ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ 2ನೇ ಸುತ್ತಿನ ಮಾತುಕತೆಯ ನಂತರ ‘ತಾಂಡವ್’ ವೆಬ್ ಸೀರೀಸ್ ತಂಡ ಕೊನೆಗೂ ವಿವಾದದ ಕಿಡಿ ಹೊತ್ತಿಸಿದ ದೃಶ್ಯವನ್ನು ತೆಗೆದುಹಾಕಿದೆ.
ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಎದುರಿಸಿ, ಬಾಲಿವುಡ್ ನಟ ಸೈಫ್ ಆಲಿಖಾನ್ ಅಭಿನಯದ ತಾಂಡವ್ ವೆಬ್ ಸೀರೀಸ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ತಾಂಡವ್ ತಂಡ ಕೂಡ ಬಹಿರಂಗವಾಗಿ ಕ್ಷಮೆಯಾಚಿಸಿತ್ತು. ಇದೀಗ ವಿವಾದದ ಕಿಡಿ ಹೊತ್ತಿಸಿದ ದೃಶ್ಯವನ್ನು ವೆಬ್ ಸೀರೀಸ್ ನಿಂದಲೇ ತೆಗೆದುಹಾಕುವ ಮೂಲಕ ಪ್ರಕರಣ ಸುಖಾಂತ್ಯವಾದಂತಾಗಿದೆ.
‘ತಾಂಡವ್ ನಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡಲಾಗಿದೆ’ ಎಂದು ಈ ಮೊದಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹಲವಾರು ದೂರುಗಳು ಬಂದಿದ್ದವು. ಮಾತ್ರವಲ್ಲದೆ ವೆಬ್ ಸೀರೀಸ್ ತಂಡದ ವಿರುದ್ದ ಮುಂಬೈ, ಗ್ರೇಟರ್ ನೊಯ್ಡಾ, ಲಕ್ನೋ ಈ ಮೂರು ಪ್ರಮುಖ ನಗರಗಳ ಪೊಲೀಸ್ ಠಾಣೆಗಳಲ್ಲಿ ಎಫ್ ಐ ಆರ್ ಕೂಡ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಹಲವರು ತಾಂಡವ್ ವಿರುದ್ದ ಆಕ್ರೋಶ ಹೊರಹಾಕಿದ್ದರು.
ಈ ಕುರಿತು ಮಾಹಿತಿ ನೀಡಿದ ತಾಂಡವ್ ವೆಬ್ ಸೀರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಫರ್, ವಿವಾದದ ದೃಶ್ಯವನ್ನು ಈಗಾಗಲೇ ತೆಗೆದುಹಾಕಲಾಗಿದೆ. ಈ ದೇಶದ ಜನರ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ. ನಮಗೆ ಯಾವುದೇ ವ್ಯಕ್ತಿ, ಜಾತಿ, ಸಮುದಾಯ, ಧರ್ಮ, ಜನಾಂಗ, ಧಾರ್ಮಿಕ ನಂಬಿಕೆ, ಮುಂತಾದವುಗಳಿಗೆ ಧಕ್ಕೆತರುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.