Advertisement

“ಟಾಂಗಾ’ಯಣ

12:04 PM Jul 07, 2018 | |

“ಬೆಂಗಳೂರಿನ ಬೀದಿಗಳಲ್ಲಿ ಓಡಾಡುವಾಗ, ಟಕ್ಕು ಟಕ್ಕು ಟಕ್ಕು ಎನ್ನುವ ಸದ್ದು ಕೇಳುವುದೇ ಒಂದು ಪುಳಕ. ಆ ಸದ್ದು ಕಿವಿಗೆ ಬಿದ್ದಾಗಲೆಲ್ಲ, ಯಾರೋ ತಬಲ ಬಾರಿಸುತ್ತಿದ್ದಾರೆನ್ನುವ ಭಾವ ಮೈಮನದಾಳಕ್ಕೆ ಇಳಿಯುತ್ತದೆ!’- “ಸಣ್ಣಕತೆಗಳ ಜನಕ’ ಮಾಸ್ತಿಯವರಿಗೆ ಬೆಂಗಳೂರಿನ ಬೀದಿಯಲ್ಲಿ ಟಾಂಗಾಗಳ ಸದ್ದು ಹೀಗೆ ರೋಮಾಂಚನ ಹುಟ್ಟಿಸುತ್ತಿತ್ತಂತೆ. ಆದರೆ, ಅದೇ ಸದ್ದು ಇಂದೇನಾದರೂ ನಿಮ್ಮ ಕಿವಿಗೆ ಬಿದ್ದಿದೆಯಾ?

Advertisement

ನಿಮ್ಮ ಕಿವಿಯಲ್ಲಿ ದಾಖಲಾದ ಅಷ್ಟೂ ಕ್ಯಾಸೆಟ್ಟುಗಳನ್ನು ಒಮ್ಮೆಲೆ ರಿವೈಂಡ್‌ ಮಾಡಿ ಕೇಳಿ, “ಟಕ್ಕು ಟಕ್ಕು ಟಕ್ಕು’ ಸದ್ದು ಕೇಳಿಸುವುದೇ ಇಲ್ಲ. ಬೀದಿಯಲ್ಲಿನ ವೆಹಿಕಲ್ಲುಗಳ ಹಾರನ್ನುಗಳಷ್ಟೇ, ಕಿವಿ ತಮಟೆಗೆ ನಡುಕ ಹುಟ್ಟಿಸಿ, ತಣ್ಣಗಾಗಬಹುದಷ್ಟೇ. ಬೆಂಗಳೂರಿನ ಪ್ರತಿ ರಸ್ತೆಗಳಲ್ಲಿ ಆಗ ಟಾಂಗಾವಾಲಾಗಳ ಬಿಸುಪು ಹಾಗಿತ್ತು. ಸ್ವತಃ ಕುದುರೆ ಸವಾರರಾಗಿದ್ದ ಮಾಸ್ತಿಯವರಿಗೆ ಅದು ಸಂಗೀತದಂತೆಯೇ ಕೇಳಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

ಆದರೆ, ಇಂದು ಈ ಬೀದಿಬದಿಯ ಸಂಗೀತ ಯಾರ ಕಿವಿಗೂ ಬೀಳುತ್ತಿಲ್ಲ. ಸಿಲಿಕಾನ್‌ ಸಿಟಿಯಲ್ಲಿ ಟಾಂಗಾಗಳೇ ಅತಿವಿರಳ. ಬಣ್ಣ ಬಣ್ಣ ಚಿತ್ತಾರದ ಗಾಡಿಯ ಕಮಾನು, ಟಾಂಗಾವಾಲನ ಕೈಯಲ್ಲಿನ ಲಗಾಮು, ಬಳುಕುವ ಚಾಟಿ, ಕುದುರೆಯ ಖುರಪುಟಗಳ ನಾದ… ಇವೆಲ್ಲವೂ ಬಹುತೇಕ ಮರೆಯಾಗಿದೆ. ಆದರೆ, ಬೆಂಗಳೂರಿನ ಅಲ್ಲಲ್ಲಿ ಇವು ಪ್ರದರ್ಶನದಲ್ಲಿ ಇಟ್ಟ ಗೊಂಬೆಗಳಂತೆ ಇವು ನಿಂತಿರುತ್ತವೆ. ಶಿವಾಜಿ ನಗರ, ಮಲ್ಲೇಶ್ವರಂ, ಪ್ಯಾಲೇಸ್‌ ಗುಟ್ಟಹಳ್ಳಿ, ಚಾಮರಾಜಪೇಟೆ, ಟಿಪ್ಪು ಫೋರ್ಟ್‌, ಶೇಷಾದ್ರಿಪುರಂಗಳ ಕೆಲವೆಡೆ ಈ ಟಾಂಗಾವಾಲಾಗಳನ್ನು ಕಾಣಬಹುದು.

