ತಾಪಮಾನದಿಂದ ನೀರಿಲ್ಲದೆ ಕಂಗೆಟ್ಟಿರುವ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಟ್ಯಾಂಕರ್‌ ನೀರೇ ಆಧಾರವಾಗಿದೆ. ಎಪ್ರಿಲ್‌ ಬಳಿಕ ಬಹುತೇಕ ಗ್ರಾಮಗಳು ಟ್ಯಾಂಕರ್‌ ನೀರನ್ನೇ ಆಶ್ರಯಿಸಿದ್ದು, ಇದಕ್ಕೆ ಈಗಾಗಲೇ ಜಾಗೃತ ಸಮಿತಿ ಸಭೆ ನಡೆದು ಅನುದಾನ ಮಂಜೂರಾಗಿದೆ.
  
1 ಲಕ್ಷ ರೂ. ವರೆಗಿನ 
ವೆಚ್ಚಕ್ಕೆ ಟೆಂಡರ್‌ ಇಲ್ಲ

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು 1 ಲಕ್ಷ ರೂ.ಗಿಂತ ಕಡಿಮೆ ಮೊತ್ತ ಸಾಕಾಗುವ ಗ್ರಾಮ ಪಂಚಾಯತ್‌ಗಳು ನೇರವಾಗಿ ಹಣ ನೀಡಬಹುದಾಗಿದ್ದು 5 ಲಕ್ಷ ರೂ.ವರೆಗೆ ವೆಚ್ಚ ಮಾಡುವ ಗ್ರಾ.ಪಂ.ಗಳು ಸ್ಥಳೀಯ ಟೆಂಡರ್‌ ಕರೆಯಬೇಕು. 5 ಲಕ್ಷ ರೂ.ಗೂ ಹೆಚ್ಚು ಮೊತ್ತ ಖರ್ಚು ಮಾಡಬೇಕಾಗಿರುವ ಪಂಚಾಯತ್‌ಗಳು ಇ-ಟೆಂಡರ್‌ ಕರೆಯಬೇಕು. ಈ ಸಂಬಂಧ ಫೆ.1ರಂದು ಜಿಲ್ಲಾಧಿಕಾರಿಗಳು ಎಲ್ಲ ಗ್ರಾ.ಪಂ.ಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. 

Advertisement

ಷರತ್ತುಗಳಿಂದ ಆತಂಕ 
ಇ ಟೆಂಡರ್‌ ಕರೆದರೆ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಹಲವು ಅಡೆತಡೆ ಇದೆ ಎಂದು ಗ್ರಾ.ಪಂ.ನವರು ಹೇಳುತ್ತಾರೆ. 25 ಸಾವಿರ ರೂ. ಮುಂಗಡ ಠೇವಣಿ ಇಡಬೇಕು, 12 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್‌ ಆಗಬೇಕು, ಜಿಪಿಎಸ್‌ ಅಳವಡಿಸಬೇಕು ಇತ್ಯಾದಿ ನಿಯಮಗಳಿವೆ. ಆದರೆ ಹಳ್ಳಿಯ ಸಣ್ಣ ರಸ್ತೆಗಳಲ್ಲಿ ದೊಡ್ಡ ಟ್ಯಾಂಕರ್‌ಗಳು ಚಲಿಸುವುದು ಕಷ್ಟ. ಕಳೆದ ಬಾರಿ ಟ್ಯಾಂಕರ್‌ಗಳಿಗೆ ಹಣಪಾವತಿ ವಿಳಂಬವಾಗಿದ್ದು, ಈಗ ಮತ್ತಷ್ಟು ಷರತ್ತು ವಿಧಿಸಿದರೆ, ಟ್ಯಾಂಕರ್‌ಗಳೇ ದೊರೆಯದೆ ಸಕಾಲದಲ್ಲಿ ನೀರು ಪೂರೈಕೆ ಕಷ್ಟವಾಗಬಹುದು ಎಂಬ ಆತಂಕ ಪಂಚಾಯತ್‌ಗಳದ್ದಾಗಿದೆ.  

