Advertisement

ಯಾರಾಗಲಿದ್ದಾರೆ ತಮಿಳುನಾಡಿನ ಅರಸ?

12:41 AM Mar 22, 2021 | Team Udayavani |

ಎಪ್ರಿಲ್‌ 6ಕ್ಕೆ ನಡೆಯಲಿರುವ ತಮಿಳುನಾಡಿನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಪ್ರಮುಖ ವಿಪಕ್ಷ ಡಿಎಂಕೆ ಭರ್ಜರಿ ಸಿದ್ಧತೆ ನಡೆಸಿವೆ. ಇವೆರಡೂ ಪಕ್ಷಗಳೂ ತಮ್ಮ ಮೈತ್ರಿ ಪಕ್ಷಗಳೊಂದಿಗಿನ ಒಪ್ಪಂದಕ್ಕೆ ಅಂತಿಮ ರೂಪ ಕೊಡುವ ಜತೆಯಲ್ಲೇ, ಅಭ್ಯರ್ಥಿಗಳ ಘೋಷಣೆ ಹಾಗೂ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿವೆ. ಇದೇ ಮೊದಲ ಬಾರಿಗೆ ನೆರೆಯ ರಾಜ್ಯದಲ್ಲಿ ಕರುಣಾನಿಧಿ ಮತ್ತು ಜಯಲಲಿತಾರಂಥ ಹೆಸರಾಂತ ನಾಯಕರಿಲ್ಲದೆಯೇ ಚುನಾವಣೆ ನಡೆಯುತ್ತಿದೆ.

Advertisement

ಮೊದಲಿಂದಲೂ ಚುನಾವಣ ಸಮಯದಲ್ಲಿ ಉಚಿತ ಕೊಡುಗೆಗಳ ಸುರಿಮಳೆ ಹರಿಸುವಲ್ಲಿ ನಿಷ್ಣಾತವಾದ ಈ ಎರಡೂ ಪಕ್ಷಗಳೂ ಈ ಬಾರಿಯೂ ಪುಕ್ಕಟೆ ಕೊಡುಗೆಗಳ ಬೃಹತ್‌ ಪಟ್ಟಿಯನ್ನೇ ಬಿಡುಗಡೆ ಮಾಡಿವೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಉಚಿತ ವಾಶಿಂಗ್‌ ಮಶೀನ್‌, ಎಲ್ಲರಿಗೂ ಮನೆ, ಸೋಲಾರ್‌ ಕುಕ್ಕರ್‌, ಶಿಕ್ಷಣ ಸಾಲ ರದ್ದತಿ, ಪ್ರತೀ ಕುಟುಂಬದಲ್ಲೂ ಒಬ್ಬ ವ್ಯಕ್ತಿಗೆ ಸರಕಾರಿ ನೌಕರಿ, ಕಾಲೇಜು ವಿದ್ಯಾರ್ಥಿಗಳಿಗೆ ಇಡೀ ವರ್ಷ ನಿತ್ಯ 2 ಜಿಬಿ ಇಂಟರ್ನೆಟ್‌ ಡೇಟಾ, ಮಹಿಳೆಯರ ಬಸ್‌ ಟಿಕೆಟ್‌ನಲ್ಲಿ 50 ಪ್ರತಿಶತ ಇಳಿಕೆಯಂಥ ಭರವಸೆಗಳನ್ನು ನೀಡಿದ್ದರೆ, ಇನ್ನೊಂದೆಡೆ ಸ್ಟಾಲಿನ್‌ ಅವರ ಡಿಎಂಕೆ ತಾನು ಅಧಿಕಾರಕ್ಕೆ ಬಂದ ತತ್‌ಕ್ಷಣ ತಮಿಳುನಾಡಿನಲ್ಲಿನ 75 ಪ್ರತಿಶತ ಉದ್ಯೋಗಗಳನ್ನು ತಮಿಳರಿಗೆ ಮೀಸಲಿಡುವ ಭರವಸೆಯ ಜತೆಯಲ್ಲೇ, ಕೋವಿಡ್‌-19ನಿಂದ ತತ್ತರಿಸಿರುವ ಪಡಿತರ ಚೀಟಿದಾರರಿಗೆ 4,000 ರೂಪಾಯಿಗಳ ಪರಿಹಾರ ಸೇರಿದಂತೆ ವಿವಿಧ ಸಾಲ ಮನ್ನಾ ಭರವಸೆಯನ್ನು ನೀಡಿದೆ.