ಯಾರೂ ಹತ್ತೋದಿಲ್ಲ…: 70-80ರ ದಶಕದಲ್ಲಿ ಬೆಂಗಳೂರಿನಲ್ಲಿ ಟಾಂಗಾಗಳದ್ದೇ ಸಾಮ್ರಾಜ್ಯ. ಆಗಿನ್ನೂ ಆಟೋಗಳು ಅಷ್ಟೇನೂ ರಸ್ತೆಗೇ ಇಳಿದಿರಲಿಲ್ಲ. ಜನಸಾಮಾನ್ಯರು ಒಂದೋ ಬಸ್ಸಿನಲ್ಲಿ, ಇಲ್ಲವೇ ಟಾಂಗಾಗಳಲ್ಲಿ ಸಂಚರಿಸುತ್ತಿದ್ದರು. ಈ ಮಹಾನಗರಿಯ ಉಸಿರು ಆಗ ಟಾಂಗಾವೇ ಆಗಿತ್ತು. ಆದರೆ, ಈಗ ಕಾಲ ಉಲ್ಟಾ ಆಗಿದೆ. ಆಟೋಗಳ ಸಾಮ್ರಾಜ್ಯದಲ್ಲಿ ಟಾಂಗಾಗಳನ್ನು ಯಾರೂ ಕೇಳುತ್ತಲೇ ಇಲ್ಲ, ಹತ್ತುತ್ತಲೂ ಇಲ್ಲ. ಬರುಬರುತ್ತಾ ನಗರದ ಟ್ರಾಫಿಕ್ಕೂ ಹೆಚ್ಚಾಗಿ, ಕುದುರೆಗಳನ್ನು ಓಡಿಸುವುದೇ ಕಷ್ಟದ ಮಾತಾಯಿತು.

ಟಾಂಗಾ ಮಾರಿ ಆಟೋ ಸ್ಟೀರಿಂಗ್‌ ಹಿಡಿದರು…: ಟಾಂಗಾಗಳು ಸಿಟಿಸಂಸ್ಕೃತಿಯಿಂದ ದೂರವಾಗುತ್ತಿದ್ದಂತೆ, ಟಾಂಗಾವಾಲಾಗಳು ತಾವು ಹೊಟ್ಟೆಪಾಡಿಗೆ ನಂಬಿದ್ದ ವೃತ್ತಿಗೆ ತಿಲಾಂಜಲಿ ಹಾಡಲು ಶುರುಮಾಡಿದರು. “1990- 2000 ನಡುವೆ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಟಾಂಗಾವಾಲಾಗಳು ಲೋನ್‌ಗಳನ್ನು ಪಡೆದು, ಆಟೋ ಖರೀದಿಸತೊಡಗಿದರು. ಟಾಂಗಾಗಳನ್ನು ಮಾರಿದರು.

Advertisement

ದೈನಂದಿನ ಹೊಟ್ಟೆಪಾಡಿಗೆ ಆಟೋವೇ ಆಸರೆಯಾಯಿತು. ದುಡಿಮೆಯು ದುಪ್ಪಟ್ಟಾಯಿತು’ ಎನ್ನುತ್ತಾರೆ ಶಿವಾಜಿನಗರದ ಟಾಂಗಾವಾಲಾ ಅಯೂಬ್‌ ಖಾನ್‌. ಶಿವಾಜಿನಗರದ ಬಂಬೂಬಜಾರ್‌ ಬಳಿಯ ಟಾಂಗಾ ಸ್ಟಾಂಡ್‌ನ‌ಲ್ಲಿ ಮೆಹಬೂಬ್‌ ಸಾಬ್‌, ಇಮ್ರಾನ್‌ ಮತ್ತು ಸರ್ದಾರ್‌ ಈಗಲೂ ತಮ್ಮ ವಂಶಪಾರಂಪರ್ಯ ವೃತ್ತಿಯನ್ನು ನಡೆಸುತ್ತಿದ್ದಾರೆ.