ಅನುದಾನ ಇದ್ದರೂ ಬೋರ್‌ ಇಲ್ಲ!
ಸಿದ್ದಾಪುರದಲ್ಲಿ ಕಳೆದ ವರ್ಷ ನೀರೊದಗಿಸಲು ವು5.5 ಲಕ್ಷ ರೂ. ವ್ಯಯಿಸಲಾಗಿದೆ. 2 ಕೊಳವೆ ಬಾವಿ ಮಂಜೂರಾಗಿದೆ. ಆದರೆ ಕಾಮಗಾರಿ ನಡೆಯಲೇ ಇಲ್ಲ. ಆದ್ದರಿಂದ ಬಂದ ಅನುದಾನ ವಾಪಸ್‌ ಹೋಗಿದೆ. ನಾವುಂದ, ಪಡುವರಿ, ಶಂಕರನಾರಾಯಣ, ಶಿರೂರಿನ ಕೆಲ ಭಾಗಗಳಿಗೂ ಟ್ಯಾಂಕರ್‌ ನೀರು ಅನಿವಾರ್ಯವಾಗಿದೆ. 
 
ಇಲ್ಲಿ ಪರವಾಗಿಲ್ಲ
ಬಿಜೂರಿನಲ್ಲಿ ಎಪ್ರಿಲ್‌ ಕೊನೆ ತನಕ ಸಮಸ್ಯೆ ಉಂಟಾಗುವುದಿಲ್ಲ. ಅಮಾಸೆಬೈಲಿನಲ್ಲಿ ನೀರಿನ ಕೊರತೆ ಇಲ್ಲ. ಹಾಗೆಯೇ ಕುಂದಾಪುರ ನಗರಕ್ಕೆ ಪುರಸಭೆ ವ್ಯಾಪ್ತಿಗೆ ಜಪ್ತಿ ಎಂಬಲ್ಲಿಂದ ಶುದ್ಧ ನೀರು ಪೈಪ್‌ಲೈನ್‌ ಮೂಲಕ ಬರುತ್ತದೆ. ಪೈಪ್‌ಲೈನ್‌ ಹಾದು ಹೋಗುವ ಐದಾರು ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ಇದೇ ಬೇಡಿಕೆ ಹಾಲಾಡಿ, ಶಂಕರನಾರಾಯಣ ಮೊದಲಾದ 10 ಗ್ರಾಮಗಳದ್ದು. ವಾರಾಹಿ ನದಿಯಿಂದ ನೀರೆತ್ತಿ ಬಜೆಗೆ ಪೂರೈಸಿ, ನೀರು ಶುದ್ಧಗೊಳಿಸಿ ಅಲ್ಲಿಂದ ಉಡುಪಿಗೆ ನೀರುಣಿಸಲು ಯೋಜನೆ ಸಿದ್ಧವಾಗಿದೆ. ಆದರೆ ವಾರಾಹಿ ನೀರನ್ನು ಹಾಲಾಡಿಯ ಭರತ್ಕಲ್‌ನಲ್ಲಿಯೇ ಶುದ್ಧ ಮಾಡಿ ಪೈಪ್‌ಲೈನ್‌ ಹಾದು ಹೋಗುವ 10 ಗ್ರಾಮಗಳ ಜನತೆಗೂ ಶುದ್ಧ ನೀರು ಕೊಡಿ  ಎನ್ನುವುದು ಊರವರ ಬೇಡಿಕೆ. ಇದಕ್ಕೆ ಸರಕಾರ ಸ್ಪಂದಿಸಿಲ್ಲ. ಬದಲಾಗಿ ಖರ್ಚಾಗುತ್ತದೆ ಎಂದಿದೆ. ಹೀಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ವರ್ಷವರ್ಷ ಖರ್ಚು ಮಾಡುವ ಸರಕಾರ ಏಕಗಂಟಿನಲ್ಲಿ ಒಂದಷ್ಟು ಹಣ ಒದಗಿಸಿ ಜನರಿಗೆ ಶಾಶ್ವತ ಕುಡಿಯಲು ಶುದ್ಧ ನೀರು ಕೊಡಲು ಹಿಂದೇಟು ಹಾಕುವುದು ಸೋಜಿಗ.  

