ತಾಂಬಾ: ಕಳೆದ ಬಾರಿ ಉತ್ತಮ ಬೆಲೆಯಿತ್ತು ಎಂಬ ಕಾರಣಕ್ಕೆ ಈ ಭಾಗದ ಒಣ ಬೇಸಾಯ ಹೊಂದಿರುವ ಅನೇಕ ರೈತರು ಈ ಬಾರಿ ಹತ್ತಿಬೆಳೆದಿದ್ದರು ಆದರೆ ಅದಕ್ಕೀಗ ಕೆಂಪುರೋಗ ಭಾದೆ ಕಾಡುತ್ತಿರುವುದರಿಂದ ಈ ಭಾಗದ ಅನ್ನದಾತರು ಕಂಗಾಲಾಗಿದ್ದಾರೆ. ಇದರಿಂದ ಹತ್ತಿ ಬೆಳೆದ ರೈತನಿಗೆ ಮಾತ್ರ ಹಣ ಸಿಗುವ ಬದಲು ಹತ್ತಿಕಟ್ಟಿಗೆ ದೊರೆಯುವಂತಾಗಿದೆ.
ತಾಂಬಾ ಗ್ರಾಮ ಸೇರಿದಂತೆ ಕೆಂಗನಾಳ, ಶಿರಕನಳ್ಳಿ, ಶಿವಪುರ, ಬೆನಕನಳ್ಳಿ, ಅಥರ್ಗಾ, ತಡವಲಗಾ, ಹಿರೇರೂಗಿ, ಬೋಳೆಗಾಂವ, ಹಿರೇಮಸಳಿ, ಗೊರನಾಳ, ತೆನ್ನಿಹಳ್ಳಿ, ಬಂಥನಾಳ, ವಾಡೆ, ಸುರಗಿಹಳ್ಳಿ, ಚಿಕ್ಕರುಗಿ, ಗಂಗನಳ್ಳಿ ಸೇರಿದಂತೆ ಅನೇಕ ಗ್ರಾಮಗಳ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳದಿದ್ದಾರೆ.
ಹತ್ತಿ ಕಾಯಿ ಕಟ್ಟುವ ಸಮಯದಲ್ಲಿ ಬೆಳೆಗೆ ಕೆಂಪುರೋಗ ಭಾದೆ ತಟ್ಟಿದೆ. ಗಿಡದ ತುಂಬಾ ಜೋತಾಡುತ್ತಿದ್ದ ಕಾಯಿಗಳು ರೋಗದಿಂದ ಉದುರಿವೆ. ಕಾಲಕ್ರಮೇಣ ಗಿಡ ಒಣಗಿದ್ದು ನೂರಾರು ಎಕರೆ ಜಮೀನಿನಲ್ಲಿ ನಿರೀಕ್ಷಿತ ಪ್ರಮಾಣದ ಇಳುವರಿ ಕಾಣದಂತಾಗಿದೆ. ಬೆಳೆಗಾರರಿಗೆ ಸಂಕಷ್ಟ: ರೋಗಭಾದೆಯೊಂದಿಗೆ ಬೇಡಿಕೆ ದರ ಕುಸಿತವಾಗಿರುವುದು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಎಕರೆಗೆ ಸಾವಿರಾರು ರೂ ಖರ್ಚು ಮಾಡಲಾಗಿದ್ದು ಎಕರೆಗೆ ಕಳೆದ ಬಾರಿಯಂತೆ 13 ರಿಂದ 15 ಕ್ವಿಂಟಲ್ ಬೆಳೆ ನಿರೀಕ್ಷಿಸಲಾಗಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ ನಾನಾ ಕ್ರಿಮಿ ನಾಶಕಗಳ ಸಿಂಪರಣೆ ಮಾಡಿದರೂ ಪ್ರಯೋಜನವಾಗಿಲ್ಲ.
ಹೀಗಾಗಿ ಕೇವಲ ಎರಡ್ಮೂರು ಕ್ವಿಂಟಲ್ ಮಾತ್ರ ಇಳುವರಿ ಬರುತ್ತಿದೆ ಎಂಬುದು ರೈತರ ಅಳಲಾಗಿದೆ. ಮಾರುಕಟ್ಟೆಯಲ್ಲಿ ಕಳೆದ ಬಾರಿ ಕ್ವಿಂಟಲ್‌ಗೆ 5 ಸಾವಿರಕ್ಕೂ ಅಧಿಕ ಬೆಲೆ ಇತ್ತು ಆದರೆ ಈ ಬಾರಿ 3 ರಿಂದ 4 ಸಾವಿರಕ್ಕೆ ಕುಸಿತ ಕಂಡಿದೆ. ರೋಗಭಾದೆ ಹೆಚ್ಚಾಗಿರುವ ಕಾರಣ ಹತ್ತಿಯನ್ನು ದಲ್ಲಾಳಿಗಳು ಕೊಳ್ಳಲು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಅಪಾರ ನಷ್ಟ ಬೆಳೆಗಾರರ ಹೆಗಲೇರಿದೆ.
ಹತ್ತಿ ಬೆಳೆಯಿಂದ ಕೈ ಸುಟ್ಟುಕೊಂಡುಕಂಗಾಲಾದ ರೈತರ ನೆರವಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ಬಾರಿ ರಾಜ್ಯ ಸರ್ಕಾರ 5 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ರೈತರಿಂದ ಹತ್ತಿ ಖರೀದಿಸಿತ್ತು. ಆದರೆ ಈ ಬಾರಿ ಬೆಳೆಗಾರರು ಅಪಾರ ನಷ್ಟಕ್ಕೆ ತುತ್ತಾಗಿದ್ದರು. ಇದುವರೆಗೆ ಯಾವುದೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿಲ್ಲ. ಇನ್ನಾದರೂ ಸರ್ಕಾರ ರೈತರ ಹಿತ ಕಾಪಾಡಬೇಕಿದ್ದು ಬೆಂಬಲ ಬೆಲೆ ಘೋಷಿಸಬೇಕಾಗಿದೆ.
ನಮ್ಮ 5 ಎಕರೆ ಹೊಲ್ದಾಗ ಹತ್ತಿ ಮೊದ್ಲ ಚೋಲೋ ಇತ್ತು. ಕಾಯಿ ಕುಂತ ಮ್ಯಾಲೆ ತಾಮ್ರ ರೋಗ ಬಿದ್ದು ಎಲ್ಲಾ ಹಾಳಾಗೈತಿ. ಗಿಡಕ್ ಏನಿಲ್ಲಂದ್ರು ಶಂಬೋರ್ ಮ್ಯಾಗ ಕಾಯಿ ಕೂಡಬೇಕಿತ್ತು ಈಗ ಅದರ ಅರ್ದಾನು ಇಲ್ಲ. ಯಾರ್ ಚೋಲೋ ಅಂತಾರ ಅಂತಾ ಔಷಧ ಹೊಡದ್ರೂ ಏನೂ ಆಗಿಲ್ಲ. ಏನಿಲ್ಲಂದ್ರೂ ಹದಿನೈದು ಸಾವಿರ ಮ್ಯಾಗ ಖರ್ಚು ಮಾಡೀನಿ ಆದ್ರ ಸಿಕ್ಕಿದ್ದು ಮಾತ್ರ ಹತ್ತಿ ಕಟಗಿ. ಮಲ್ಲಪ್ಪ ಪೂಜಾರಿ
-ಹತ್ತಿ ಬೆಳೆದ ಅಥರ್ಗಾ ರೈತ
-ಲಕ್ಷ್ಮಣ ಹಿರೇಕುರುಬರ