ಇಂದು ರಂಜನೆಗೆ ವಸ್ತು…: ಇತ್ತೀಚೆಗೆ ಟೆಕ್ಕಿಯೊಬ್ಬ ತನ್ನ ಕೊನೆಯ ದಿನದ ಡ್ನೂಟಿಗೆ ಕುದುರೆಯಲ್ಲಿ ಕುಳಿತು ಕಚೇರಿಗೆ ತೆರಳಿದ್ದ. ಈ ಮೂಲಕ ಬೆಂಗಳೂರಿನಲ್ಲಿ ಟ್ರಾಫಿಕ್‌ ಹೆಚ್ಚುತ್ತಿರುವುದಕ್ಕೆ ಪ್ರತಿಭಟನೆ ಸೂಚಿಸಿದ್ದ. ಕುದುರೆ ಇಂದು ಇಂಥ ಕಾರಣಕ್ಕಾಗಿಯೇ ಇಲ್ಲಿ ಸುದ್ದಿಯಾಗುತ್ತಿದೆ. ಅದು ಬಿಟ್ಟರೆ, ಭಾನುವಾರದಂದು ಕಬ್ಬನ್‌ ಪಾರ್ಕ್‌ಗೆ ಹೋದರೆ, ಅಲ್ಲೂ ಒಂದಿಷ್ಟು ಟಾಂಗಾಕ್ಕೆ ಬಳಸಿಕೊಳ್ಳುವ ಕುದುರೆಗಳನ್ನು ಕಾಣಬಹುದು.

ಆ ಕುದುರೆಗಳ ಜೊತೆ ಛೋಟುಗಳೂ ಇರುತ್ತಾರೆ. ಅವರಿಗೆ ನಲ್ವತ್ತೋ, ಐವತ್ತೋ ರೂ. ಕೊಟ್ಟರೆ, ಮಕ್ಕಳಿಗೆ ಒಂದು ರೌಂಡ್‌ ಹೊಡೆಸುತ್ತಾರೆ. ಆ ಕುದುರೆಗಳ ಮೇಲೆ ಕುಳಿತು ಸೆಲ್ಫಿಯನ್ನೂ ಹೊಡೆಸಿಕೊಳ್ಳಬಹುದು. ಅರಮನೆ ಮೈದಾನ ಹಾಗೂ ಇತರೆ ಐತಿಹಾಸಿಕ ಸ್ಥಳಗಳಲ್ಲಿ ಟಾಂಗಾ ಗಾಡಿಗಳನ್ನು ವಿನೋದ ಸವಾರಿಗೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ನಿರ್ಮಾಪಕರು, ಸಿನಿಮಾ ಚಿತ್ರೀಕರಣಕ್ಕೆ ಟಾಂಗಾಗಳನ್ನು ಒಯ್ದಾಗ, ಟಾಂಗಾವಾಲಾಗಳಿಗೆ ಬಂಪರ್‌.

ಶ್ರಮಜೀವಿಗಳು…: ಕಬ್ಬಿಣದ ರಾಡ್‌ಗಳು, ಪೈಪುಗಳು, ಫ್ಲೈವುಡ್‌ಗಳು ಮತ್ತು ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕೊಂಡೊಯ್ಯಲು ಟಾಂಗಾಗಳು ಬಳಕೆಯಾಗುತ್ತಿವೆ. ಗೂಡ್ಸ್‌ ರಿಕ್ಷಾಗಳು ಅಧಿಕ ಹಣ ಕೇಳುವುದರಿಂದ ಕೆಲವರು ಟಾಂಗಾಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. “ಟಾಂಗಾವನ್ನು ಓಡಿಸುವುದರಿಂದಲೇ ನಮ್ಮ ಸಂಸಾರವನ್ನು ನಡೆಸುತ್ತಿದ್ದೇವೆ.

ಇವು ಇಲ್ಲದಿದ್ದರೆ ನಾವೇ ಕೂಲಿಗಳಾಗಿ, ತುಂಬಾ ದೂರದವರೆಗೆ ಈ ಸರಕುಗಳನ್ನು ಹೊತ್ತುಕೊಂಡು ಹೋಗಬೇಕಿತ್ತು’ ಎನ್ನುತ್ತಾರೆ ಟಾಂಗಾವಾಲ ಇಮ್ರಾನ್‌.    ಬೇರೆ ಬೇರೆ ಕಾರಣಕ್ಕೆ ಬೆಂಗಳೂರು ಬಂದ್‌ ಆದಾಗ, ಟಾಂಗಾಗಳಿಗೆ ಹೆಚ್ಚು ಬೇಡಿಕೆಯಂತೆ. ಇಂಥ ಸಂದರ್ಭಗಳಲ್ಲಷ್ಟೇ, ಮಾಸ್ತಿಯವರು ಕೇಳಿದಂಥ “ಟುಕ್ಕು ಟುಕ್ಕು’ ಸಂಗೀತ ನಿಮ್ಮೊಳಗೂ ಪ್ರತಿಧ್ವನಿಯಾಗುವುದು.