ಸ್ಟಾಲಿನ್‌ ನೇತೃತ್ವದ ಡಿಎಂಕೆಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎನ್ನುವಂಥ ಸ್ಥಿತಿ ತಂದೊಡ್ಡಿದೆ. ಈ ಚುನಾವಣೆಯಲ್ಲಿ ಸೋತರೆ ಅದಕ್ಕೆ ವಿಪರೀತ ದುಬಾರಿಯಾಗಿ ಪರಿಣಮಿಸಿ, ಅದರ ಅಸ್ತಿತ್ವಕ್ಕೆ ಕುತ್ತು ತರಬಹುದು ಎನ್ನುವುದು ಕೆಲವರ ವಾದ. ಕಳೆದ ಹತ್ತು ವರ್ಷಗಳಿಂದ ಅಧಿಕಾರದಿಂದ ಹೊರಗೇ ಇರುವ ಡಿಎಂಕೆಗೆ ಮತ್ತೆ ಗದ್ದುಗೆಗೇರಲು ಇದು ಕೊನೆಯ ಅವಕಾಶ ಆಗಬಹುದು ಎಂದು ಕೆಲವು ಪರಿಣತರು ಹೇಳುತ್ತಾರಾದರೂ ಡಿಎಂಕೆ ಅಷ್ಟು ಸುಲಭವಾಗಿ ಮೂಲೆ ಗುಂಪಾಗುವುದಿಲ್ಲ ಎನ್ನುವುದು ಇನ್ನೊಂದು ವರ್ಗದ ವಾದ.

ನಿರೀಕ್ಷೆಯಂತೆಯೇ ಈ ಬಾರಿ ಸ್ಟಾಲಿನ್‌ ಅವರ ಮಗ ಉದಯನಿಧಿ ಸ್ಟಾಲಿನ್‌ರನ್ನು ಚುನಾವಣ ಮೈದಾನಕ್ಕೆ ಇಳಿಸಲಾಗಿದೆ. ಅವರು ಚೆಪಾಕ್‌-ಟ್ರಿಪ್ಲಿಕೇನ್‌ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದು ಚೆನ್ನೈಯಲ್ಲಿನ ಡಿಎಂಕೆಯ ಪ್ರಬಲ ಕ್ಷೇತ್ರ ಎಂದೇ ಪರಿಗಣಿತವಾಗಿದೆ. 2011 ಮತ್ತು 2016ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯ ಹಿರಿಯ ನಾಯಕ ಅಂಬಾಜಗನ್‌ ಈ ಕ್ಷೇತ್ರದಿಂದ ಅಮೋಘ ಗೆಲುವು ಸಾಧಿಸಿದ್ದರು. ಇದಷ್ಟೇ ಅಲ್ಲ, ಡಿಎಂಕೆಯ ಸ್ಥಾಪಕ ಮತ್ತು ಉದಯ ನಿಧಿಯ ಅಜ್ಜ ದಿ| ಕರುಣಾನಿಧಿಯವರೂ ಈ ಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿದ್ದರು. ಹೀಗಾಗಿ ಸ್ಟಾಲಿನ್‌ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಕ್ಷೇತ್ರದಲ್ಲೇ ತಮ್ಮ ಮಗನನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಡಿಎಂಕೆ ಈ ಬಾರಿ ತನ್ನ ಮಿತ್ರ ಪಕ್ಷಗಳಿಗೆ ಕಡಿಮೆ ಸೀಟುಗಳಲ್ಲಿ  ಸ್ಪರ್ಧಿಸಲು ಮನವೊಲಿಸಿದೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯನ್ನೂ ಹೆಚ್ಚು ಕಿರಿಕಿರಿಯಿಲ್ಲದೇ ಪೂರ್ಣಗೊಳಿಸಿದೆ. ಕಾಂಗ್ರೆಸ್‌ಗೆ ಅದು 25 ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದರೆ, ಇತರೆ ಮಿತ್ರ ಪಕ್ಷಗಳಿಗೆ 1ರಿಂದ 6 ಸೀಟುಗಳನ್ನು ಹಂಚಿದೆ. ಕುತೂಹಲಕರ ವಿಷಯವೆಂದರೆ, ವೈಕೋ ಅವರ ಎಂಡಿಎಂಕೆ ಸಹಿತ ಇತರ ಮಿತ್ರ ಪಕ್ಷಗಳು ಡಿಎಂಕೆಯ ಚಿಹ್ನೆಯ ಮೇಲೆಯೇ ಈ ಬಾರಿ ಚುನಾವಣೆ ಎದುರಿಸಲಿವೆ. ಡಿಎಂಕೆಯ ಬೆಂಬಲಿಗರಂತೂ ಎಐಡಿಎಂಕೆಯು ಆಂತರಿಕ ಕಲಹದಿಂದ ಕೂಡಿದ್ದು, ಇನ್ನೊಂದೆಡೆ ದಿನಕರನ್‌ ಅವರ ಎಎಂಎಂಕೆಯಿಂದಾಗಿ ಅದರ ಮತಗಳು ಹರಿದುಹಂಚಲಿವೆ ಇದರಿಂದ ಡಿಎಂಕೆಗೇ ಲಾಭವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಟಿಟಿವಿ ದಿನಕರನ್‌ ಎಎಂಎಂಕೆಯು ರಾಜಕಾರಣಿಯಾದ ವಿಜಯಕಾಂತ್‌ ಅವರ ನೇತೃತ್ವದ ಡಿಎಂಡಿಕೆ ಹಾಗೂ ಅಸಾದುದ್ದೀನ್‌ ಒವೈಸಿಯವರ ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್ನೊಂದಿಗೆ ಮೈತ್ರಿ ಮಾಡಿಕೊಂಡಿದೆಯಾದರೂ ಈ ಮೈತ್ರಿಯ ಬಗ್ಗೆ ಮತದಾರರು ಅಷ್ಟಾಗಿ ಚಿತ್ತ ಹರಿಸುತ್ತಿಲ್ಲ ಎನ್ನುವ ನಂಬಿಕೆಯಲ್ಲಿದೆ ಎಐಎಡಿಎಂಕೆ.

