ಚೆನ್ನೈ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಬುಧವಾರ(ಜನವರಿ19) ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಇದನ್ನೂ ಓದಿ:ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ
ಲಾವಣ್ಯ(17) ತಂಜಾವೂರಿನ ಸೈಂಟ್ ಮೈಕೇಲ್ ಗರ್ಲ್ಸ್ ಹೋಮ್ ನಲ್ಲಿದ್ದಳು. ತಡವಾಗಿ ಬೆಳಕಿಗೆ ಬಂದಿರುವ ವಿಡಿಯೋದಲ್ಲಿ, ತನ್ನನ್ನು ಹಾಸ್ಟಲ್ ನಲ್ಲಿ ನಿರಂತರವಾಗಿ ನಿಂದಿಸಲಾಗುತ್ತಿತ್ತು. ಅಲ್ಲದೇ ವಾರ್ಡನ್ ಹಾಸ್ಟೆಲ್ ನ ಪ್ರತಿಯೊಂದು ಕೋಣೆಯನ್ನು ನನ್ನಿಂದ ಸ್ವಚ್ಛಗೊಳಿಸುತ್ತಿದ್ದರು. ಅಷ್ಟೇ ಅಲ್ಲ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದರು ಎಂದು ತಿಳಿಸಿದ್ದಳು.
ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿಹೋದ ವಿದ್ಯಾರ್ಥಿನಿ ಲಾವಣ್ಯ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಜನವರಿ 9ರಂದು ಲಾವಣ್ಯ ವಾಂತಿ ಶುರುವಾಗಿತ್ತು. ಕೂಡಲೇ ಲಾವಣ್ಯ ತಂದೆ ಮುರುಗಾನಂದಮ್ ಅವರಿಗೆ ವಿಷಯ ತಿಳಿಸಲಾಗಿತ್ತು.
ಅರಿಯಾಲೂರ್ ನಿಂದ ಆಗಮಿಸಿದ್ದ ತಂದೆ ಮಗಳನ್ನು ತಂಜಾವೂಡಿನ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದರು. ಲಾವಣ್ಯಗೆ ಪ್ರಜ್ಞೆ ಮರುಕಳಿಸಿದಾಗ, ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಳು.
ವಿಷಯ ತಿಳಿದ ಬಳಿಕ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಲಾವಣ್ಯಳನ್ನು ವಿಚಾರಣೆ ನಡೆಸಿದಾಗ, ಬೋರ್ಡಿಂಗ್ ಸ್ಕೂಲ್ ನ ವಾರ್ಡ್ ನ ನೀಡುತ್ತಿದ್ದ ಕಿರುಕುಳ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ ಬಗ್ಗೆ ಮಾಹಿತಿ ನೀಡಿದ್ದಳು.
ಲಾವಣ್ಯ ನೀಡಿದ್ದ ಹೇಳಿಕೆ ಆಧಾರದ ಮೇಲೆ ವಾರ್ಡನ್ ಸಕಾಯ್ ಮರಿ (62)ಯನ್ನು ಬಂಧಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಾವಣ್ಯ ಬುಧವಾರ ಸಾವನ್ನಪ್ಪಿದ್ದಳು. ಈ ಘಟನೆ ನಂತರ ತಿರುಕಾಟ್ಟುಪಲ್ಲಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು ಎಂದು ವರದಿ ತಿಳಿಸಿದೆ.