ಮದುವೆಗೆ ಬೇಕು, ಎತ್ತರದ ಕುದುರೆ!: ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಸಿರಿವಂತರ, ಮಾರ್ವಾಡಿ ಜನಾಂಗದವರ ಮದುವೆ ಇದ್ದರಂತೂ ಟಾಂಗಾವಾಲಾಗಳಿಗೆ ಸುಗ್ಗಿ. ಮದುವೆ ದಿಬ್ಬಣಕ್ಕೆ ಟಾಂಗಾಗಳನ್ನು ಬಾಡಿಗೆಗೆ ಕಳಿಸಿದರೆ, ಒಂದಿಷ್ಟು ಪಗಾರ ಕೈ ಸೇರುತ್ತೆ. “ಮಾರ್ವಾಡಿ ಸೇಠುಗಳ ಮದುವೆಗಳಿಗೆ ಎತ್ತರದ ಬಿಳಿ ಕುದುರೆಯನ್ನು ಬಾಡಿಗೆಗೆ ನೀಡುತ್ತೇವೆ. ಮೆರವಣಿಗೆಯ ಸಾರೋಟುಗಳಲ್ಲಿ ಎರಡು ಕುದುರೆಗಳನ್ನು ಬಳಸುತ್ತಾರೆ. ಟಾಂಗಾ ಕೂಲಿಗಿಂತ ಇವು ನಮಗೆ ಹೆಚ್ಚು ದುಡಿಮೆಯನ್ನು ನೀಡುತ್ತವೆ’ ಎನ್ನುತ್ತಾರೆ ಟಾಂಗಾವಾಲ ಇಮ್ರಾನ್‌.

ಎಲ್ಲೆಲ್ಲಿ ಎಷ್ಟೆಷ್ಟು ಟಾಂಗಾ?: ಬೆಂಗಳೂರು ನಗರದ ವಿವಿಧ ಜಟಕಾ ಸ್ಟಾಂಡ್‌ಗಳಲ್ಲಿ ಒಟ್ಟು 84 ಟಾಂಗಾ ಬಂಡಿಗಳಿವೆ. ಶಿವಾಜಿನಗರ 3, ಪ್ಯಾಲೇಸ್‌ ಗುಟ್ಟಹಳ್ಳಿ 20, ಮಲ್ಲೇಶ್ವರಂ 11, ಚಾಮರಾಜಪೇಟೆ 12, ಕೆ.ಆರ್‌. ಮಾರುಕಟ್ಟೆ 18, ಶೇಷಾದ್ರಿಪುರಂ 13 ಮತ್ತು ಟಿಪ್ಪು ಫೋರ್ಟ್‌ನಲ್ಲಿ 7.

ಟಾಂಗಾವನ್ನು ನಾವು ಪೂರ್ವಜರ ಕಾಲದಿಂದಲೂ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿದ್ದೇವೆ. ನನ್ನ ಅನೇಕ ಗೆಳೆಯರು ಟಾಂಗಾ ಮಾರಿ, ಆಟೋ ಹಿಡಿದಿದ್ದಾರೆ. ಈ ಕುದುರೆಗಳನ್ನು ಹುಟ್ಟಿನಿಂದಲೂ ನೋಡಿಕೊಂಡು ಬೆಳೆದಿದ್ದು, ಆ ವೃತ್ತಿಯನ್ನು ಮುಂದೆಯೂ ಕೈಬಿಡುವುದಿಲ್ಲ.
-ಅಯೂಬ್‌ಖಾನ್‌, ಟಾಂಗಾವಾಲಾ

ಅಂಕಿ- ಸಂಖ್ಯೆ
84- ಬೆಂಗಳೂರಿನಲ್ಲಿರುವ ಒಟ್ಟು ಟಾಂಗಾಗಳು
600- ಟಾಂಗಾವಾಲಾನ ಒಂದು ದಿನದ ದುಡಿಮೆ (ರೂ.)
3,500- ಒಂದು ಕುದುರೆ ನಿರ್ವಹಣೆಗೆ ತಗುಲುವ ವೆಚ್ಚ (ರೂ.)
55,000- ಚಿಕ್ಕಗಾಡಿಗೆ ಕಟ್ಟುವಂಥ ಕುದುರೆಯ ಬೆಲೆ (ರೂ.)
5,00,000- ದೊಡ್ಡ ಸಾರೋಟಿಗೆ ಬಳಕೆಯಾಗುವ ಕುದುರೆಯ ಬೆಲೆ (ರೂ.)

* ಭರತ ದಂದೂರು

Advertisement

Udayavani is now on Telegram. Click here to join our channel and stay updated with the latest news.

Next