ಗಮನಾರ್ಹ ಅಂಶವೆಂದರೆ ಎಐಎಡಿಎಂಕೆ ಸತತ ಮೂರನೇ ಬಾರಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಾದರೆ ಇತಿಹಾಸ ರಚನೆಯಾಗಲಿದೆ. ರಾಜಕೀಯ ಪಂಡಿತರ ಪ್ರಕಾರ, ಎಐಡಿಎಂಕೆಯಲ್ಲಿ ಆಂತರಿಕ ಅಸಮಾಧಾನ ಇದೆಯಾದರೂ, ಪಕ್ಷದ ನಾಯಕತ್ವ ಪಕ್ಷವನ್ನು ಒಂದು ಗುಂಪಾಗಿ ಇಡಲು ಯಶಸ್ವಿಯಾಗಿದೆಯಂತೆ. ಇತ್ತೀಚೆಗಷ್ಟೇ ಬಂಧನದಿಂದ ಹೊರಬಂದಿರುವ ಶಶಿಕಲಾ ಎಲ್ಲಿ ಎಐಎಡಿಎಂಕೆಗೆ ತೊಂದರೆ ತಂದೊಡ್ಡಲಿದ್ದಾರೋ ಎಂಬ ಭಯ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರಿಗೆ ಇತ್ತಾದರೂ, ಈಗ ಶಶಿಕಲಾ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಘೋಷಣೆ ಮಾಡಿದ್ದಾರೆ. ಇದರಿಂದ ಎಐಎಡಿಎಂಕೆಯಂತೂ ನಿರಾಳವಾಗಿದೆ. ಇನ್ನು ಬಿಜೆಪಿಯೊಂದಿಗಿನ ಸಖ್ಯ ಎಐಎಡಿಎಂಕೆಗೆ ಲಾಭ ತಂದುಕೊಡಲಿದೆಯೇ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಪಕ್ಷದಲ್ಲೇ ಏಕರೀತಿಯ ಉತ್ತರವಿಲ್ಲ. ಬಿಜೆಪಿಯೊಂದಿಗಿನ ಮೈತ್ರಿಯಿಂದಾಗಿ ಎಐಎಡಿಎಕೆಗೆ ಲಾಭವಾಗುತ್ತಿದ್ದು, ಕೇಂದ್ರದೊಂದಿಗೂ ಹತ್ತಿರವಾಗಲು ಇದು ಸಹಕರಿಸುತ್ತದೆ ಹಾಗೂ ಪಕ್ಷಕ್ಕೆ ಹಿಂದೂ ಮತಗಳ ಬೆಂಬಲ ಹೆಚ್ಚಾಗುತ್ತಿದೆ ಎನ್ನುವುದು ಎಐಎಡಿಎಂಕೆ ಒಳಗಿನ ಮತ್ತೂಂದು ವರ್ಗದ ಪ್ರತಿವಾದ.