ಬಾವಿ ಇದ್ದರೂ ನೀರಿಲ್ಲ
ಆಜ್ರಿಯಲ್ಲಿ ಬಾವಿ ಇದೆ. ಆದರೆ ಎಪ್ರಿಲ್‌ನಲ್ಲಿ ಹನಿ ನೀರೂ ಇರುವುದಿಲ್ಲ. ಕಳೆದ ವರ್ಷ 91 ಸಾವಿರ ರೂ. ಖರ್ಚು ಮಾಡಿ ಟ್ಯಾಂಕರ್‌ ನೀರು ಒದಗಿಸಲಾಗಿದೆ. ಈ ಸಲ 1.5 ಲಕ್ಷ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ಅಂಪಾರಿನ ಮೂಡುಬಗೆ ಮೊದಲಾದೆಡೆ ಒಟ್ಟು 4 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಕಳೆದ ವರ್ಷ ನೀರೊದಗಿಸಲು 15.06 ಲಕ್ಷ ರೂ. ಖರ್ಚಾಗಿದೆ. ಗಂಗೊಳ್ಳಿ ಶಾಂತೇರಿಕೇರಿ ಜನತಾಕಾಲನಿ ನೀರಿನ ಬರ ಎದುರಿಸುವ ಪ್ರದೇಶವಾಗಿದೆ. ಗುಜ್ಜಾಡಿ ಜನತಾ ಕಾಲನಿ, ಮಂಕಿ ಪ್ರದೇಶದಲ್ಲೂ ನೀರಿಗಾಗಿ ಹಾಹಾಕಾರ ಇರುತ್ತದೆ. ಹಕ್ಲಾಡಿಯಲ್ಲಿ ನೀರಿನ ಒರತೆಯಿಲ್ಲ. ಹಾಗಾಗಿ ಕಳೆದ ವರ್ಷ 4.5 ಲಕ್ಷ ರೂ. ನೀರು ಒದಗಿಸಲು ಖರ್ಚಾಗಿದೆ. ಹಳ್ಳಿಹೊಳೆ, ಕೂಡಿಗೆ, ಹಟ್ಟಿಯಂಗಡಿ, ಕಟ್‌ಬೆಲೂ¤ರು, ಉಳ್ಳೂರು, ಎಡಮೊಗೆ, ಹೇರಂಜಾಲು, ಬಳುRಂಜೆ, ಗುಲ್ವಾಡಿ, ಕೆರಾಡಿ, ಜಡ್ಕಲ್‌, ಕಿರಿಮಂಜೇಶ್ವರದ ಗಾಂಧಿನಗರದಲ್ಲಿ, ಕೊಲ್ಲೂರಿನ ಕಲ್ಯಾಣಗುಡ್ಡೆಯಲ್ಲಿ, ಮರವಂತೆಯ ಜನತಾ ಕಾಲನಿಯಲ್ಲಿ, ನಾಡ ಪಂಚಾಯತ್‌ನ 4 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಹಾಲಾಡಿಯಲ್ಲೂ ಎಪ್ರಿಲ್‌ನಲ್ಲಿ ಸಮಸ್ಯೆ ತೀವ್ರವಾಗುತ್ತದೆ. 

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ.  ನಿಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು.ವಾಟ್ಸಾಪ್‌ ನಂಬರ್‌ 91485 94259

Advertisement

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next