Advertisement

ತಣಿಗೆಹಳ್ಳಿ ಲಂಬಾಣಿ ತಾಂಡಾದಲ್ಲಿ ಆಂಜನೇಯ ಗ್ರಾಮ ವಾಸ್ತವ್ಯ

03:45 AM Jun 26, 2017 | Team Udayavani |

ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಅವಧಿಪೂರ್ವ ಅಂದರೆ ಡಿಸೆಂಬರ್‌ ಒಳಗೆ ಚುನಾವಣೆ ನಡೆಯುವುದಿಲ್ಲ. ನಮ್ಮ ಸರ್ಕಾರದ ಅವಧಿ 2018ರ ಮೇ 13ರವರೆಗೆ ಇದೆ. ಅಲ್ಲಿಯವರೆಗೂ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿರಲಿದೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಹೇಳಿದರು.

Advertisement

ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಗ್ರಾಪಂ ವ್ಯಾಪ್ತಿಯ ತಣಿಗೆಹಳ್ಳಿ ಲಂಬಾಣಿ ತಾಂಡಾದ ಟಿ.ಆರ್‌. ಈಶ್ವರ ನಾಯ್ಕ ಅವರ ಮನೆಯಲ್ಲಿ ಭಾನುವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆದಿವಾಸಿ, ಅರಣ್ಯವಾಸಿಗಳು ಹಾಗೂ ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ನಾನು ಸಹ ನೋವುಂಡವನು. ಜನರ ನೋವು ನಿವಾರಣೆಗಾಗಿಯೇ ಈ ಕಾರ್ಯಕ್ಕೆ ಮುಂದಾಗಿದ್ದೇನೆಯೇ ವಿನಃ ಗ್ರಾಮ ವಾಸ್ತವ್ಯ ರಾಜಕೀಯ ಗಿಮಿಕ್‌ ಅಲ್ಲ ಎಂದು ತಮ್ಮ ಬಗೆಗಿನ ಟೀಕೆಗೆ ತಿರುಗೇಟು ನೀಡಿದರು.

ಇದುವರೆಗೆ ರಾಜ್ಯದ 7 ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಇಲ್ಲಿ ಆದಿವಾಸಿಗಳು, ಅರಣ್ಯವಾಸಿಗಳು, ಜೇನುಕುರುಬರು, ಕಾಡು ಕುರುಬರು, ಸುಡಗಾಡು ಸಿದ್ಧರು ಸೇರಿ ಮುಖ್ಯವಾಹಿನಿಯಿಂದ ದೂರ ಇರುವ ಸಮುದಾಯಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.

ನಾನು ಕ್ಷೇತ್ರ ಬದಲಾವಣೆ ಮಾಡುತ್ತಿದ್ದೇನೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಶಾಸಕ, ಸಚಿವ ಸ್ಥಾನ ನೀಡಿ ರಾಜಕೀಯ ಪುನರ್‌ಜನ್ಮ ನೀಡಿದ ಹೊಳಲ್ಕೆರೆ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಘೋಷಿಸಿದರು.

Advertisement

ನಾನು ಪ್ರವಾಸ ಮಾಡಿದ ರಾಯಚೂರು, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ದಾವಣಗೆರೆಯ ಮಾಯಕೊಂಡ, ತುಮಕೂರಿನ ಪಾವಗಡ, ಬೆಂಗಳೂರಿನ ಕಿಕ್ಕಸಂದ್ರ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡವಿದೆ. ಆದರೆ ಹೊಳಲ್ಕೆರೆ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೊಳಲ್ಕೆರೆ ಕ್ಷೇತ್ರದ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಡಿಸೆಂಬರ್‌ ಅಥವಾ ಜನವರಿ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಬಿ. ದುರ್ಗ ಗ್ರಾಪಂ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. 1.80 ಕೋಟಿ ರೂ. ವೆಚ್ಚದಲ್ಲಿ ತಣಿಗೆಹಳ್ಳಿಯಿಂದ ಲಂಬಾಣಿ ತಾಂಡಾಕ್ಕೆ ಹೈಟೆಕ್‌ ರಸ್ತೆ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮೂಲ ಸೌಕರ್ಯ ದಿಂದ ವಂಚಿತವಾಗಿರುವ ತಾಂಡಾಕ್ಕೆ ಸಾರಿಗೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಸಚಿವರ ಗ್ರಾಮ ವಾಸ್ತವ್ಯದ ದಿನಚರಿ
ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಗ್ರಾಮದಿಂದ ಸಮಾಜಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಅವರ ಗ್ರಾಮ ವಾಸ್ತವ್ಯದ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಗ್ಗೆ 11:30ರಿಂದ 12 ಗಂಟೆ ಸುಮಾರಿಗೆ ಬಿ. ದುರ್ಗ ಗ್ರಾಮಕ್ಕೆ ಆಗಮಿಸಿದ ಸಚಿವರು, ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕಲ್ಲವ್ವನಾಗತಿಹಳ್ಳಿ, ಹಿರೇಕಂದವಾಡಿ ಗ್ರಾಮಗಳಿಗೂ ಭೇಟಿ ನೀಡಿ ಮಧ್ಯಾಹ್ನ 3:30 ಗಂಟೆಗೆ ತಣಿಗೆಹಳ್ಳಿಯ ಲಂಬಾಣಿ ತಾಂಡಾಕ್ಕೆ ಆಗಮಿಸಿದರು.

ಪತ್ನಿ ವಿಜಯಮ್ಮ, ಸಂಸದ ಬಿ.ಎನ್‌. ಚಂದ್ರಪ್ಪ ಹಾಗೂ ಅಧಿಕಾರಿಗಳೊಂದಿಗೆ ಆಗಮಿಸಿದ ಸಚಿವರಿಗೆ ಲಂಬಾಣಿ ಸಂಪ್ರದಾಯದಂತೆ ಭವ್ಯ ಸ್ವಾಗತ ಕೋರಲಾಯಿತು. ನಂತರ ಮೆರವಣಿಗೆಯಲ್ಲಿ ಸಾರ್ವಜನಿಕ ಸಭೆಯ ಸ್ಥಳವಾದ ಗ್ರಾಮದ ಸರ್ಕಾರಿ ಶಾಲೆ ಆವರಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸಚಿವ ಆಂಜನೇಯ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಸಾರ್ವಜನಿಕ ಸಭೆ ಮುಗಿದ ಬಳಿಕ ಸಚಿವ ಆಂಜನೇಯ, ಗ್ರಾಮ ವಾಸ್ತವ್ಯ ಮಾಡಲಿದ್ದ ಈಶ್ವರ ನಾಯ್ಕ ಮನೆಗೆ ತೆರಳಿ ಮನೆಯವರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಈಶ್ವರ ನಾಯ್ಕ ಮನೆಯಲ್ಲಿ ರಾಗಿ ಮುದ್ದೆ, ಬಸ್ಸಾರು, ಶೇಂಗಾ ಚಟ್ನಿ, ಅನ್ನ ಸಾಂಬಾರ್‌ ಸವಿದು ನಿದ್ದೆಗೆ ಜಾರಿದರು.

Advertisement

Udayavani is now on Telegram. Click here to join our channel and stay updated with the latest news.

Next