Advertisement

ಅತ್ತ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಬಿಜೆಪಿಯನ್ನು ತಮಿಳು ಸಂಸ್ಕೃತಿ ಹಾಗೂ ಭಾಷೆಯ ವಿರೋಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿ ತೊಡಗಿವೆ. ಎಐಎಡಿಎಂಕೆಗೆ ಮತ ನೀಡಿದರೆ, ಅದು ಬಿಜೆಪಿಗೆ ಮತ ನೀಡಿದಂತೆ ಎಂದು ಸ್ಟಾಲಿನ್‌ ಹಾಗೂ ಅವರ ಮಗ ಹೋದ ಕಡೆಯಲ್ಲೆಲ್ಲ  ವಾಗ್ಬಾಣ ಹರಿಸುತ್ತಿದ್ದಾರೆ, ಈ ಕಾರಣಕ್ಕಾಗಿಯೇ ಬಿಜೆಪಿಯೂ ತನ್ನ ಇಮೇಜ್‌ಗೆ ಈ ಅಪವಾದ ಹತ್ತಬಾರದು ಎಂದು ಪ್ರಯತ್ನಿಸುತ್ತಿದೆ. ಬಹುಶಃ ಈ ಕಾರಣಕ್ಕಾಗಿಯೋ ಏನೋ ಇತ್ತೀಚೆಗಷ್ಟೇ ತಮ್ಮ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಅವರು ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ತಮಿಳು ಕಲಿಯಲು ನನಗೆ ಆಗಲಿಲ್ಲ. ಆ ನಿಟ್ಟಿನಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರೆ, ಅದೇ ದಿನ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಸಮಾ ವೇಶದಲ್ಲಿ  ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿಶ್ವದ ಅತೀ ಪುರಾತನ ಭಾಷೆಯಾದ ತಮಿಳಿ ನಲ್ಲಿ ಮಾತನಾ ಡಲಾಗದ್ದಕ್ಕೆ ಬೇಸರವಾಗುತ್ತಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು.

ಈ ಬಾರಿ ಬಿಜೆಪಿ ಎಐಡಿಎಂಕೆಯೊಂದಿನ ಮೈತ್ರಿಕೂಟದಲ್ಲಿ ಕೇವಲ 20 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ ಎನ್ನುವುದನ್ನೂ ಗಮನಿಸಬೇಕು. ಅದರ ಖಾತೆಯಲ್ಲಿ ಕನ್ಯಾಕುಮಾರಿಯ ಲೋಕಸಭಾ ಕ್ಷೇತ್ರ(ಉಪಚುನಾವಣೆ)ವೂ ಬಂದಿದೆ.

ಇನ್ನು ಇದೇ ಮೊದಲ ಬಾರಿಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ಕಮಲ್‌ ಹಾಸನ್‌ ಅವರ ಎಂಎನ್‌ಎಂ ಪಕ್ಷ ಸ್ಪರ್ಧಿಸುತ್ತಿದ್ದು, ಅದು ಅಧಿಕಾರಕ್ಕೆ ಬರುವ ಸಾಧ್ಯತೆಯಂತೂ ಇಲ್ಲವಾದರೂ ಕೆಲವು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆಯ ಓಟ್‌ ಬ್ಯಾಂಕ್‌ನ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುವ ನಿರೀಕ್ಷೆಯಂತೂ ಇದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ವಿಚಾರಕ್ಕೇ ಬರುವುದಾದರೆ ಒಂದೆಡೆ ಬಿಜೆಪಿಯು ತಮಿಳುನಾಡು ವಿಧಾನಸಭೆಯಲ್ಲಿ ತನ್ನ ಛಾಪು ಮೂಡಿಸಿ ಎಐಎಡಿಎಂಕೆಗೆ ಇನ್ನಷ್ಟು ಹತ್ತಿರವಾಗಲು ಯೋಚಿಸುತ್ತಿದ್ದರೆ, ಅತ್ತ ಕಾಂಗ್ರೆಸ್‌ ರಾಜ್ಯದಲ್ಲಿ ತನ್ನ ಪುನರುತ್ಥಾನಕ್ಕಾಗಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ ಈ ಬಾರಿ ಚುನಾವಣೆಯಲ್ಲಿ ಚಿರಪರಿಚಿತ ವ್ಯಕ್ತಿಗಳನ್ನೇ ಮೈದಾನಕ್ಕಿಳಿಸಿದೆ. ಆದರೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಖುಷೂº ಸುಂದರ್‌, ಅಣ್ಣಾಮಲೈ ಹಾಗೂ ಶರವಣನ್‌ ಅಂಥ ಬೆರಳೆಣಿಕೆಯ ಅಭ್ಯರ್ಥಿಗಳನ್ನು ಬಿಟ್ಟರೆ ಪ್ರಮುಖ ಹೆಸರುಗಳ ಸಂಖ್ಯೆ ಕಡಿಮೆಯೇ ಇದೆ.

 

-ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next